
ಗುಜರಾತ್ ಚುನಾವಣೆ ಗೆಲ್ಲಲು ಬಿಜೆಪಿಗೆ ಆ ರಾಜ್ಯವೇ 'ಪ್ರಬಲ ಶಕ್ತಿ'
ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ನಲ್ಲಿ ಕಳೆದ ಬಾರಿಯಷ್ಟು ಬಿಜೆಪಿಗೆ ಈ ಬಾರಿ ಜಯ ಸಲೀಸಲ್ಲ. ಆಮ್ ಆದ್ಮಿ ಪಕ್ಷವು ಯಾವ ರೀತಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಬ್ಯಾಂಕಿಗೆ ಕೈಹಾಕಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿರುವ ಅಂಶ ಮತ್ತು ಇದರ ಆಧಾರದ ಮೇಲೆಯೇ ರಾಷ್ಟ್ರೀಯ ಪಕ್ಷಗಳ ಭವಿಷ್ಯ ನಿಂತಿದೆ.
ಇಪ್ಪತ್ತು ವರ್ಷಗಳ ದೇಶದ ರಾಜಕೀಯ ಸ್ಥಿತಿಗೂ ಈಗಿನ ಪರಿಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ. ಕನಿಷ್ಟ ಏಳು ರಾಜ್ಯಗಳಲ್ಲಿ ಆ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿತ್ತು ಮತ್ತು ಆ ರಾಜ್ಯಗಳ ಮುಖ್ಯಮಂತ್ರಿಗಳ ಮತಪ್ರಚಾರದ ಲಾಭವನ್ನು ಪಡೆದುಕೊಳ್ಳುತ್ತಿತ್ತು. ಎರಡು ದಶಕಗಳಿಂದ ಕಾಂಗ್ರೆಸ್ಸಿಗೆ ಗುಜರಾತ್‌ನಲ್ಲಿ ಅಧಿಕಾರಕ್ಕೇರುವುದು ಕನಸಾಗಿಯೇ ಉಳಿದಿದೆ. ಈ ಬಾರಿ ಏನಾಗಲಿದೆ ಎನ್ನುವುದಕ್ಕೆ ಡಿಸೆಂಬರ್ ಎಂಟಕ್ಕೆ ಉತ್ತರ ಸಿಗಲಿದೆ.
ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್‌ಗೆ ಬೆಂಬಲ
ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಯ ಪ್ರಮುಖ ಸಾಲಿನಲ್ಲಿ ನಿಲ್ಲುವ ಇಬ್ಬರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಬ್ಬರದ್ದೂ ಗುಜರಾತ್ ಸ್ವಂತ ರಾಜ್ಯವಾಗಿರುವುದರಿಂದ ಶತಾಯಗತಾಯು ಚುನಾವಣೆ ಗೆಲ್ಲಲು ಪ್ರಮುಖವಾಗಿ ಉತ್ತರ ಪ್ರದೇಶದ ಮುಖಂಡರ ಮೊರೆಹೋಗಿದೆ.
ಇಪ್ಪತ್ತು ವರ್ಷದ ಹಿಂದೆ ನಡೆದ ಸಬರಮತಿ ರೈಲು ವಿದ್ಯಮಾನ, ಇದಾದ ನಂತರ ನಡೆದ ಗೋಧ್ರಾ ಹಿಂಸಾಚಾರ, ಅಕ್ಷರಧಾಮ ದೇವಾಲಯದ ಮೇಲೆ ನಡೆದ ದಾಳಿ, ಇದನ್ನೇ ಮುಂದಿಟ್ಟುಕೊಂಡು, ಹಿಂದುತ್ವದ ಕಾರ್ಡ್, ಸೋನಿಯಾ ಗಾಂಧಿಯ ಇಟಲಿ ಮೂಲವನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಬಿಜೆಪಿ ಚುನಾವಣೆಗೆ ಇಳಿದಿತ್ತು. ಹಿಂದೂ ಹೃದಯ ಸಾಮ್ರಾಟ್ ಎಂದೇ ಆ ವೇಳೆ ಹೆಸರನ್ನು ಪಡೆದುಕೊಂಡಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 182 ಸ್ಥಾನಗಳ ಪೈಕಿ 127 ಸ್ಥಾನವನ್ನು ಗೆದ್ದಿತ್ತು.
ಗುಜರಾತ್ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: 20 ಲಕ್ಷ ಉದ್ಯೋಗ ಭರವಸೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ
ರಾಮ ಜನ್ಮಭೂಮಿ ಆಂದೋಲನ ಆರಂಭವಾದ ನಂತರ ಗುಜರಾತ್ ಮತ್ತು ಉತ್ತರ ಪ್ರದೇಶದ ನಡುವೆ ವಿಶೇಷ ನಂಟಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದ ನಂತರ, ಉತ್ತರ ಪ್ರದೇಶದ ಬಿಜಿಪಿ ನಾಯಕರನ್ನು ಪಕ್ಷ ನೆಚ್ಚಿಕೊಂಡಿದೆ. ಸುಮಾರು 160ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಈಗಾಗಲೇ ಗುಜರಾತ್‌ನಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಗುಜರಾತಿನ ವಾಂಕನರ್‌ನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಹಿಂದೂ ಹೃದಯ ಸಾಮ್ರಾಟ್, ಬುಲ್ಡೋಜರ್ ಬಾಬಾ ಎಂದು ಕಾರ್ಯಕರ್ತರು ಘೋಷಣೆಯನ್ನು ಕೂಗುತ್ತಿದ್ದಾರೆ.

ಪಾಟೀದಾರ್ ಸಮುದಾಯ ಹೆಚ್ಚಾಗಿರುವ ಕಡೆ ಯೋಗಿ ಆದಿತ್ಯನಾಥ್ ರೋಡ್ ಶೋ
ಗುಜರಾತ್ ಮೊಡೆಲ್ ಎಂದು ತಮ್ಮ ಭಾಷಣದುದ್ದಕ್ಕೂ ಹೇಳುತ್ತಿರುವ ಯೋಗಿ ಆದಿತ್ಯನಾಥ್, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡುವವರಿಗೆ ತಮ್ಮ ಸರಕಾರ ತೆಗೆದುಕೊಳ್ಳುವ ಕ್ರಮದಂತೇ ಇಲ್ಲೂ ಅದನ್ನು ಜಾರಿಗೆ ತರಲಾಗುವುದು ಎನ್ನುವ ಮಾತನ್ನು ಯೋಗಿ ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಮತ್ತು ಕಡಿಮೆ ಅಂತರದಲ್ಲಿ ಸೋತ ಮತ್ತು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಯೋಗಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಪಾಟೀದಾರ್ ಸಮುದಾಯ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ ಕೂಡಾ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಕೂಡಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಹಿಂದಿ ಭಾಷಿಗರು ಹೆಚ್ಚಿರುವ ಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಯಾವುದೇ ಹೊಸ ಶಕ್ತಿಯ ಉದಯವನ್ನು ತಡೆಗಟ್ಟುವುದು ನಮ್ಮ ಉದ್ದೇಶ ಎಂದು ಬಿಜೆಪಿ ನಾಯಕರು ಪರೋಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ಟಾಂಗ್ ನೀಡುತ್ತಿದ್ದಾರೆ. 2014ರಲ್ಲಿ ಗುಜರಾತ್ ರಾಜ್ಯದ ಪ್ರಮುಖ ಮುಖಂಡರನ್ನು ಬಿಜೆಪಿ, ವಾರಣಾಸಿಗೆ ಕಳುಹಿಸಿತ್ತು. ಮೋದಿ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಿಜೆಪಿ ನಾಯಕರು ತಮ್ಮತಮ್ಮ ಸಮುದಾಯದ ಮತವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಗುಜರಾತ್ ಚುನಾವಣೆಯಲ್ಲಿ ಉತ್ತರ ಪ್ರದೇಶದ ನಾಯಕರ ಪ್ರಭಾವ
ಕಳೆದ ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಬಳಸಲಾದ ತಂತ್ರಗಾರಿಕೆಯನ್ನು ಗುಜರಾತ್ ನಲ್ಲೂ ಬಿಜೆಪಿ ಮಾಡುತ್ತಿದೆ. ಪ್ರಧಾನಿ ಮೋದಿ ಸತತವಾಗಿ ಪ್ರಚಾರದಲ್ಲಿ ತೊಡಗಿಸಿಕೂಂಡಿದ್ದಾರೆ. ಆಮ್ ಆದ್ಮಿ ಪಕ್ಷ ಪ್ರಬಲ ಪೈಪೋಟಿ ನೀಡಬಹುದಾದ ಕ್ಷೇತ್ರಗಳಲ್ಲಿ ಮೋದಿ ಪ್ರಚಾರವನ್ನು ಮಾಡಿ ಹೋಗಿದ್ದಾರೆ. ಸೂರತ್ ನಗರದ ವಾರ್ಚಾದಲ್ಲಿ ಪ್ರಧಾನಿ ಹದಿನೈದು ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮುನ್ನ ಗುಜರಾತ್ ಅಸೆಂಬ್ಲಿ ಎಲೆಕ್ಷನ್ ಸೆಮಿಫೈನಲ್ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ, ಗುಜರಾತ್ ಚುನಾವಣೆಯಲ್ಲಿ ಉತ್ತರ ಪ್ರದೇಶದ ನಾಯಕರ ಪ್ರಭಾವ ಹೆಚ್ಚಾಗಿದೆ.