ಆಧಾರ್-ಮತದಾರರ ಗುರುತಿನ ಚೀಟಿ ಜೋಡಣೆ: ಕಾನೂನು ರೂಪಿಸಲು ಸಿದ್ಧತೆ
ನವದೆಹಲಿ, ಜನವರಿ 25: ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಆಧಾರ್‌ಗೆ ಪಾನ್ ಕಾರ್ಡ್ ಜೋಡಣೆ, ಮೊಬೈಲ್ ಸಿಮ್‌ಗೆ ಆಧಾರ್ ಜೋಡಣೆ, ಹೀಗೆ ಸಾಲು ಸಾಲು ಜೋಡಣಾ ಕೆಲಸಗಳಿಂದ ಹೈರಾಣಾಗಿರುವ ಜನರಿಗೆ ಮತ್ತೊಂದು ಜವಾಬ್ದಾರಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡುವ ಕಾನೂನನ್ನು ರಚಿಸಲು ಕೇಂದ್ರ ಕಾನೂನು ಸಚಿವಾಲಯ ಸಿದ್ಧತೆ ನಡೆಸಿದೆ. ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವುದನ್ನು ಪರಿಶೀಲಿಸುವ ಸಲುವಾಗಿ ಚುನಾವಣಾ ಆಯೋಗ ಆಧಾರ್ ಮತ್ತು ಚುನಾವಣಾ ಗುರುತಿನ ಚೀಟಿಗಳ ಜೋಡಣೆಗೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ ಈ ಟಿಪ್ಪಣಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಮತದಾರರ ಗುರುತಿನ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರು ಮತ್ತು ಹಾಲಿ ಮತದಾರರ ಆಧಾರ್ ವಿವರಗಳನ್ನು ಸಂಗ್ರಹಿಸಲು ತನಗೆ ಶಾಸನಬದ್ಧ ಅಧಿಕಾರ ನೀಡುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಕಾಯ್ದೆಗೆ ತಿದ್ದುಪಡಿ ತರಬೇಕು
ಇದನ್ನು ಪರಿಗಣಿಸಿರುವ ಕಾನೂನು ಸಚಿವಾಲಯ 1951ರ ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರಲು ತಯಾರಿ ನಡೆಸಿದೆ. ಹೀಗಾಗಿ ಕಾನೂನಿನಲ್ಲಿ ಮಾಡಲಾಗುವ ಬದಲಾವಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಮುಂದೆ ಇರಿಸಲಿದೆ. ಸಂಪುಟ ಅನುಮೋದನೆ ದೊರಕಿದ ಬಳಿಕ ಸಂಸತ್‌ನಲ್ಲಿ ಮಸೂದೆ ಮಂಡನೆಯಾಗಲಿದೆ.

ಸುರಕ್ಷತೆಯ ಮಾನದಂಡ
ಆಧಾರ್ ಮತ್ತು ವೋಟರ್ ಐಡಿ ಜೋಡಣೆ ಮಾಡಲು ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರುವುದು ಅಗತ್ಯವಾಗಿದೆ. ಹಾಗೆಯೇ ಅದು ಜನರ ಗೋಪ್ಯತೆಯನ್ನು ಕಾಪಾಡುವ ಬಗ್ಗೆ ಖಾತರಿಯನ್ನು ಕೂಡ ನೀಡಬೇಕಿದೆ. ಆಧಾರ್ ದತ್ತಾಂಶ ಸೋರಿಕೆ, ಮಾಹಿತಿ ಕಳವು ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತೆಯ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ.

ಜೋಡಣೆಯಿಂದ ಅನುಕೂಲವೇನು?
ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ನೋಂದಣಿಯಾಗುವುದನ್ನು ತಡೆಯಲು ಇದು ನೆರವಾಗಲಿದೆ. ಹೆಸರು ಮತ್ತು ಜನ್ಮದಿನಾಂಕ ಮುಂತಾದ ವಿವರಗಳಲ್ಲಿನ ದೋಷಗಳನ್ನು ತಡೆಗಟ್ಟುವುದು, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗುರುತಿನ ಚೀಟಿ ಹೊಂದುವುದನ್ನು ತಡೆಯುವುದು ಹಾಗೂ ಈ ಮೂಲಕ ಅಕ್ರಮ ಮತದಾನಗಳಿಗೆ ಕಡಿವಾಣ ಹಾಕುವುದು ಜೋಡಣೆಯ ಉದ್ದೇಶವಾಗಿದೆ.

ಎಚ್ ಎಸ್ ಬ್ರಹ್ಮ ಪ್ರಸ್ತಾಪ
ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಅವಕಾಶ ನೀಡಲು ಕಾನೂನಿನಲ್ಲಿ ಬದಲಾವಣೆ ತರುವಂತೆ ಚುನಾವಣಾ ಆಯೋಗ 2019ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. 2015ರ ಫೆಬ್ರವರಿಯಲ್ಲಿಯೇ ಮುಖ್ಯ ಚುನಾವಣಾ ಆಯುಕ್ತ ಎಚ್ ಎಸ್ ಬ್ರಹ್ಮ ಈ ಪ್ರಸ್ತಾವ ಮುಂದಿಟ್ಟಿದ್ದರು.

ಆಧಾರ್ ವಿವರ ನೀಡಬೇಕು
ಹೊಸದಾಗಿ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವವರು ಅದರ ಜತೆಯಲ್ಲಿಯೇ ಆಧಾರ್ ಸಂಖ್ಯೆಯನ್ನು ಸಹ ನೀಡಬೇಕು. ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿರುವವರು ಆಧಾರ್ ಸಂಖ್ಯೆಯ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ಪತ್ರದಲ್ಲಿ ಕೋರಿತ್ತು.












Click it and Unblock the Notifications