Gold Investment: ಚಿನ್ನ ಖರೀದಿಸಿ ನಷ್ಟಕ್ಕೆ ತುತ್ತಾಗದಿರಿ: ಭಾರತೀಯರಿಗೆ ಮುಕೇಶ್ ಅಂಬಾನಿ ಕಿವಿಮಾತು
ಚಿನ್ನ ಮತ್ತು ಬೆಳ್ಳಿ ಭಾರತೀಯರ ಪರಂಪರೆಯ ಉಳಿತಾಯ ಸಾಧನಗಳಾಗಿದ್ದರೂ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಅವುಗಳು ಸಂಪತ್ತು ಸೃಷ್ಟಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ. ಜಿಯೋ-ಬ್ಲ್ಯಾಕ್‌ರಾಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಾಸರಿ ಭಾರತೀಯ ಉಳಿತಾಯದಾರರು ತಮ್ಮ ಹಣವನ್ನು ಬಂಡವಾಳ ಮಾರುಕಟ್ಟೆಗಳತ್ತ ತಿರುಗಿಸಿದರೆ ದೀರ್ಘಕಾಲದಲ್ಲಿ ಬಹುಪಟ್ಟು ಲಾಭ ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆಯಾಗಿದ್ದು, ಹೂಡಿಕೆದಾರರ ಗಮನವನ್ನು ಮತ್ತೆ ಈ ಅಮೂಲ್ಯ ಲೋಹಗಳತ್ತ ಸೆಳೆದಿವೆ. ಮಾರುಕಟ್ಟೆಯ ಅಸ್ಥಿರತೆಯ ಸಮಯದಲ್ಲಿ ಚಿನ್ನ-ಬೆಳ್ಳಿ ಸುರಕ್ಷಿತ ಆಶ್ರಯವೆಂದು ಪರಿಗಣಿಸಲ್ಪಡುವುದು ಸಾಮಾನ್ಯ. ಆದರೆ ಈ ಆಸಕ್ತಿಯ ನಡುವೆಯೇ ಮಾತನಾಡಿದ ಮುಕೇಶ್ ಅಂಬಾನಿ, ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ದೇಶದಲ್ಲಿ ಕೇವಲ ಅಮೂಲ್ಯ ಲೋಹಗಳಲ್ಲಿ ಹಣ ಹೂಡುವುದು ಸಂಪತ್ತು ಹೆಚ್ಚಿಸಲು ಸಾಕಾಗುವುದಿಲ್ಲ ಎಂದು ಅಂಬಾನಿ ಸ್ಪಷ್ಟಪಡಿಸಿದ್ದಾರೆ.

ಉಳಿತಾಯ ರೂಪದಲ್ಲಿ ಸಂಗ್ರಹ
ಭಾರತವು ಕಳೆದ ವರ್ಷ ಸುಮಾರು 60 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ ಹಾಗೂ 10ರಿಂದ 15 ಬಿಲಿಯನ್ ಡಾಲರ್ ಮೌಲ್ಯದ ಬೆಳ್ಳಿ ಆಮದು ಮಾಡಿಕೊಂಡಿದೆ ಎಂದು ಅಂಬಾನಿ ವಿವರಿಸಿದರು. ಈ ಅಮೂಲ್ಯ ಲೋಹಗಳ ಬಹುಪಾಲು ಉತ್ಪಾದಕ ಚಟುವಟಿಕೆಗಳಿಗೆ ಬಳಸದೇ, ಕೇವಲ ಉಳಿತಾಯ ರೂಪದಲ್ಲಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ಆ ಹಣವು ದೇಶದ ಅಧಿಕೃತ ಹಣಕಾಸು ವ್ಯವಸ್ಥೆಗೂ ಹೊರಗೇ ಉಳಿಯುತ್ತಿದೆ ಎಂದು ಅವರು ಹೇಳಿದರು.
"ಚಿನ್ನ ಮತ್ತು ಬೆಳ್ಳಿ ಸಂಕಷ್ಟದ ಸಮಯದಲ್ಲಿ ಭದ್ರತೆಯ ಭಾವನೆ ನೀಡುತ್ತವೆ. ಆದರೆ ಅವುಗಳು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಭಾರತೀಯ ಉಳಿತಾಯದಾರರನ್ನು ಕ್ಯಾಪಿಟಲ್ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಬಹುದಾದರೆ, ಆ ಹಣವು ಕಾಲಕ್ರಮೇಣ ಲಾಭ ನೀಡುತ್ತದೆ" ಎಂದು ಅಂಬಾನಿ ಹೇಳಿದರು.
ಸಂಪತ್ತು ಸೃಷ್ಟಿಯ ಮಾರ್ಗ ಯಾವುದು?
ಭಾರತದಲ್ಲಿ ಚಿನ್ನವನ್ನು ಸಂಸ್ಕೃತಿ, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿ ನೋಡುವ ಪರಂಪರೆ ದಶಕಗಳಿಂದ ಇದೆ. ಇದರ ಪರಿಣಾಮವಾಗಿ ಭಾರೀ ಪ್ರಮಾಣದ ಆಮದು ನಡೆಯುತ್ತಿದ್ದು, ಇದು ಈಗ ಒತ್ತಡವನ್ನೂ ಹೆಚ್ಚಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬೆಳ್ಳಿಯೂ ಹೂಡಿಕೆ ಮತ್ತು ಉಳಿತಾಯ ಆಸ್ತಿಯಾಗಿ ಜನಪ್ರಿಯವಾಗುತ್ತಿದೆ. ಇದಕ್ಕೆ ವಿರುದ್ಧವಾಗಿ, ಷೇರು ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ ಹಣ ಕಂಪನಿಗಳು, ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಿಗೆ ಬಳಕೆಯಾಗುತ್ತದೆ. ಕಂಪನಿಗಳು ಬೆಳೆಯುತ್ತಾ ಲಾಭ ಗಳಿಸಿದಂತೆ ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರತಿಫಲ ಸಿಗುತ್ತದೆ. ಇದೇ ಭಾರತದ ಮುಂದಿನ ಹಂತದ ಸಂಪತ್ತು ಸೃಷ್ಟಿಯ ಮಾರ್ಗ ಎಂದು ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ರಿಲಯನ್ಸ್ ಮತ್ತು ಜಗತ್ತಿನ ಅತಿದೊಡ್ಡ ಆಸ್ತಿ ನಿರ್ವಹಣಾ ಸಂಸ್ಥೆಯಾದ ಬ್ಲ್ಯಾಕ್‌ರಾಕ್ ನಡುವಿನ ಜಂಟಿ ಉಪಕ್ರಮವಾದ ಜಿಯೋಬ್ಲ್ಯಾಕ್‌ರಾಕ್ ಬಗ್ಗೆ ಮಾತನಾಡಿದ ಅವರು, ಹಣಕಾಸು ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ ಎಂದು ಹೇಳಿದರು. ನಮ್ಮ ಗಮನ ಭಾರತದ ಹೂಡಿಕೆ ವಲಯದಲ್ಲಿರುವ ದೊಡ್ಡ ಹಾಗೂ ಇನ್ನೂ ಬಳಸಲಾಗದ ಅವಕಾಶಗಳತ್ತ ಇದೆ" ಎಂದು ಅಂಬಾನಿ ಹೇಳಿದರು.
ಇನ್ನು ಸಾಮಾನ್ಯ ಭಾರತೀಯರಿಗೆ ಹೂಡಿಕೆ ಪ್ರಕ್ರಿಯೆಯನ್ನು ಸರಳ, ಸುರಕ್ಷಿತ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದೇ ಜಿಯೋಬ್ಲ್ಯಾಕ್‌ರಾಕ್‌ನ ಉದ್ದೇಶ ಎಂದು ಅವರು ತಿಳಿಸಿದರು. ವ್ಯವಸ್ಥೆಯನ್ನು ಒಮ್ಮೆಗೆ ಬದಲಿಸುವುದಕ್ಕಿಂತ, ಹಂತಹಂತವಾಗಿ ಜನರನ್ನು ಉತ್ಪಾದಕ ಹೂಡಿಕೆಗಳತ್ತ ಕರೆದೊಯ್ಯುವುದೇ ಗುರಿ ಎಂದು ಅಂಬಾನಿ ಸ್ಪಷ್ಟಪಡಿಸಿದರು.
ಆರ್ಥಿಕ ವಿಶ್ಲೇಷಕರ ಪ್ರಕಾರ ಚಿನ್ನವನ್ನು ಸಂಪೂರ್ಣವಾಗಿ ತಳ್ಳಿಹಾಕುವ ಅಗತ್ಯವಿಲ್ಲ. ಶೇ 5-10% ಚಿನ್ನವನ್ನು ಇಟ್ಟುಕೊಳ್ಳಬಹುದು. ಆದರೆ ದೀರ್ಘಕಾಲದ ಸಂಪತ್ತು ನಿರ್ಮಾಣಕ್ಕಾಗಿ ಷೇರು ಮತ್ತು ಇತರ ಉತ್ಪಾದಕ ಹೂಡಿಕೆಗಳ ಪಾತ್ರ ಅತ್ಯಂತ ಪ್ರಮುಖ ಎನ್ನಲಾಗಿದೆ.
ಚಿನ್ನದ ಆಭರಣಗಳಲ್ಲಿ ಹೆಚ್ಚಿನ ಮೇಕಿಂಗ್ ಚಾರ್ಜ್, ಜಿಎಸ್‌ಟಿ ಹಾಗೂ ಮಾರಾಟ ಸಮಯದಲ್ಲಿ ಕಡಿಮೆ ಮೌಲ್ಯ ಸಿಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ, ಹೂಡಿಕೆ ಉದ್ದೇಶಕ್ಕೆ SGB, ETF, ಡಿಜಿಟಲ್ ಗೋಲ್ಡ್ ಅಥವಾ ಚಿನ್ನದ ಬಾರ್‌ಗಳು ಹೆಚ್ಚು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ.












Click it and Unblock the Notifications