Gobi Manchuri Ban: ಭಾರತದ ಈ ಒಂದು ಸ್ಥಳದಲ್ಲಿ ಗೋಬಿ ಮಂಚೂರಿ ನಿಷೇಧ!
ಗೋಬಿ ಮಂಚೂರಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಇದರ ರುಚಿಗೆ ಮರುಳಾಗದವರೇ ಇಲ್ಲ. ಹೀಗಿರುವಾಗ ದೇಶದ ಈ ಒಂದು ಸ್ಥಳದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ.
ಹೌದು... ಹೂಕೋಸಿನಿಂದ ತಯಾರಿಸುವ ಈ ತಿಂಡಿ ದೇಶದೆಲ್ಲೆಡೆ ಜನಪ್ರಿಯ ಖಾದ್ಯ. ಇದು ಆಹಾರ ಉತ್ಸಾಹಿಗಳಲ್ಲಿ ಬಹಳ ಹಿಂದಿನಿಂದಲೂ ಅಚ್ಚುಮೆಚ್ಚಿನದ್ದಾಗಿದೆ. ಆದರೆ ಇದಕ್ಕೆ ಬಳಕೆ ಮಾಡುವ ಬಣ್ಣ ಹಾಗೂ ಶುಚಿತ್ವವಿಲ್ಲದ ತಯಾರಿಕೆ ಅದರ ಮೇಲಿನ ನಿರ್ಬಂಧಕ್ಕೆ ಕಾರಣವಾಗಿದೆ. ಗೋವಾದ ನಾಗರಿಕ ಸಂಸ್ಥೆ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಮಾಪುಸಾ ನಗರದಲ್ಲಿ ಗೋಬಿಯನ್ನು ನಿಷೇಧಿಸಿದೆ. ಗೋವಾದ ಮಾಪುಸಾ ನಗರದಲ್ಲಿ ಗೋಬಿಯನ್ನು ತಯಾರಿಸುವಂತಿಲ್ಲ.

ನಗರ ಆಡಳಿತ ವಿಭಾಗವೇ ಈ ಆಧೇಶವನ್ನು ಘೋಷಣೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ಮಪುಸಾ ಆಹಾರ ಇಲಾಖೆ ಫಾಸ್ಟ್ ಫುಡ್ ಸೆಂಟರ್, ಸ್ಟಾಲ್‌ಗಳಿಗೆ ನೋಟಿಸ್ ನೀಡುತ್ತಲೇ ಬಂದು, ಇದೀಗ ಗೋಬಿ ಮಂಚೂರಿಯನ್ ನಿಷೇಧಿಸಿದೆ.
ಅಂದಹಾಗೆ ಗೋಬಿ ಮಂಚೂರಿಯನ್ ವಿರುದ್ಧ ಯುದ್ಧ ಘೋಷಿಸಿದ ಗೋವಾದ ಮೊದಲ ನಾಗರಿಕ ಸಂಸ್ಥೆ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಅಲ್ಲ. 2022 ರಲ್ಲಿ ಭಾರತದ ಗುಜರಾತ್‌ನ ಜುನಾಗಢ ಜಿಲ್ಲೆಯ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಆಹಾರ ಮತ್ತು ಔಷಧಗಳ ಆಡಳಿತ (ಎಫ್‌ಡಿಎ) ಸಂಸ್ಥೆ ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್‌ಗೆ ಗೋಬಿ ಮಂಚೂರಿಯನ್ ಮಾರಾಟ ಮಳಿಗೆಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಿತು. ಈ ನಿರ್ದೇಶನದ ಮೊದಲು, ಎಫ್‌ಡಿಎ ಅದರ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಅಂತಹ ಸ್ಟಾಲ್‌ಗಳ ಮೇಲೆ ದಾಳಿ ನಡೆಸಿತ್ತು.
ಗೋಬಿ ಮಂಚೂರಿ ಸ್ಥಳೀಯ ಪಾಕಶಾಲೆಯ ಆದ್ಯತೆಗಳಲ್ಲಿ ಮೊದಲಿಗದ್ದು. ವರ್ಷಗಳಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದ ಭಕ್ಷ್ಯಗಳ ನಡುವೆ ಇದೂ ಕೂಡ ಒಂದು. ಈ ಗೋಬಿಯನ್ನು ಮೊದಲು ಕೋಳಿ ಮಾಂಸದಿಂದ ತಯಾರಿಸಲಾಗುತ್ತಿತ್ತು. ಮುಂಬೈನ ಚೀನೀ ಪಾಕಶಾಲೆಯ ಪ್ರವರ್ತಕ ನೆಲ್ಸನ್ ವಾಂಗ್ ಅವರು 1970ರ ದಶಕದಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಡುಗೆ ಮಾಡುವಾಗ ಚಿಕನ್ ಮಂಚೂರಿಯನ್ ಅನ್ನು ಕಂಡುಹಿಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಹೊಸ ಖಾದ್ಯವನ್ನು ತಯಾರಿಸಲು ನಿರ್ಧರಿಸಿದ ವಾಂಗ್ ಅವರು ಮಸಾಲೆಯುಕ್ತ ಕಾರ್ನ್‌ಫ್ಲೋರ್ ಬ್ಯಾಟರ್‌ನಲ್ಲಿ ಚಿಕನ್ ತುಂಡುಗಳನ್ನು ಡೀಪ್-ಫ್ರೈಡ್ ಮಾಡಿದರು. ಅವುಗಳನ್ನು ಒಣ ಅಥವಾ ಸೋಯಾ ಸಾಸ್, ವಿನೆಗರ್, ಟೊಮೆಟೊ ಸಾಸ್‌ನಿಂದ ಮಾಡಿದ ಗ್ರೇವಿಯಲ್ಲಿ ಮತ್ತೊಮ್ಮೆ ಫ್ರೈ ಮಾಡಿ ಬಡಿಸಿದರು. ಹೀಗೆ ಹುಟ್ಟಿಕೊಂಡ ಗೋಬಿ ಸಸ್ಯಹಾರಿಗಳಿಗೂ ಉಣಬಡಿಸಲು ಇದಕ್ಕೆ ಚಿಕನ್ ತುಂಡುಗಳ ಬದಲಿಗೆ ಹೂಕೋಸುಗಳನ್ನು ಬಳಸಿ ಮಾಡಲು ಆರಂಭಿಸಲಾಯಿತು.
ಆದರೆ ಇತ್ತೀಚಿಗೆ ಇದರ ತಯಾರಿಕೆಯಲ್ಲಿ ಗುಣಮಟ್ಟ ಕಡಿಮೆಯಾಗುತ್ತಿದೆ. ಇದಕ್ಕೆ ಬಳಕೆ ಮಾಡುವ ಬಣ್ಣ, ಹಾಗೂ ತಯಾರಿಸುವ ಬಗೆಯಿಂದ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಅನೇಕ ಕಡೆಗಳಲ್ಲಿ ಬೀದಿ ಬದಿ ತಯಾರಾಗುವ ಗೋಬಿಯನ್ನು ಸೇವಿಸದಂತೆ ಸೂಚಿಸಲಾಗುತ್ತಿದೆ. ಆದರೂ ಗೋಬಿ ತಯಾರಕರು ಗ್ರಾಹಕರನ್ನು ಸೆಳೆಯಲು ಅನೇಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಕಲರ್ ಮೂಲಕ ಸಾಸ್ ತಯಾರಿಸುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಗೋಬಿ ನಿಮ್ಮ ನೆಚ್ಚಿನ ಖಾದ್ಯವೇ ಆಗಿದ್ದರೂ ಅದನ್ನು ಶುಚಿಯಾಗಿ ತಯಾರಿಸುವ ಕಡೆಗಳಲ್ಲಿ ಸೇವಿಸುವುದು ಉತ್ತಮ.












Click it and Unblock the Notifications