GOBARdhan: ಇಂಧನ ಆಮದು ಕಡಿತಕ್ಕೆ ಮೋದಿ ಸರ್ಕಾರದ ಮೆಗಾ ಪ್ಲ್ಯಾನ್: ₹23,731 ಕೋಟಿ ಸಿಬಿಜಿ ಯೋಜನೆಗೆ ಅಸ್ತು
ನವದೆಹಲಿ: ಮಧ್ಯಪ್ರಾಚ್ಯ ದೇಶದಗಳ ಯುದ್ಧ ಕಾರಣದಿಂದಾಗಿ ಭಾರತದಲ್ಲೂ ಇಂಧನ ಬಿಕ್ಕಟ್ಟು ಎದುರಾಗಿತ್ತು. ಇದೀಗ ಕೇಂದ್ರ ಸರ್ಕಾರ ಇಂಧನ ಮೇಲಿನ ಅವಲಂಬನೆ ತಗ್ಗಿಸಿ, ಸ್ವಾವಲಂಬನೆ ಹೆಚ್ಚಿಸಲು ದೇಶದಲ್ಲಿ ಬಹುಕೋಟಿ ವೆಚ್ಚದ 'ಗೋಬರ್ಧನ್ ಯೋಜನೆ' ಅಥವಾ 'ಒತ್ತಡೀಕೃತ ಜೈವಿಕ ಇಂಧನ ಯೋಜನೆ' (CBG) ಗೆ ಅನುಮೋದನೆ ನೀಡಿದೆ.
ಕೃಷಿ ತ್ಯಾಜ್ಯ, ಸಗಣಿ ಬಳಸಿ ದೇಶಿಯವಾಗಿ ಜೈವಿಕ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಮುಂದಿನ ಸುಮಾರು ಒಂದು ದಶಕ ಕಾಲ ಈ ಯೋಜನೆ ಜಾರಿಗೆ ತರುವ ಪ್ರಯತ್ನದ ಭಾಗವಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಅಂದಾಜು 23,731 ಕೋಟಿ ರೂಪಾಯಿ ಯೋಜನೆಯು ಹಣಕಾಸು ವರ್ಷ 2026-27 ರಿಂದ ಹಣಕಾಸು 2035-36 ರವರೆಗೆ ಅವಧಿಗೆ ಜಾರಿಗೆ ಬರಲಿದೆ. ಇದು ದೇಶದ ಭವಿಷ್ಯದ ಇಂಧನ ಮಿಶ್ರಣದ ಪ್ರಮುಖ ಆಧಾರಸ್ತಂಭವಾಗಲಿದೆ.

ಭಾರತದ ಸಾವಯವ ಸಂಪತ್ತನ್ನು ಶುದ್ಧ ಇಂಧನ, ಗ್ರಾಮೀಣ ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸ್ಥಿರ ಬೆಲೆ ನಿಗದಿ, ಬಂಡವಾಳ ನೆರವು, ಪೈಪ್‌ಲೈನ್ ಸಂಪರ್ಕ ಮತ್ತು ಹಣಕಾಸಿನ ಪ್ರವೇಶದ ಮೂಲಕ 'ಕಂಪ್ರೈಸರ್ ಬಯೋಗ್ಯಾಸ್ (CBG)' ಉತ್ಪಾದನೆಯನ್ನು ವೇಗಗೊಳಿಸಲು ಮುಂದಾಗಿದೆ.
ಇಂಧನ ದೂರದೃಷ್ಟಿ, ಗುರಿ
ಕೆಲವೇ ವರ್ಷಗಳಲ್ಲಿ ದೇಶೀಯ ಸಿಬಿಜಿ (CBG) ಉತ್ಪಾದನೆಯನ್ನು ಸುಮಾರು 10 ಪಟ್ಟು ಹೆಚ್ಚಿಸಲಿರುವ ಕೇಂದ್ರ ಸರ್ಕಾರ ದೇಶ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲಿದೆ. ಈ ಮೂಲಕ ಇಂಧನದ ಆತಂಕ ದೂರು ಮಾಡಲಿದೆ. ಮಾತ್ರವಲ್ಲದೇ ರೈತರು, ಗ್ರಾಮೀಣ ಉದ್ಯಮಿಗಳು, ಖಾಸಗಿ ಹೂಡಿಕೆ, ತ್ಯಾಜ್ಯದಿಂದ ಸಂಪತ್ತು ಮತ್ತು ಸ್ವಾವಲಂಬಿ ಭಾರತಕ್ಕೆ ಪ್ರಮುಖ ಉತ್ತೇಜನ ನೀಡಿದಂತಾಗುತ್ತದೆ.
ವಿವಿಧ ವಲಯಕ್ಕೆ ಪ್ರಯೋಜನಗಳು
ಸಾರಿಗೆ, ಗೃಹಬಳಕೆ, ಕೈಗಾರಿಕೆ ಮತ್ತು ವಾಣಿಜ್ಯ ವಲಯಗಳಾದ್ಯಂತ ದೇಶದ ನೈಸರ್ಗಿಕ ಅನಿಲದ ಬೇಡಿಕೆಯು ವಿಸ್ತರಿಸುತ್ತಿದೆ. ಇದನ್ನು ಅರಿತ ಸರ್ಕಾರ ದೇಶೀಯ ನವೀಕರಿಸಬಹುದಾದ ಉತ್ಪಾದನೆಯ ಮೂಲಕ ಸಿಬಿಜಿ ಈ ಬೆಳೆಯುತ್ತಿರುವ ಬೇಡಿಕೆಯ ಗಮನಾರ್ಹ ಪಾಲನ್ನು ಪೂರೈಸಲು ಮುಂದಾಗಿದೆ. ಸಿಬಿಜಿ ಯೋಜನೆಯು ಇಂಧನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ, ಆಮದು ತಗ್ಗಿಸುತ್ತದೆ. ಹಳೇ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ.
ಗೋಬರ್ಧನ್ ಯೋಜನೆ ಪ್ರಮುಖಾಂಶಗಳು
ಗೋಬರ್ಧನ್ ಯೋಜನೆಯು 'ವಿಶೇಷ ಸಿಬಿಜಿ ಖರೀದಿ ಭರವಸೆ' ಚೌಕಟ್ಟನ್ನು ಸ್ಥಾಪಿಸಲಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಸಂಸ್ಥೆಗಳ ಮೂಲಕ ಖರೀದಿಸಿ ಸಿಎನ್‌ಜಿ (ಸಾರಿಗೆ) ಮತ್ತು ಪಿಎನ್‌ಜಿ (ಗೃಹಬಳಕೆ) ವಿಭಾಗಗಳಲ್ಲಿ 2026-27 ರ ಹಣಕಾಸು ವರ್ಷದಲ್ಲಿ ಶೇ. 3, 2027-28 ರ ಹಣಕಾಸು ವರ್ಷದಲ್ಲಿ ಶೇ. 4 ಮತ್ತು 2028-29 ರ ಹಣಕಾಸು ವರ್ಷದಿಂದ ಶೇ. 5 ರಷ್ಟು ಈ ಅನಿಲವನ್ನು ಮಿಶ್ರಣ ಮಾಡಲು ಯೋಜಿಸಿದೆ. ಇಂದು ಇಂಧನ ಜೊತೆ ಎಥೆನಾಲ್ ಮಿಶ್ರಣದಂತೆ, ಭವಿಷ್ಯದಲ್ಲಿ ಸಿಬಿಜಿ ಅನಿಲ ಮಿಶ್ರಣಗೊಳ್ಳಲಿದೆ.
ಸ್ಥಿರ ಸಿಬಿಜಿ (CBG) ಬೆಲೆ ನಿಗದಿ
ಗೋಬರ್ಧನ್ ಯೋಜನೆಯು ಸರ್ಕಾರಿ ಬೆಂಬಲಿತ ಬೆಲೆ ನಿಗದಿ ಮಾಡಲಾಗುವುದು. ಪ್ರತಿ ಮೆಟ್ರಿಕ್ ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್‌ಗೆ (MMBTU) ₹2,110 ರ ಸ್ಥಿರವಾದ ಆಡಳಿತಾತ್ಮಕ ಸಿಬಿಜಿ ಬೆಲೆ ಪರಿಚಯಿಸಲಿದೆ. ಸರ್ಕಾರದ ಬೆಂಬಲ ಮತ್ತು ಮಾರುಕಟ್ಟೆ ಆಧಾರಿತ ವೆಚ್ಚ-ಹಂಚಿಕೆ ವ್ಯವಸ್ಥೆಯ ಸಂಯೋಜನೆಯ ಮೂಲಕ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲಿದೆ.
ಬಂಡವಾಳ ನೆರವು
ಅರ್ಹ ಗ್ರೀನ್‌ಫೀಲ್ಡ್ ಸಿಬಿಜಿ (CBG) ಯೋಜನೆಗಳು ಅನುಸ್ಥಾಪಿತ ಸಿಬಿಜಿ ಸಾಮರ್ಥ್ಯದ ಪ್ರತಿ ದಿನದ ಟನ್‌ಗೆ (TPD) 2 ಕೋಟಿ ರೂ.ವರೆಗಿನ ಬಂಡವಾಳ ನೆರವು ಪಡೆಯಲಿವೆ. ಪ್ಲಾಂಟ್ ಯಂತ್ರೋಪಕರಣ ಬಿಟ್ಟು ಕಚ್ಚಾವಸ್ತುಗಳ ಸಂಗ್ರಹಣೆ, ಸಾವಯವ ಗೊಬ್ಬರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಅಗತ್ಯವಾದ ವಸ್ತುಗಳ ಸರಪಳಿಗೂ ಬೇಡಿಕೆ ಸೃಷ್ಟಿಯಾಗುತ್ತದೆ.
ದೇಶದಲ್ಲಿ ಬಂಡವಾಳದ ಹೊರೆ ಕಡಿಮೆ ಮಾಡಿ ಹಣಕಾಸಿನ ಸ್ಥಿತಿಗತಿ ಸುಧಾರಿಸುತ್ತದೆ. ಖಾಸಗಿ ಅಭಿವೃದ್ಧಿದಾರರು, ಎಂಎಸ್‌ಎಂಇಗಳು (MSMEs), ಸಹಕಾರ ಸಂಘಗಳು ಮತ್ತು ಗ್ರಾಮೀಣ ಉದ್ಯಮಿಗಳ ಭಾಗವಹಿಸುವಿಕೆ ಹೆಚ್ಚಳ ನಿರೀಕ್ಷಿಸಲಾಗಿದೆ.
ಪೈಪ್‌ಲೈನ್ ಮೂಲಸೌಕರ್ಯ ಅಭಿವೃದ್ಧಿ
ಸಿಬಿಜಿ ಘಟಕಗಳಿಂದ ಟ್ರಂಕ್ ಪೈಪ್‌ಲೈನ್‌ಗಳು ಮತ್ತು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಜಾಲಗಳೊಂದಿಗೆ ಸಂಪರ್ಕಿಸುವ ಕ್ಲಸ್ಟರ್-ಆಧಾರಿತ ಮತ್ತು ಸ್ವತಂತ್ರ ಪೈಪ್‌ಲೈನ್ ಮೂಲಕ ಪೂರೈಕೆಗೆ ಚಿಂತನೆ ನಡೆಸಲಾಗಿದೆ. ಇದರಿಂದ ಸಾಗಾಣೆ ವೆಚ್ಚ, ಅಪಾಯ ಕಡಿಮೆ ಆಗಲಿದೆ. ದೇಶಿಯ ಇಂಧನಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿ ಬಳಕೆಯು ಹೆಚ್ಚಾಗಲಿದೆ ಎಂದು ಕೇಂದ್ರ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications
