Gautam Adani: ವಾರಕ್ಕೆ 70 ಗಂಟೆ ಕೆಲಸ: ಹೆಂಡ್ತಿ ಓಡಿ ಹೋಗ್ತಾಳೆ ಎಂದ ಅದಾನಿ
ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಿದ್ದ ಖ್ಯಾತ ಉದ್ಯಮಿ ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರ ಹೇಳಿಕೆ ಬಗ್ಗೆ ಎಲ್ಲೆಡೆ ಪರ ವಿರೋಧದ ಚರ್ಚೆಗಳು ನಡೆದಿದ್ದವು. ಇದನ್ನು ಯುವಜನರಂತೂ ಸಾಧ್ಯವೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರ ಹೇಳಿಕೆ ಕೂಡ ಚರ್ಚೆಗೆ ಬಂದಿದೆ.
ಅದಾನಿ ಅವರ ಹೇಳಿಕೆಯು ನಾರಾಯಣಮೂರ್ತಿ ಅವರ ಹೇಳಿಕೆಗೆ ಟಾಂಗ್ ನೀಡುವಂತೆಯೇ ಇದೆ. ಅದಾನಿ ಅವರು ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಚರ್ಚೆಗೆ ಕಾರಣವಾಗಿದೆ. ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯ ವಿಷಯವಾಗಿದೆ ಎಂದು ಅದಾನಿ ಹೇಳಿದ್ದಾರೆ.

ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಸಾಧಿಸಲು ಒಬ್ಬರ ಕೆಲಸವನ್ನು ಆನಂದಿಸುವುದು ಅಗತ್ಯ ಎಂದು ಅದಾನಿ ಹೇಳಿದ್ದಾರೆ. ಅಲ್ಲದೆ ಕುಟುಂಬದೊಂದಿಗೆ ಎಂಟು ಗಂಟೆ ಕಳೆದರೆ ಹೆಂಡತಿ ಓಡಿ ಹೋಗುತ್ತಾಳೆ ಎಂದು ಹಾಸ್ಯಮಯವಾಗಿ ಅದಾನಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನಿಮ್ಮ ಕೆಲಸ ಮತ್ತು ಜೀವನದ ಸಮತೋಲನದ ವಿಚಾರದಲ್ಲಿ ಯಾರೂ ಮೇಲೂ ನಿರ್ಬಂಧ ಹೇರಬಾರದು. ನನ್ನ ಆಲೋಚನೆಯನ್ನು ನಿಮ್ಮ ಮೇಲೆಯೂ ಹೇರಬಾರದು. ಕೆಲವರು ಕುಟುಂಬದೊಂದಿಗೆ 4 ಗಂಟೆಗಳ ಕಾಲ ಕಳೆಯುತ್ತಾರೆ, ಅದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಅಥವಾ ಬೇರೆಯವರು 8 ಗಂಟೆಗಳ ಕಾಲ ಕಳೆದು ಅದನ್ನು ಆನಂದಿಸುತ್ತಾರೆ. ಅದು ಅವರ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ವಿಚಾರ. ನೀವು ನಿಮ್ಮ ಕುಟುಂಬದೊಂದಿಗೆ ಎಂಟು ಗಂಟೆಗಳ ಕಾಲ ಕಳೆದರೆ, ನಿಮ್ಮ ಹೆಂಡತಿ ಓಡಿ ಹೋಗುತ್ತಾಳೆ ಎಂದು ಹಾಸ್ಯಚಟಾಕಿ ಕೂಡ ಹಾರಿಸಿದ್ದಾರೆ.
ನೀವು ನಿಮಗೆ ಇಷ್ಟವಾಗುವ ಕೆಲಸಗಳನ್ನು ಮಾಡಿದಾಗ ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನ ಬ್ಯಾಲೆನ್ಸ್ಡ್ ಆಗಿರುತ್ತದೆ. ನಮಗೆ ಇಲ್ಲಿ ಕುಟುಂಬ ಅಥವಾ ಕೆಲಸ ಎನ್ನುವ ಎರಡು ಆಯ್ಕೆಗಳು ಇರುತ್ತವೆ. ನಮಗೆ ಅದಕ್ಕಿಂತ ಬೇರೆ ಪ್ರಪಂಚವಿಲ್ಲ. ನಮ್ಮ ಮಕ್ಕಳೂ ಅದನ್ನೇ ಗಮನಿಸುತ್ತಾರೆ ಎಂದು ಅದಾನಿ ಹೇಳಿದ್ದಾರೆ.

ಪ್ರತಿಯೊಬ್ಬರೂ ಜೀವನದ ಪ್ರಯಾಣವನ್ನು ಹಾದು ಹೋಗುತ್ತಿದ್ದಾರೆ. ಇಲ್ಲಿ ಶಾಶ್ವತವಾಗಿ ಬದುಕಲು ಯಾರೂ ಇಲ್ಲ. ಒಬ್ಬ ವ್ಯಕ್ತಿಯು ಇದನ್ನು ಅರ್ಥಮಾಡಿಕೊಂಡಾಗ, ಜೀವನವು ಸರಳವಾಗುತ್ತದೆ. ಇಲ್ಲಿ ಸಂಪತ್ತು ಸೇರಿದಂತೆ ಯಾವುದು ಕೂಡ ಶಾಶ್ವತವಾಗಿ ಉಳಿಯದು ಎಂದೂ ಅದಾನಿ ಹೇಳಿದ್ದಾರೆ.
ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರು ಹಲವು ಬಾರಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಐಟಿ ಉದ್ಯೋಗಿಗಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇ ಮಾತನ್ನು ಅವರು ಹಲವು ವೇದಿಕೆಗಳಲ್ಲಿ ಹೇಳಿ ಸಮರ್ಥನೆಯೂ ಮಾಡಿಕೊಂಡಿದ್ದರು.
ದೇಶದ ಯುವಕರು ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವ ಕಡೆಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಆದರೆ, ನಾರಾಯಣ ಮೂರ್ತಿ ಅವರು ಈಗಾಗಲೇ ಉದ್ಯಮದಲ್ಲಿ ಗೆದ್ದವರು. ಅವರಂತೆ ನಾವಿರಲು ಸಾಧ್ಯವಿಲ್ಲ. ನಮ್ಮ ಬದುಕು ನಮ್ಮಿಷ್ಟ ಎಂದು ಹಲವು ಐಟಿ ಉದ್ಯೋಗಿಗಳು ತಿರುಗೇಟು ನೀಡಿದ್ದರು.












Click it and Unblock the Notifications