ಏ.20ರಿಂದ ಹಿರಿಯ ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿರಬೇಕು
ನವದೆಹಲಿ, ಏಪ್ರಿಲ್ 15 : ಕೇಂದ್ರ ಸಚಿವರು, ಅವರ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಏಪ್ರಿಲ್ 20ರಿಂದ ಶೇ 100ರಷ್ಟು ಹಾಜರಾತಿಯೊಂದಿಗೆ ಕೆಲಸ ಮಾಡಲಿದ್ದಾರೆ. ಹೆಚ್ಚುವರಿ ಕಾರ್ಯದರ್ಶಿ ಮತ್ತು ಅದಕ್ಕೂ ಹೆಚ್ಚಿನ ಸ್ಥಾನಮಾನದ ಅಧಿಕಾರಿಗಳಿಗೆ ಈ ನಿಯಮ ಅನ್ವಯವಾಗಲಿದೆ.
2ನೇ ಹಂತದ ಲಾಕ್ ಡೌನ್ ಕುರಿತು ಬುಧವಾರ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯಲ್ಲಿ ಏಪ್ರಿಲ್ 20ರಿಂದ ಕೆಲಸ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ಹಿರಿಯ ಅಧಿಕಾರಿಗಳು ಕಚೇರಿಗೆ ಬರಬೇಕಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಕ್ಷಣೆ, ಆಹಾರ ಖಾತೆ ವ್ಯಾಪ್ತಿಗೆ ಒಳಪಡುವ ಎಲ್ಲಾ ನೌಕರರು ಕೆಲಸ ಮಾಡಬೇಕಿದೆ. ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾದ ಪ್ರದೇಶಗಳಿಂದ ಆಗಮಿಸುವ ನೌಕರರಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೊಲೀಸ್, ಗೃಹ ರಕ್ಷಕದಳ, ಅಗ್ನಿ ಶಾಮಕದಳ, ಕಾರಾಗೃಹ ಇಲಾಖೆ, ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲಾ ನೌಕರರು ಕಡ್ಡಾಯವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರ ಕಳುಹಿಸಿರುವ ಮಾರ್ಗಸೂಚಿಯಲ್ಲಿ ರಾಜ್ಯಗಳು ಬದಲಾವಣೆ ಮಾಡಬಾರದು ಎಂದು ಸರ್ಕಾರ ಹೇಳಿದೆ. ಕಡ್ಡಾಯವಾಗಿ ಲಾಕ್ ಡೌನ್ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಎಲ್ಲಾ ಜಿಲ್ಲಾ ಹಂತದ ಕಚೇರಿಗಳು ಕೆಲವು ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕು. ಗ್ರೂಪ್ 'ಎ' ಮತ್ತು 'ಬಿ' ಹಂತದ ಅಧಿಕಾರಿಗಳು ಕಚೇರಿಗೆ ಬರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಗ್ರೂಪ್ 'ಸಿ' ಮತ್ತು ಇದಕ್ಕೂ ಕೆಳಹಂತದ ಅಧಿಕಾರಿಗಳು ಶೇ 33ರಷ್ಟು ಹಾಜರಾತಿಯನ್ನು ಹೊಂದಿರಬೇಕು. ಪಡಿತರ ವಿತರಣೆ ಮತ್ತು ಇತರ ಸೇವೆಗೆ ಸಂಬಂಧಿಸಿದ ಅಧಿಕಾರಿಗಳು ಕಚೇರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.












Click it and Unblock the Notifications