Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್‌ನಿಂದ ಭರ್ಜರಿ ಆಫರ್
ಯುದ್ಧದ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಇಂಧನ ಬಿಕ್ಕಟ್ಟು ಕೇವಲ ವಾಹನ ಸವಾರರಿಗಷ್ಟೇ ಅಲ್ಲ, ಹೋಟೆಲ್ ಉದ್ಯಮಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆ ಏರಿಕೆ ಹಾಗೂ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಅನೇಕ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಸವಾಲನ್ನು ಎದುರಿಸಲು ಹೊಸೂರಿನ ಹೋಟೆಲ್‌ವೊಂದು ಕಂಡುಕೊಂಡಿರುವ ಉಪಾಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
'ನಮಗೆ ಅಡುಗೆಗೆ ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ'
ಹೊಸೂರಿನ 'ಈರೋಡ್ ಅಮ್ಮಾಯಿ ಮೆಸ್' ಎಂಬ ಹೋಟೆಲ್ ಹಾಗೂ ರೆಸ್ಟೋರೆಂಟ್ ಇಂತಹದೊಂದು ವಿಶಿಷ್ಟ ಜಾಹೀರಾತು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೋಟೆಲ್‌ಗೆ ಸಿಲಿಂಡರ್ ಪೂರೈಕೆ ತಗ್ಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೇ ಒಂದು ಆಫರ್ ನೀಡಿದೆ. ಹೋಟೆಲ್‌ನ ಮುಂದೆ ಹಾಕಲಾದ ಪೋಸ್ಟರ್‌ನಲ್ಲಿ "ಅಡುಗೆ ಮಾಡಲು ನಮಗೆ ಸಹಾಯ ಮಾಡಿ, ನಿಮ್ಮ ಹೊಟ್ಟೆ ನಾವು ತುಂಬಿಸುತ್ತೇವೆ" ಎಂದು ಬರೆಯಲಾಗಿದೆ.

ಆಫರ್‌ನ ವಿಶೇಷತೆಗಳೇನು?
ಗ್ರಾಹಕರು ಹೋಟೆಲ್‌ಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನೀಡಿದರೆ, ಅದಕ್ಕೆ ಪ್ರತಿಯಾಗಿ ಹೋಟೆಲ್ ಈ ಸೌಲಭ್ಯಗಳನ್ನು ನೀಡುತ್ತಿದೆ. ನೀವು ಹೋಟೆಲ್‌ಗೆ ಒಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ತಂದುಕೊಟ್ಟರೆ, ಒಂದು ತಿಂಗಳ ಕಾಲ ಪ್ರತಿದಿನ ಒಂದು ಪ್ಲೇಟ್ ಬಿರಿಯಾನಿ ಉಚಿತವಾಗಿ ದೊರೆಯಲಿದೆ. ಒಂದು ವೇಳೆ ಎರಡು ಸಿಲಿಂಡರ್ ನೀಡಿದರೆ, ದಿನಕ್ಕೆ ಎರಡು ಪ್ಲೇಟ್ ಬಿರಿಯಾನಿ ಉಚಿತವಾಗಿ ಸಿಗಲಿದೆ.
ವೈರಲ್ ಆದ ಪೋಸ್ಟರ್
ವಾಣಿಜ್ಯ ಸಿಲಿಂಡರ್‌ಗಳ ಅಭಾವದ ನಡುವೆಯೂ ಗ್ರಾಹಕರನ್ನು ಸೆಳೆಯಲು ಮತ್ತು ಉದ್ಯಮವನ್ನು ಉಳಿಸಿಕೊಳ್ಳಲು ಹೋಟೆಲ್ ಮಾಲೀಕರು ಹೂಡಿರುವ ಈ ತಂತ್ರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. "ಇದು ನಿಜಕ್ಕೂ ಸ್ಮಾರ್ಟ್ ಐಡಿಯಾ" ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಸಿಲಿಂಡರ್ ಹುಡುಕುವ ಕೆಲಸಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಹೊಸೂರಿನ ಈ ಬಿರಿಯಾನಿ ಆಫರ್ ಈಗ ಸಖತ್ ಸದ್ದು ಮಾಡುತ್ತಿದೆ.
ಕೇವಲ ಲಾಭಾಂಶಕ್ಕಾಗಿ ಈ ಆಫರ್ ನೀಡಿಲ್ಲ. ಪ್ರಸ್ತುತ ಇರಾನ್-ಇಸ್ರೇಲ್ ಯುದ್ಧದಂತಹ ಜಾಗತಿಕ ವಿದ್ಯಮಾನಗಳಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೋಟೆಲ್‌ಗಳಿಗೆ ಅಗತ್ಯವಿರುವ ವಾಣಿಜ್ಯ ಸಿಲಿಂಡರ್ (19 KG) ಪಡೆಯಲು ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ಗ್ಯಾಸ್ ಏಜೆನ್ಸಿಗಳಲ್ಲಿ ಸ್ಟಾಕ್ ಇಲ್ಲದ ಕಾರಣ, ಯಾರ ಬಳಿಯಾದರೂ ಹೆಚ್ಚುವರಿ ಅಥವಾ ಬಳಕೆಯಾಗದ ವಾಣಿಜ್ಯ ಸಿಲಿಂಡರ್ ಕನೆಕ್ಷನ್ ಇದ್ದರೆ ಅದನ್ನು ಹೋಟೆಲ್‌ಗೆ ಬಳಸಿಕೊಳ್ಳುವ ಉದ್ದೇಶ ಇದರಲ್ಲಿದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದಾಗಿ ಹೋಟೆಲ್ ಖಾದ್ಯಗಳ ಬೆಲೆ ಹೆಚ್ಚಾಗಿದೆ. ಕೆಲವು ಸಣ್ಣ ಹೋಟೆಲ್‌ಗಳು ಲಾಭವಿಲ್ಲದೆ ಬಾಗಿಲು ಹಾಕುವ ಪರಿಸ್ಥಿತಿ ತಲುಪಿವೆ. ಈ ಹೊಸೂರು ಹೋಟೆಲ್ ಮಾಲೀಕರು ಇಂತಹ ಸಂಕಷ್ಟದ ಸಮಯದಲ್ಲೂ ವ್ಯಾಪಾರವನ್ನು ಚಾಲ್ತಿಯಲ್ಲಿಡಲು ಈ ವಿಭಿನ್ನ ಐಡಿಯಾ ಮಾಡಿದ್ದಾರೆ. ಇದು ಮಾರುಕಟ್ಟೆಯ ಬಿಕ್ಕಟ್ಟನ್ನು ಎದುರಿಸಲು ಹೋಟೆಲ್ ಮಾಲೀಕರು ಕಂಡುಕೊಂಡ ಅತ್ಯುತ್ತಮ ದಾರಿ ಎಂದು ಕೆಲವರು ಹೊಗಳಿದ್ದಾರೆ.












Click it and Unblock the Notifications