Forbes' India billionaires 2022: ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ
ನವದೆಹಲಿ, ಏಪ್ರಿಲ್ 5: ಭಾರತದ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2022ನೇ ಸಾಲಿನ ಫೋರ್ಬ್ಸ್ ಪಟ್ಟಿಯಲ್ಲಿ ದೇಶದ ಅಗ್ರಮಾನ್ಯ ಬಿಲಿಯನೇರ್ ಎನಿಸಿಕೊಂಡಿದ್ದಾರೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ ದೇಶದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಎಚ್ ಸಿಎಲ್ ಟೆಕ್ನಾಲಜಿ ಚೇರ್ ಮೆನ್ ಶಿವ ನಾಡರ್ ದೇಶದ ಮೂರನೇ ಅತಿದೊಡ್ಡ ಬಿಲಿಯನೇರ್ ಆಗಿದ್ದಾರೆ. ಭಾರತದಲ್ಲಿ ಬಿಲಿಯನೇರ್‌ಗಳ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದರೆ 140 ರಿಂದ 166ಕ್ಕೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.
2022ರ ಫೋರ್ಬ್ಸ್‌ನ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2021ರಲ್ಲಿ ಇದೇ ಮೂವರು ಬಿಲಿಯನೇರ್‌ಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ವರದಿ ಪ್ರಕಾರ, ಮುಕೇಶ್ ಅಂಬಾನಿ ಒಟ್ಟು ಸಂಪತ್ತು 90.7 ಶತಕೋಟಿ ಡಾಲರ್ ನಷ್ಟಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಶೇ.7ರಷ್ಟು ಹೆಚ್ಚಳವಾಗಿದೆ.

ವಿಶ್ವದ 10ನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ:
ಫೋರ್ಬ್ಸ್‌ನ ಪಟ್ಟಿಯಲ್ಲಿ ದೇಶದ ಅಗ್ರಮಾನ್ಯ ಶ್ರೀಮಂತ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕ ಮಟ್ಟದಲ್ಲಿಯೂ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಗತ್ತಿನ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಇದೇ ಮುಕೇಶ್ ಅಂಬಾನಿ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ದೇಶದ ಎರಡನೇ ಅತಿದೊಡ್ಡ ಶ್ರೀಮಂತ ಅದಾನಿ:
2022ನೇ ಸಾಲಿನ ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿಯ ನಂತರದ ಸ್ಥಾನದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಗುರುತಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಒಟ್ಟು ನಿವ್ವಳ ಆಸ್ತಿ 90 ಬಿಲಿಯನ್ ಡಾಲರ್ ಆಗಿದೆ.

ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡ ಸೈರಸ್ ಪೂನಾವಾಲಾ:
ಭಾರತದಲ್ಲಿ ಲಸಿಕೆ ಉತ್ಪಾದಿಸುವ ಸೈರಸ್ ಪೂನಾವಾಲಾ, ಅವರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) COVID-19 ವಿರುದ್ಧದ ಲಸಿಕೆಯನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ. ಅದು ಅಂದಾಜು 24.3 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಐದನೇ ಸ್ಥಾನದಲ್ಲಿ ಡಿ-ಮಾರ್ಟ್ ಸಂಸ್ಥಾಪಕ:
ಕಳೆದ ವರ್ಷ ವಿಶ್ವದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಎಂಟ್ರಿ ಪಡೆದುಕೊಂಡಿದ್ದರು. 2022ರ ಪೋರ್ಬ್ಸ್ ಪಟ್ಟಿಯಲ್ಲಿ ಅದೇ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ, 20 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್-5 ನಂತರದ ಸ್ಥಾನಗಳಲ್ಲಿ ಗುರುತಿಸಿಕೊಂಡವರು:
ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರು 17.9 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಆರನೇ ಸ್ಥಾನದಲ್ಲಿದ್ದಾರೆ. ಓಪಿ ಜಿಂದಾಲ್ ಗ್ರೂಪಿನ ಸಾವಿತ್ರಿ ಜಿಂದಾಲ್ 17.7 ಶತಕೋಟಿ ಡಾಲರ್ ಮೂಲಕ ಏಳನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ 16.5 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಬಿರ್ಲಾ ಎಂಟನೇ ಸ್ಥಾನದಲ್ಲಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ಸ್ ಮುಖ್ಯಸ್ಥ ದಿಲೀಪ್ ಶಾಂಘ್ವಿ 15.6 ಶತಕೋಟಿ ಡೌಲರ್ ಮೌಲ್ಯದೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು 14 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಉದಯ್ ಕೋಟಾಕ್ ಹತ್ತನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.












Click it and Unblock the Notifications