ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಭಾರೀ ಅಗ್ನಿ ಅವಘಡ: ಓರ್ವ ಸಾವು
ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ಇಂದು (ಡಿಸೆಂಬರ್ 29) ಬೆಳಗಿನ ಜಾವ ನಡೆದಿದೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಶಾಖಪಟ್ಟಣಂ-ದುವ್ವಾಡ ಮೂಲಕ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಟಾಟಾನಗರ್-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿತು. ನಿನ್ನೆ ಮಧ್ಯರಾತ್ರಿ ಪ್ರಯಾಣಿಕರು ನಿದ್ರೆಗೆ ಜಾರಿರುವ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಡಿಸೆಂಬರ್ 29 ಸೋಮವಾರ ಬೆಳಗಿನ ಜಾವ 1:30ಕ್ಕೆ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಓರ್ವ ವ್ಯಕ್ತಿ ಸಜೀವ ದಹನವಾಗಿದ್ದು, ಮೃತರನ್ನು ವಿಶಾಖಪಟ್ಟಣದ ಚಂದ್ರಶೇಖರ್ ಸುಂದರಂ (70) ಎಂದು ಗುರುತಿಸಲಾಗಿದೆ. ರೈಲಿನ ಪ್ಯಾಂಟ್ರಿ ಕಾರಿನ ಪಕ್ಕದಲ್ಲಿರುವ ಬಿ1 ಮತ್ತು ಎಂ2 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಲೋಕೋ ಪೈಲಟ್‌ಗಳು ಎಲಮಂಚಿಲಿ ಬಳಿಯ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದರು. ಬಳಿಕ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ರಕ್ಷಣಾ ಸಿಬ್ಬಂದಿ ಅಲ್ಲಿಗೆ ತಲುಪುವುದರೊಳಗೆ ಎರಡು ಬೋಗಿಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು.
ಅಗ್ನಿ ಅವಘಡದಿಂದ ಇಡೀ ರೈಲ್ವೆ ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿತ್ತು. ಬಳಿಕ ಅನಕಪಲ್ಲಿ, ಎಲಮಂಚಿಲಿ ಮತ್ತು ನಕ್ಕಪಲ್ಲಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದುಬಂದಿದೆ.
ಲೋಕೋ ಪೈಲೆಟ್ ಬ್ರೇಕ್ ಹಾಕಿದ ಕಾರಣ ಬಿ1 ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಬಿ1 ಬೋಗಿಯಲ್ಲಿದ್ದ ವಿಶಾಖಪಟ್ಟಣದ ಮೂಲದ ಚಂದ್ರಶೇಖರ್ ಸುಂದರ್ ಎಂಬುವರು ಮೃತಪಟ್ಟಿದ್ದಾರೆ. ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಪ್ರಯಾಣಿಕರ ವಸ್ತುಗಳು ಸುಟ್ಟು ಭಸ್ಮ ಆಗಿವೆ ಎಂದು ತಿಳಿದುಬಂದಿದೆ.
ಈ ಘಟನೆ ಸಂಭವಿಸುತ್ತಿದ್ದಂತೆ ವಿಶಾಖಪಟ್ಟಣ-ವಿಜಯವಾಡ ಮಾರ್ಗದ ಎಲ್ಲಾ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಬೆಳಗಿನ ಜಾವ ಪ್ರಯಾಣಿಕರನ್ನು ಬೇರೆ ರೈಲಿನಲ್ಲಿ ಅವರ ಸ್ಥಳಗಳಿಗೆ ಕಳುಹಿಸುವ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳ ಪ್ರಕಾರ, ಕೋಚ್ ಸಂಖ್ಯೆ ಬಿ -1 ಮತ್ತು ಎಂ -2 ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಗಿವೆ. ರೈಲು ಸಂಖ್ಯೆ 18189 ಟಾಟಾನಗರ-ಎರ್ನಾಕುಲಂ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಬೋಗಿ ಸಂಖ್ಯೆ ಬಿ -1 ಮತ್ತು ಎಂ -2 ಬೆಂಕಿಗೆ ಆಹುತಿಯಾಗಿ ತೀವ್ರವಾಗಿ ಹಾನಿಗೊಳಗಾಗಿವೆ. ಬೆಂಕಿ ಹೊತ್ತಿಕೊಂಡ ವೇಳೆ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಮತ್ತು ಮತ್ತೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಶಾಖಪಟ್ಟಣಂನ ಸುಮಾರು 66 ಕಿಲೋ ಮೀಟರ್ ದೂರದಲ್ಲಿರುವ ಯಲಮಂಚಿಲಿ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ಸದ್ಯ ಇದೀಗ ಹಾನಿಗೊಳಗಾದ ಎರಡು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ. ಹಾನಿಗೊಳಗಾದ ಬೋಗಿಗಳಲ್ಲಿರುವ ಪ್ರಯಾಣಿಕರನ್ನು ಅವರು ತಲುಪಬೇಕಾಗಿರುವ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿದುಬಂದಿದೆ.












Click it and Unblock the Notifications