EPS-95 ಪಿಂಚಣಿದಾರರಿಗೆ ಗುಡ್‌ನ್ಯೂಸ್? ₹7,500 ಕನಿಷ್ಠ ಪಿಂಚಣಿ ಹೆಚ್ಚಳದ ಬಗ್ಗೆ ಲೋಕಸಭೆಯಲ್ಲಿ ಸರ್ಕಾರದ ಮಾಹಿತಿ
ಇಪಿಎಸ್-95 ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನು 1,000 ರಿಂದ 7,500ಕ್ಕೆ ಏರಿಸಬೇಕು ಎನ್ನುವ ಬೇಡಿಕೆ ಬಹಳ ಸಮಯದಿಂದ ಕೇಳುತ್ತಲೇ ಬಂದಿದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ಪಿಂಚಣಿ ಹೆಚ್ಚಳವನ್ನು ಘೋಷಿಸಲಿಲ್ಲ. ಕನಿಷ್ಠ ಪಿಂಚಣಿಯನ್ನು ಒಂದು ಸಾವಿರದಲ್ಲಿಯೇ ಇರಿಸಿಕೊಂಡಿದೆ. ಇದೀಗ ಇದೇ ವಿಚಾರ ಲೋಕಸಭೆಯಲ್ಲಿಯೂ ಸದ್ದು ಮಾಡಿದೆ. ಇತ್ತೀಚೆಗೆ ಅಂದರೆ ಆಗಸ್ಟ್ 10 ರಂದು ಲೋಕಸಭೆಯಲ್ಲಿ ಈ ವಿಚಾರದ ಚರ್ಚೆ ನಡೆದಿದೆ. ಈ ಬಗ್ಗೆ ಪ್ರಶ್ನೆಯನ್ನೂ ಎತ್ತಲಾಗಿದೆ.
ಲೋಕಸಭೆಯಲ್ಲಿ 7,500 ಕನಿಷ್ಠ ಪಿಂಚಣಿ ವಿಷಯ ಪ್ರಸ್ತಾಪ
ಇಪಿಎಸ್-1995 ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನು ತಿಂಗಳಿಗೆ 7,500 ರೂಪಾಯಿಗೆ ಹೆಚ್ಚಿಸುವ ಯೋಜನೆ ಇದೆಯೇ ಎಂದು ಲೋಕಸಭಾ ಸಂಸದ ರಾಮ್‌ವೀರ್ ಸಿಂಗ್ ಬಿಧುರಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಇಪಿಎಸ್-1995 ಪಿಂಚಣಿದಾರರು ಮತ್ತು ಪಿಂಚಣಿ ಪ್ರಯೋಜನಗಳನ್ನು ಪಡೆಯುತ್ತಿರುವವರ ಬಗ್ಗೆಯೂ ಅವರು ಮಾಹಿತಿ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇಪಿಎಸ್-1995 ಪಿಂಚಣಿದಾರರಿಗೆ ಸರ್ಕಾರವು ಪ್ರಸ್ತುತ ತಿಂಗಳಿಗೆ 1,000 ಕನಿಷ್ಠ ಪಿಂಚಣಿಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಈ ಹಣವನ್ನು ಸರ್ಕಾರದ ಬಜೆಟ್ ಬೆಂಬಲದ ಮೂಲಕ ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ಕಾರ ಕನಿಷ್ಠ ಪಿಂಚಣಿಯನ್ನು ಏಕೆ ಹೆಚ್ಚಿಸಲಿಲ್ಲ?
ಪ್ರಶ್ನೆಗೆ ಉತ್ತರಿಸಿದ ಸರ್ಕಾರವು ತನ್ನ ಪ್ರತಿಕ್ರಿಯೆಯಲ್ಲಿ ಪಿಂಚಣಿ ನಿಧಿಯ ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಹೊಣೆಗಾರಿಕೆಗಳನ್ನು ಉಲ್ಲೇಖಿಸಿದೆ. ಇಪಿಎಸ್ ನಿಧಿಗೆ ಉದ್ಯೋಗದಾತರು ಸಂಬಳದ 8.33% ಮತ್ತು ಕೇಂದ್ರ ಸರ್ಕಾರವು 1.16% ರಷ್ಟು ಕೊಡುಗೆ ನೀಡುತ್ತಾ ಬರುತ್ತಿದೆ. ಈ ಕೊಡುಗೆಯು 15,000 ಮಾಸಿಕ ವೇತನ ಮಿತಿಗೆ ಒಳಪಟ್ಟಿರುತ್ತದೆ. ಯೋಜನೆಯಡಿಯಲ್ಲಿನ ಪ್ರಯೋಜನಗಳನ್ನು ಠೇವಣಿ ಇರಿಸಿದ ನಿಧಿಯಿಂದ ಪಾವತಿಸಲಾಗುತ್ತದೆ.
ಇಪಿಎಸ್-1995ರ ನಿಬಂಧನೆಗಳ ಪ್ರಕಾರ ನಿಧಿಯನ್ನು ವಾರ್ಷಿಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇದಲ್ಲದೆ, ಕೇಂದ್ರ ಸರ್ಕಾರವು 1,000 ಕನಿಷ್ಠ ಪಿಂಚಣಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಬಜೆಟನ್ನು ಕೂಡಾ ನೀಡುತ್ತಿದೆ. ಅಂದರೆ, ಇಪಿಎಸ್‌ಗೆ ಕೇಂದ್ರ ಸರ್ಕಾರ ನೀಡುವ 1.16% ಕೊಡುಗೆಯನ್ನು ಬಿಟ್ಟು ಹೆಚ್ಚುವರಿಯಾಗಿ ನೀಡುತ್ತಿರುವ ಹಣಕಾಸಿನ ಸಹಾಯ ಇದು.
85.85 ಲಕ್ಷ ಪಿಂಚಣಿದಾರರಿಗೆ ಇಪಿಎಸ್ ಪಿಂಚಣಿ
ಸರ್ಕಾರದ ಪ್ರಕಾರ, ಮಾರ್ಚ್ 31, 2026 ರ ಹೊತ್ತಿಗೆ 85,84,604 ಪಿಂಚಣಿದಾರರು ಇಪಿಎಸ್ ಅಡಿಯಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ. ಮಾರ್ಚ್ 31, 2026ರ ಹೊತ್ತಿಗೆ ಯೋಜನೆಯಡಿಯಲ್ಲಿ ಒಟ್ಟು 15,819.28 ಕೋಟಿ ಪಿಂಚಣಿ ಮೊತ್ತವನ್ನು ವಿತರಿಸಲಾಗಿದೆ.
ಹೆಚ್ಚಿನ ಪಿಂಚಣಿಯ ಬಗ್ಗೆಯೂ ಮಾಹಿತಿ ಒದಗಿಸಿದ ಸರ್ಕಾರ
ನವೆಂಬರ್ 4, 2022 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಅರ್ಹ ಉದ್ಯೋಗಿಗಳಿಗೆ ಅವರ ನಿಜವಾದ ಮೂಲ ವೇತನದ ಆಧಾರದ ಮೇಲೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ನೀಡಲಾಯಿತು. ಇದರ ನಂತರ, ಇಪಿಎಫ್‌ಒ ಅರ್ಹ ಉದ್ಯೋಗಿಗಳು ಮತ್ತು ಉದ್ಯೋಗದಾತರು ಜಂಟಿ ಆಯ್ಕೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಸರ್ಕಾರದ ಪ್ರಕಾರ, ಸುಪ್ರೀಂ ಕೋರ್ಟ್ ತೀರ್ಪಿನ ನಂತರ ನಿವೃತ್ತರಾದ ಅರ್ಜಿದಾರರಿಗೆ ಹೆಚ್ಚಿನ ಪಿಂಚಣಿ ಯೋಜನೆಯಡಿಯಲ್ಲಿ 149,806 ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ನೀಡಲಾಗಿದೆ.
ಯಾವಾಗಿಂದ ಸಿಗುವುದು 7,500 ರೂ. ಪಿಂಚಣಿ
ಪ್ರಸ್ತುತ, ಈ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ. ಲೋಕಸಭೆಯಲ್ಲಿ ಸರ್ಕಾರ ನೀಡಿದ ಇತ್ತೀಚಿನ ಉತ್ತರವು ಕನಿಷ್ಠ ಇಪಿಎಸ್ ಪಿಂಚಣಿಯನ್ನು 1,000 ರಿಂದ 7,500 ಕ್ಕೆ ಹೆಚ್ಚಿಸುವ ಬಗ್ಗೆ ಯಾವ ಘೋಷಣೆಯನ್ನೂ ಮಾಡಿಲ್ಲ. ಅಂದರೆ 7,500 ರೂ. ಪ್ರಸ್ತುತ ಪಿಂಚಣಿದಾರರ ಬೇಡಿಕೆಯಾಗಿದೆ.
ಇದು ಸರ್ಕಾರ ಘೋಷಿಸಿದ ಹೊಸ ಕನಿಷ್ಠ ಪಿಂಚಣಿ ಅಲ್ಲ. ಸರ್ಕಾರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದೆ. ಆದರೆ ಪಿಂಚಣಿ ನಿಧಿಯ ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಹೊಣೆಗಾರಿಕೆಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿಯೂ ಹೇಳಿದೆ. ಪ್ರಸ್ತುತ, ಇಪಿಎಸ್-95 ಅಡಿಯಲ್ಲಿ ಕನಿಷ್ಠ ಪಿಂಚಣಿ ತಿಂಗಳಿಗೆ 1,000 ಆಗಿಯೇ ಉಳಿದಿದೆ.


Click it and Unblock the Notifications
