EPF ವೇತನ ಮಿತಿ ₹25,000ಕ್ಕೆ ಏರಿಕೆ: ಉದ್ಯೋಗಿಗಳಿಗೆ ಏನು ಬದಲಾವಣೆ? ಯಾರಿಗೆ ಲಾಭ?

ಉದ್ಯೋಗಗಳಿಗೆ PF ಅಥವಾ EPF ಎನ್ನುವುದು ಪರಿಚಿತ. ಪ್ರತೀ ತಿಂಗಳು ಸಂಬಳದಿಂದ ಒಂದು ಭಾಗ PF ಖಾತೆಗೆ ಹೋಗುತ್ತದೆ. ಕಂಪನಿಯೂ ತನ್ನ ಪಾಲಿನ ಹಣವನ್ನು ಅದಕ್ಕೆ ಸೇರಿಸುತ್ತದೆ. ಮುಂದೆ ಕೆಲಸ ಬಿಟ್ಟಾಗ, ನಿವೃತ್ತಿಯಾದಾಗ ಅಥವಾ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಈ ಹಣ ಉದ್ಯೋಗಿಗೆ ಆರ್ಥಿಕ ಭದ್ರತೆ ನೀಡುತ್ತದೆ.

ಈಗ EPFಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯೊಂದು ಮುನ್ನೆಲೆಗೆ ಬಂದಿದೆ. ಕಡ್ಡಾಯ EPF ಮತ್ತು EPS ವ್ಯಾಪ್ತಿಗೆ ಬರುವ ವೇತನದ ಮಿತಿಯನ್ನು ತಿಂಗಳಿಗೆ ₹15,000ರಿಂದ ₹25,000ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಒಪ್ಪಿಗೆ ನೀಡಿದೆ.

EPF

ಆದರೆ ಇದು ಇನ್ನೂ ಅಂತಿಮವಾಗಿ ಜಾರಿಗೆ ಬಂದಿಲ್ಲ. ಕೇಂದ್ರ ಸಚಿವ ಸಂಪುಟದ ಅನುಮೋದನೆ ಬೇಕಿದೆ. ಪ್ರಸ್ತುತ ನಿರೀಕ್ಷೆಯ ಪ್ರಕಾರ, 2027ರ ಏಪ್ರಿಲ್ 1ರಿಂದ ಹೊಸ ಮಿತಿ ಜಾರಿಗೆ ಬರುವ ಸಾಧ್ಯತೆ ಇದೆ. ಅಂತಿಮ ದಿನಾಂಕವನ್ನು ಸರ್ಕಾರವೇ ನಿರ್ಧರಿಸಲಿದೆ.

ಈ ಬದಲಾವಣೆಯ ಅರ್ಥವೇನು? ತಿಂಗಳಿಗೆ ₹15,000ಕ್ಕಿಂತ ಹೆಚ್ಚು ಸಂಬಳ ಪಡೆಯುವವರಿಗೆ ಏನಾಗುತ್ತದೆ? ₹25,000 ಮಿತಿ ಎಂದರೆ ಒಟ್ಟು ಸಂಬಳವೇ ಅಥವಾ ಮೂಲ ವೇತನವೇ? ಕಂಪನಿಗಳಿಗೆ ಏನು ಹೊರೆ? ಉದ್ಯೋಗಿಗಳಿಗೆ ಏನು ಲಾಭ? ಸರಳವಾಗಿ ನೋಡೋಣ.

EPF ಮೊತ್ತದ ಹಿನ್ನೆಲೆ

ಉದ್ಯೋಗಿಯ ಭವಿಷ್ಯಕ್ಕಾಗಿ ಪ್ರತೀ ತಿಂಗಳು ಹಣ ಉಳಿಸುವ ವ್ಯವಸ್ಥೆ ಇಪಿಎಫ್‌. ಸಾಮಾನ್ಯವಾಗಿ ಉದ್ಯೋಗಿಯ ವೇತನದಿಂದ ಒಂದು ಭಾಗ PF ಖಾತೆಗೆ ಜಮೆಯಾಗುತ್ತದೆ. ಉದ್ಯೋಗದಾತ ಸಂಸ್ಥೆಯೂ ತನ್ನ ಪಾಲಿನ ಹಣವನ್ನು ಸೇರಿಸುತ್ತದೆ. ಹೀಗೆ ತಿಂಗಳು ತಿಂಗಳು ಹಣ ಸೇರುತ್ತಾ ಹೋಗುತ್ತದೆ. ಉದಾಹರಣೆಗೆ, ಇಂದು ನಿಮ್ಮ ಸಂಬಳದಿಂದ PFಗೆ ಹೋಗುವ ಹಣ ನಿಮಗೆ ಹೆಚ್ಚುವರಿ ಖರ್ಚಿನಂತೆ ಕಾಣಬಹುದು. ಆದರೆ ಹಲವು ವರ್ಷಗಳ ನಂತರ ಅದೇ ಹಣ ದೊಡ್ಡ ಮೊತ್ತವಾಗಿ ನಿಮ್ಮ ಕೈಗೆ ಬರಬಹುದು. ಇದರಿಂದ ನಿವೃತ್ತಿ ಜೀವನಕ್ಕೆ ಒಂದು ರೀತಿಯ ಹಣಕಾಸಿನ ಭದ್ರತೆ ಸಿಗುತ್ತದೆ.

EPF ಜೊತೆಗೆ EPS - Employees' Pension Scheme ಕೂಡ ಇದೆ. ಇದು ಉದ್ಯೋಗಿಯ ನಿವೃತ್ತಿ ನಂತರದ ಪಿಂಚಣಿಗೆ ಸಂಬಂಧಿಸಿದ ಯೋಜನೆ. ಅಂದರೆ, EPF ಅನ್ನು ಮುಖ್ಯವಾಗಿ ಭವಿಷ್ಯದ ಉಳಿತಾಯ ಎಂದು ನೋಡಬಹುದು. EPS ಅನ್ನು ಪಿಂಚಣಿ ವ್ಯವಸ್ಥೆ ಎಂದು ಅರ್ಥಮಾಡಿಕೊಳ್ಳಬಹುದು. ಹೀಗಾಗಿ ಈಗ ಚರ್ಚೆಯಾಗುತ್ತಿರುವ ₹25,000 ಮಿತಿ ಕೇವಲ PFಗೆ ಮಾತ್ರ ಸಂಬಂಧಿಸಿದ್ದಲ್ಲ. EPF ಜೊತೆಗೆ EPS ವ್ಯಾಪ್ತಿಗೂ ಇದರ ಪರಿಣಾಮ ಬೀಳಲಿದೆ.

ಈಗಿರುವ ನಿಯಮ ಏನು?

ಪ್ರಸ್ತುತ, ತಿಂಗಳಿಗೆ ₹15,000ವರೆಗೆ ಮೂಲ ವೇತನ (Basic Pay) ಪಡೆಯುವ ಉದ್ಯೋಗಿಗಳು ಕಡ್ಡಾಯ EPF ಮತ್ತು EPS ವ್ಯಾಪ್ತಿಗೆ ಬರುತ್ತಾರೆ. ಇಲ್ಲಿ ಒಂದು ಮುಖ್ಯ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ₹15,000 ಎಂದರೆ ಒಟ್ಟು ಸಂಬಳವಲ್ಲ. ಇದು ಮೂಲ ವೇತನಕ್ಕೆ ಸಂಬಂಧಿಸಿದ ಮಿತಿ.

ಉದಾಹರಣೆಗೆ, ಒಬ್ಬ ಉದ್ಯೋಗಿಯ ಒಟ್ಟು ಸಂಬಳ ₹30,000 ಇರಬಹುದು. ಆದರೆ ಅವರ Basic Pay ₹15,000 ಆಗಿದ್ದರೆ, ಈ ಮಿತಿಯ ಆಧಾರದ ಮೇಲೆ ಅವರು EPF ವ್ಯಾಪ್ತಿಗೆ ಬರಬಹುದು. ಅದೇ ರೀತಿ, ಒಬ್ಬರ ಒಟ್ಟು ಸಂಬಳ ₹40,000 ಇದ್ದರೂ ಅವರ Basic Pay ಎಷ್ಟು ಎಂಬುದು ಇಲ್ಲಿ ಮುಖ್ಯ.

ಈಗ ಮಿತಿ ₹25,000 ಆದರೆ ಏನಾಗುತ್ತದೆ?

ಪ್ರಸ್ತಾವನೆ ಜಾರಿಗೆ ಬಂದರೆ, ₹25,000ವರೆಗೆ Basic Pay ಪಡೆಯುವ ಉದ್ಯೋಗಿಗಳು ಕಡ್ಡಾಯ EPF ಮತ್ತು EPS ವ್ಯಾಪ್ತಿಗೆ ಬರಲಿದ್ದಾರೆ. ಅಂದರೆ, ಈಗ ₹15,000ಕ್ಕಿಂತ ಹೆಚ್ಚು Basic Pay ಇರುವ ಕಾರಣ ಕಡ್ಡಾಯ ವ್ಯಾಪ್ತಿಯ ಹೊರಗಿರುವ ಕೆಲವು ಉದ್ಯೋಗಿಗಳು ಮುಂದೆ EPF ಮತ್ತು EPS ವ್ಯಾಪ್ತಿಗೆ ಬರಬಹುದು.

ಇದು ಎಲ್ಲರಿಗೂ ಅನ್ವಯವಾಗುತ್ತದೆಯೇ? ಇಲ್ಲ. ಇದು ಮುಖ್ಯವಾಗಿ ಸಂಘಟಿತ ಖಾಸಗಿ ವಲಯದ ಉದ್ಯೋಗಿಗಳಿಗೆ ಸಂಬಂಧಿಸಿದ ಬದಲಾವಣೆ. ಪ್ರಸ್ತುತ ನಿಯಮಗಳ ಪ್ರಕಾರ, ಸಾಮಾನ್ಯವಾಗಿ 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ EPF/EPS ಕಡ್ಡಾಯ ವ್ಯಾಪ್ತಿ ಅನ್ವಯಿಸುತ್ತದೆ. ಸಣ್ಣ ಸಂಸ್ಥೆಗಳು ಕೆಲವು ಸಂದರ್ಭಗಳಲ್ಲಿ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದು. ಕೇಂದ್ರ ಸರ್ಕಾರಿ ನೌಕರರು ಇದೇ EPS ವ್ಯವಸ್ಥೆಯ ಅಡಿಯಲ್ಲಿ ಬರುವುದಿಲ್ಲ. ಅವರಿಗೆ ಪ್ರತ್ಯೇಕ ಪಿಂಚಣಿ ವ್ಯವಸ್ಥೆಗಳಿವೆ.

ಉದ್ಯೋಗಿಗಳಿಗೆ ಏನು ಲಾಭ?

ಇದರ ಪ್ರಮುಖ ಲಾಭ ಸಾಮಾಜಿಕ ಭದ್ರತೆ ಹೆಚ್ಚಾಗುವುದು. ಒಬ್ಬ ಉದ್ಯೋಗಿ ತಿಂಗಳಿಗೆ ₹20,000 Basic Pay ಪಡೆಯುತ್ತಿದ್ದಾರೆ ಎಂದುಕೊಳ್ಳಿ. ಪ್ರಸ್ತುತ ಮಿತಿ ₹15,000 ಇರುವುದರಿಂದ ಅವರು ಕಡ್ಡಾಯ EPF/EPS ವ್ಯಾಪ್ತಿಯಲ್ಲಿರದೇ ಇರಬಹುದು. ಆದರೆ ಹೊಸ ಮಿತಿ ₹25,000ಕ್ಕೆ ಏರಿದರೆ ಅವರು ಕಡ್ಡಾಯವಾಗಿ ಈ ವ್ಯವಸ್ಥೆಯೊಳಗೆ ಬರಬಹುದು. ಅಂದರೆ, ಅವರ ಸಂಬಳದ ಒಂದು ಭಾಗ ನಿಯಮಿತವಾಗಿ ಭವಿಷ್ಯದ ಉಳಿತಾಯಕ್ಕೆ ಹೋಗುತ್ತದೆ. ಉದ್ಯೋಗದಾತನ ಪಾಲಿನ ಕೊಡುಗೆಯೂ ಸೇರುತ್ತದೆ. ದೀರ್ಘಾವಧಿಯಲ್ಲಿ ಇದು ಉದ್ಯೋಗಿಗೆ ದೊಡ್ಡ ಆರ್ಥಿಕ ಭದ್ರತೆಯಾಗಬಹುದು.

ಆದರೆ ಇದರಿಂದ ಉದ್ಯೋಗಿಯ ಕೈಗೆ ಬರುವ ಸಂಬಳ ಕಡಿಮೆಯಾಗಬಹುದೇ? ಕೆಲವು ಉದ್ಯೋಗಿಗಳಿಗೆ ಆರಂಭದಲ್ಲಿ ಕೈಗೆ ಸಿಗುವ ಸಂಬಳ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಏಕೆಂದರೆ EPFನಲ್ಲಿ ಉದ್ಯೋಗಿಯ ಪಾಲಿನ ಕೊಡುಗೆ ಸಂಬಳದಿಂದ ಕಡಿತವಾಗುತ್ತದೆ. ಆದರೆ ಇದನ್ನು ಹಣ ಕಳೆದುಕೊಳ್ಳುವುದು ಎನ್ನಬಾರದು. ಕೈಗೆ ಬರುವ ಹಣ ಕಡಿಮೆಯಾದರೂ ನಿಮ್ಮ ಹೆಸರಿನಲ್ಲಿ ಭವಿಷ್ಯದ ಉಳಿತಾಯ ಹೆಚ್ಚಾಗುತ್ತದೆ. ಇದನ್ನು ಒಂದು ರೀತಿಯಲ್ಲಿ ಬಲವಂತದ ಉಳಿತಾಯ ಎಂದು ಹೇಳಬಹುದು.

ಕಂಪನಿಗಳಿಗೆ ಏನು ಪರಿಣಾಮ?

ಉದ್ಯೋಗಿಗಳಿಗೆ ಮಾತ್ರವಲ್ಲ, ಕಂಪನಿಗಳಿಗೂ ಇದರ ಪರಿಣಾಮವಿದೆ. EPF ವ್ಯವಸ್ಥೆಯಲ್ಲಿ ಉದ್ಯೋಗಿಯ ಜೊತೆಗೆ ಉದ್ಯೋಗದಾತನೂ ತನ್ನ ಪಾಲಿನ ಕೊಡುಗೆ ನೀಡಬೇಕು. ಹೀಗಾಗಿ ₹15,000 ಮತ್ತು ₹25,000ರ ನಡುವೆ Basic Pay ಇರುವ ಹೆಚ್ಚಿನ ಉದ್ಯೋಗಿಗಳು ಕಡ್ಡಾಯ EPF ವ್ಯಾಪ್ತಿಗೆ ಬಂದರೆ, ಕಂಪನಿಗಳ Payroll Cost ಹೆಚ್ಚಾಗಬಹುದು. ಅಂದರೆ, ಕಂಪನಿಯ ಒಟ್ಟಾರೆ ಉದ್ಯೋಗ ವೆಚ್ಚ ಹೆಚ್ಚಾಗಬಹುದು.

ಇದರ ಜೊತೆಗೆ ಕಂಪನಿಗಳು ತಮ್ಮ Payroll System, PF ದಾಖಲೆಗಳು, Compliance ಪ್ರಕ್ರಿಯೆಗಳು ಸೇರಿದಂತೆ ಹಲವು ವ್ಯವಸ್ಥೆಗಳನ್ನು ಬದಲಾಯಿಸಬೇಕಾಗಬಹುದು. ಅದಕ್ಕಾಗಿ ಸರ್ಕಾರ ತಕ್ಷಣವೇ ಹೊಸ ನಿಯಮ ಜಾರಿಗೆ ತರುವ ಬದಲು ಕಂಪನಿಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಮಯ ನೀಡುವ ಸಾಧ್ಯತೆಯಿದೆ.

ಸರ್ಕಾರಕ್ಕೂ ಹೆಚ್ಚುವರಿ ಹೊರೆ

EPSನಲ್ಲಿ ಉದ್ಯೋಗದಾತನ ಕೊಡುಗೆಯ ಜೊತೆಗೆ ಸರ್ಕಾರವೂ ತನ್ನ ಪಾಲಿನ ಹಣವನ್ನು ನೀಡುತ್ತದೆ. ಈ ವ್ಯವಸ್ಥೆಯಲ್ಲಿ ಮೂಲ ವೇತನದ 8.33% ಉದ್ಯೋಗದಾತನ ಪಾಲಾಗಿ ಮತ್ತು 1.16% ಸರ್ಕಾರದ ಪಾಲಾಗಿ ಪಿಂಚಣಿ ನಿಧಿಗೆ ಹೋಗುತ್ತದೆ. ಹೀಗಾಗಿ EPF/EPS ವ್ಯಾಪ್ತಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಾದಂತೆ, ಸರ್ಕಾರದ ಹಣಕಾಸಿನ ಬದ್ಧತೆಯೂ ಹೆಚ್ಚಾಗಬಹುದು.

2026-27ನೇ ಸಾಲಿನಲ್ಲಿ Employees' Pension Schemeಗೆ ₹11,144 ಕೋಟಿ ಬಜೆಟ್ ಮೀಸಲಿಡಲಾಗಿದೆ. ಹೊಸ ವೇತನ ಮಿತಿ ಜಾರಿಗೆ ಬಂದರೆ, ಈ ವ್ಯವಸ್ಥೆಯ ವ್ಯಾಪ್ತಿ ವಿಸ್ತರಿಸುವುದರಿಂದ ಸರ್ಕಾರದ ಮೇಲಿನ ಹಣಕಾಸಿನ ಹೊರೆ ಕೂಡ ಹೆಚ್ಚಾಗುವ ನಿರೀಕ್ಷೆಯಿದೆ.

₹30,000ಕ್ಕೆ ಏರಿಸುವ ಪ್ರಸ್ತಾವನೆ!

ಆರಂಭದಲ್ಲಿ EPF ವೇತನ ಮಿತಿಯನ್ನು ₹30,000ಕ್ಕೆ ಏರಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕೊನೆಗೆ ವೆಚ್ಚ ಇಲಾಖೆ ಒಪ್ಪಿಗೆ ನೀಡಿರುವ ಪ್ರಸ್ತಾವನೆ ₹25,000. ಈಗ ಈ ಪ್ರಸ್ತಾವನೆ ಕೇಂದ್ರ ಸಚಿವ ಸಂಪುಟದ ಮುಂದೆ ಹೋಗಲಿದೆ. ಸಚಿವ ಸಂಪುಟ ಒಪ್ಪಿಗೆ ನೀಡಿದ ನಂತರವೇ ಮುಂದಿನ ಹಂತಗಳು ನಡೆಯಲಿವೆ.

ಪ್ರಸ್ತುತ ನಿರೀಕ್ಷೆಯ ಪ್ರಕಾರ 2027ರ ಏಪ್ರಿಲ್ 1ರಿಂದ ಹೊಸ EPF ವೇತನ ಮಿತಿ ಜಾರಿಗೆ ಬರಬಹುದು. ಆದರೆ ಇದನ್ನು ಅಂತಿಮ ದಿನಾಂಕ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ. ಮೊದಲು ಕೇಂದ್ರ ಸಚಿವ ಸಂಪುಟದ ಅನುಮೋದನೆ ಬೇಕು. ಅದಾದ ನಂತರ ಕಂಪನಿಗಳಿಗೆ ತಮ್ಮ Payroll System ಮತ್ತು Compliance ವ್ಯವಸ್ಥೆಗಳನ್ನು ಬದಲಾಯಿಸಲು ಸಮಯ ಬೇಕಾಗುತ್ತದೆ. ಹೀಗಾಗಿ ಸರ್ಕಾರವು ಉದ್ಯೋಗದಾತರಿಗೆ ಕೆಲವು ತಿಂಗಳ Transition Period ನೀಡುವ ಸಾಧ್ಯತೆಯಿದೆ.

EPFನ ವೇತನ ಮಿತಿ ಬಹಳ ವರ್ಷಗಳಿಂದ ಬದಲಾಗಿರಲಿಲ್ಲ. 2014ರ ಸೆಪ್ಟೆಂಬರ್‌ನಲ್ಲಿ ಈ ಮಿತಿಯನ್ನು ₹6,500ರಿಂದ ₹15,000ಕ್ಕೆ ಹೆಚ್ಚಿಸಲಾಗಿತ್ತು. ಅಂದರೆ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ₹15,000ರ ಮಿತಿಯೇ ಮುಂದುವರಿದಿದೆ. ಈ ಅವಧಿಯಲ್ಲಿ ದೇಶದಲ್ಲಿ ಸಂಬಳದ ಮಟ್ಟ, ಜೀವನ ವೆಚ್ಚ ಮತ್ತು ಉದ್ಯೋಗ ಮಾರುಕಟ್ಟೆ ಸಾಕಷ್ಟು ಬದಲಾಗಿದೆ. ಹೀಗಾಗಿ ಈಗ ₹25,000ಕ್ಕೆ ಮಿತಿ ಹೆಚ್ಚಿಸುವ ಪ್ರಸ್ತಾವನೆ ಬಂದಿದೆ.

ಇದು ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿಯೇ?

ಒಟ್ಟಾರೆಯಾಗಿ ನೋಡಿದರೆ, ದೀರ್ಘಾವಧಿಯ ದೃಷ್ಟಿಯಿಂದ ಇದು ಉದ್ಯೋಗಿಗಳಿಗೆ ಒಳ್ಳೆಯ ಬದಲಾವಣೆ. ಕಾರಣ, ಹೆಚ್ಚು ಉದ್ಯೋಗಿಗಳು ನಿವೃತ್ತಿ ಉಳಿತಾಯ ಮತ್ತು ಪಿಂಚಣಿ ವ್ಯವಸ್ಥೆಯೊಳಗೆ ಬರುತ್ತಾರೆ. ಆದರೆ ಅಲ್ಪಾವಧಿಯಲ್ಲಿ ಉದ್ಯೋಗಿಯ ಕೈಗೆ ಸಿಗುವ ಸಂಬಳ ಸ್ವಲ್ಪ ಕಡಿಮೆಯಾಗಬಹುದು. ಕಂಪನಿಗಳಿಗೂ ಹೆಚ್ಚುವರಿ ವೆಚ್ಚ ಬರಬಹುದು. ಹೀಗಾಗಿ ಇದರ ಪರಿಣಾಮವನ್ನು "ಇಂದು ಸ್ವಲ್ಪ ಕಡಿಮೆ ಸಂಬಳ- ನಾಳೆ ಹೆಚ್ಚು ಭದ್ರತೆ" ಎಂದು ಸರಳವಾಗಿ ಅರ್ಥಮಾಡಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+