ಕಾಶ್ಮೀರದ ಸೋಪೋರೆಯಲ್ಲಿ ಎನ್ಕೌಂಟರ್, ಇಬ್ಬರು ಉಗ್ರರು ಬಲಿ
ಸೋಪೋರೆ, ಜೂನ್ 1: ಜಮ್ಮು ಮತ್ತು ಕಾಶ್ಮೀರದ ಸೋಪೋರೆನಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಉಗ್ರರ ಜತೆ ಇಂದು ಬೆಳ್ಳಂಬೆಳಿಗ್ಗೆ ಆರಂಭವಾಗಿದ್ದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಬೆಳಿಗ್ಗೆ ಸೋಪೋರೆಯ ನಾಠಿಪೋರಾ ಪ್ರದೇಶದಲ್ಲಿ ಗುಂಡಿನ ಚಕಮಕಿ ಆರಂಭವಾಗಿತ್ತು. ಕನಿಷ್ಠ ಇಬ್ಬರು ಶಂಕಿತ ಉಗ್ರರು ಅಡಗಿಕೊಂಡಿರಬಹುದು ಎಂದುಕೊಳ್ಳಲಾಗಿತ್ತು. ಇದೀಗ ಇಬ್ಬರೂ ಸಾವಿಗೀಡಾಗಿರುವುದರಿಂದ ಸೇನೆ ಕೂಂಬಿಂಗ್ ಆಪರೇಷನ್ ಆರಂಭಿಸಿದೆ.

ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರ ಸಬ್ಜರ್ ಭಟ್ ಸಾವಿಗೀಡಾದ ವಾರದೊಳಗೆ ಈ ಎನ್ಕೌಂಟರ್ ನಡೆಯುತ್ತಿದೆ. ಇನ್ನು ಸಬ್ಜರ್ ಭಟ್ ನಂತರ ಒಟ್ಟು ಆರು ಉಗ್ರರನನ್ನು ಸೇನೆ ಹೊಡೆದುರುಳಿಸಿದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು .
ಚಳಿಗಾಲ ಮುಗಿಯುವ ಮೊದಲು ಎಲ್ಲಾ ಉಗ್ರರನ್ನು ಮುಗಿಸಲು ಸೇನೆ ಸಜ್ಜಾಗಿದೆ. ಈ ಕಾರಣಕ್ಕೆ ಕಾಶ್ಮೀರಕ್ಕೆ 4,000 ಸೈನಿಕರನ್ನು ಕಳುಹಿಸಲಾಗಿದೆ. ಇನ್ನು 12 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನೂ ಸಿದ್ದಪಡಿಸಲಾಗಿದೆ.
ಈಗಾಗಲೇ ಈ ಮೋಸ್ಟ್ ವಾಂಟೆಡ್ ಉಗ್ರರನ್ನು ಹುಡುಕಾಡುತ್ತಿರುವುದಾಗಿ ಸೇನೆಯ ಮೂಲಗಳು 'ಒನ್ ಇಂಡಿಯಾ'ಗೆ ಮಾಹಿತಿ ನೀಡಿವೆ. ಈ ಉಗ್ರರನ್ನು ಸದೆಬಡಿಯುವವರೆಗೆ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಸೇನೆ ಅಭಿಪ್ರಾಯಪಟ್ಟಿದೆ.












Click it and Unblock the Notifications