ಸಂಪಾದಕೀಯ: ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು ಗಾಜಿಯಾಬಾದ್ ದುರಂತ
ಗಾಜಿಯಾಬಾದ್‌ನಲ್ಲಿ ಮೂವರು ಪುಟ್ಟ ಬಾಲಕಿಯರು ವಿಡಿಯೊ ಗೇಮ್ ವ್ಯಸನಕ್ಕೆ ದಾಸರಾಗಿ ಜೀವ ಬಿಟ್ಟ ದುರಂತ ಭಾರತದ ಎಲ್ಲ ಪೋಷಕರನ್ನು ಒಂದು ದುಸ್ವಪ್ನವಾಗಿ ಬಹುಕಾಲ ಕಾಡಲಿದೆ. ಈ ಹಿಂದೆ ಬ್ಲ್ಯೂವೇಲ್ ವಿಡಿಯೊ ಗೇಮ್‌ನ ಟಾಸ್ಕ್‌ಗೆ ಓರ್ವ ಬಾಲಕ ಮೃತಪಟ್ಟ ನಂತರ ಮಕ್ಕಳ ಮೇಲೆ ಆನ್‌ಲೈನ್ ಗೇಮ್ ವ್ಯಸನ ಉಂಟು ಮಾಡುವ ಪರಿಣಾಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ನಂತರ ಎಲ್ಲ ವಿಷಯಗಳಂತೆ ಇದೂ ತಣ್ಣಗಾಯಿತು. ಇದೀಗ ಗಾಜಿಯಾಬಾದ್ ದುರಂತದ ನಂತರ ಎಲ್ಲರೂ ಬ್ಲ್ಯೂವೇಲ್ ಪ್ರಕರಣ ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನು ಸ್ವಲ್ಪ ದಿನಕ್ಕೆ ಗಾಜಿಯಾಬಾದ್ ಪ್ರಕರಣವೂ ತಣ್ಣಗಾಗಬಹುದು. ಅದು ಮತ್ತೊಮ್ಮೆ ನೆನಪಾಗಲು ಇನ್ನೊಂದು ಮುಗ್ಧ ಕಂದಮ್ಮ ಜೀವ ಬಿಡಬೇಕೇನೋ?
ಮಕ್ಕಳನ್ನೇಕೆ ಮೊಬೈಲ್ ಹೀಗೆ ಆವರಿಸಿಕೊಳ್ಳುತ್ತಿದೆ? ಅದರಿಂದ ಮಕ್ಕಳನ್ನು ಪಾರು ಮಾಡುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಕೊರೊನಾ ದೇಶವನ್ನು ಆವರಿಸಿದ್ದ ಕಾಲದಲ್ಲಿ ಆನ್‌ಲೈನ್ ಕ್ಲಾಸ್ ಕಾರಣಕ್ಕೆ ಮಕ್ಕಳ ಕೈಗೆ ವ್ಯಾಪಕವಾಗಿ ಮೊಬೈಲ್ ಬಂತು. ನಂತರ ಕೊರೊನಾ ಹಿಮ್ಮೆಟ್ಟಿದರೂ ಮೊಬೈಲ್ ಚಟ ಹಿಮ್ಮೆಟ್ಟಲಿಲ್ಲ. ತೊಟ್ಟಿಲಿನಲ್ಲಿ ಆಡುವ ಹಸುಗೂಸಿನಿಂದ ಹಿಡಿದು ಕಾಲೇಜುಗಳಿಗೆ ತೆರಳುವ ಹರೆಯದ ಜೀವಗಳು ಮೊಬೈಲ್‌ನಲ್ಲಿ ಕೀಲಿಸುವ ಕಣ್ಣು ತೆಗೆಯುವುದೇ ಇಲ್ಲ. ಮಕ್ಕಳು ಅತ್ತರೂ, ಹಟ ಮಾಡಿದರೂ, ಅಮ್ಮ ಬೇಕೆಂದರೂ, ಅಪ್ಪ ಬೇಕೆಂದರೂ, ಊಟ ಮಾಡಿಸುವುದು .. ಹೀಗೆ ಹೆತ್ತವರಿಗೆ ಮಕ್ಕಳನ್ನು ಸಲಹುವಲ್ಲಿ ಯಾವುದೇ ಕಷ್ಟ ಎದುರಾದರೂ ಮೊಬೈಲ್ ಒಂದೇ ಪರಿಹಾರ ಎನ್ನುವಂತೆ ಆಗಿದೆ.

ಮಕ್ಕಳನ್ನು ಸಂಭಾಳಿಸಲು ಮೊಬೈಲ್ ಒಂದನ್ನೇ ಅಸ್ತ್ರ, ಸಾಧನ ಮಾಡಿಕೊಂಡಿರುವ ಪೋಷಕರನ್ನೊಬ್ಬರೇ ದೂರಿಯೂ ಹೆಚ್ಚು ಪ್ರಯೋಜನವಿಲ್ಲ. ಗಂಡ-ಹೆಂಡತಿ ಇಬ್ಬರೂ ದುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಹಾಗೂ ಹಿರಿಯರ ಬೆಂಬಲವಿಲ್ಲದ ಕುಟುಂಬಗಳಲ್ಲಿ ಮಕ್ಕಳು ಹೊರೆ ಎನಿಸುತ್ತಾರೆ. ಇಂಥ ಹೊರೆಯನ್ನು ತಾತ್ಕಾಲಿಕವಾಗಿಯಾದರೂ ಕಡಿಮೆ ಮಾಡಿಕೊಳ್ಳಬೇಕೆಂದರೆ ಮಗುವಿಗೆ ಅಮ್ಮ-ಅಪ್ಪನಿಗಿಂತಲೂ ಅಪ್ಯಾಯಮಾನವಾದ ಮತ್ತೊಂದು ಸಾಧನ ಬೇಕು. ಆ ಸಾಧನವನ್ನು ಮೊಬೈಲ್ ತುಂಬಿದೆ. ಹೀಗೆ ಮೊಬೈಲ್ ಎನ್ನುವುದು ಏಕಕಾಲಕ್ಕೆ ಹತ್ತವರಿಗೂ, ಮಕ್ಕಳಿಗೂ ಆಸರೆಯಾಗಿಬಿಟ್ಟಿದೆ.
ಇದನ್ನೂ ಓದಿ: ಮಕ್ಕಳನ್ನು ಕಾಡುವ ಗೇಮಿಂಗ್ ವ್ಯಸನಕ್ಕೆ ಪೋಷಕರೂ ಕಾರಣ: ಡಾ.ರೂಪಾ ರಾವ್ ಬರಹ
ಪೋಷಕರ ಈ ವರ್ತನೆಯ ನೇರ ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ. 'ನನ್ನ ಮಗಳು ಫೋನ್ ಬಿಟ್ಟು ಇರೋದೇ ಇಲ್ಲ. ಅವಳು ಊಟ ಮಾಡುವಾಗಲೂ ಫೋನ್ ಇರಲೇಬೇಕು. ಅದರಲ್ಲೇ ಅವಳ ಆಟ' ಎಂದು ತಾಯಿಯೊಬ್ಬಳು ದೂರಿಕೊಳ್ಳುವಾಗಲೂ ಹೆಮ್ಮೆಯ ಧ್ವನಿ ಇದ್ದರೆ ಏನು ಹೇಳಬೇಕು? ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಡಿಜಿಟಲ್ ವ್ಯಸನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಈ ಹಿನ್ನೆಲೆಯಲ್ಲಿಯೇ ಗ್ರಹಿಸಬೇಕು.
ಡಿಜಿಟಲ್ ವ್ಯಸನವನ್ನು ಮಕ್ಕಳ ಸಾಮಾಜಿಕ ವರ್ತನೆಯ ಹಿನ್ನೆಲೆಯಲ್ಲಿಯೂ ಪರಿಶೀಲಿಸಬಹುದು. ಮಕ್ಕಳು ಒಂದು ದೇಶದ ಭವಿಷ್ಯ ಎನಿಸಿಕೊಳ್ಳುತ್ತಾರೆ. ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯು ಹೆತ್ತವರಿಗೆ, ಆ ಕುಟುಂಬಕ್ಕೆ ಎಷ್ಟಿರುತ್ತದೆಯೋ ಸಮಾಜಕ್ಕೆ, ದೇಶಕ್ಕೂ ಅಷ್ಟೇ ಇರುತ್ತದೆ. 'ನೈತಿಕ ಪೊಲೀಸ್‌ಗಿರಿ'ಯ (Moral Policing) ಬಗ್ಗೆ ಆಗಾಗ ಚರ್ಚೆಯಾಗುವುದು ಹೊಸತಲ್ಲ. ಆದರೆ 'ಸಾಮಾಜಿಕ ಪಾಲನೆ' (Social Parenting) ಬಗ್ಗೆ ಅಪರೂಪಕ್ಕೆ ಒಮ್ಮೆಯಾದರೂ ಚರ್ಚೆ ಆಗುವುದೇ ಇಲ್ಲ.
ಒಂದು ಸಮಾಜವಾಗಿ ನಾವೆಲ್ಲರೂ ಮಕ್ಕಳ ಬಾಲ್ಯ ಸುಂದರಗೊಳಿಸುವ ಜವಾಬ್ದಾರಿ ಹೊರದಿದ್ದರೆ ಡಿಜಿಟಲ್ ವ್ಯಸನಕ್ಕೆ ಬಲಿಯಾಗುವ ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಪುರಾಣ ಕಾಲದ ರಕ್ತಬೀಜಾಸುರ ರಕ್ತದ ಕಣಗಳಿಂದ ವೃದ್ಧಿಸುತ್ತಿದ್ದ. ಆಧುನಿಕ ಕಾಲದ ಮೊಬೈಲ್ ಪಿಡುಗು ಅದಕ್ಕಿಂತ ಹಲವು ಪಟ್ಟು ಸೂಕ್ಷ್ಮವೂ ಪ್ರಬಲವೂ ಆಗಿಬಿಟ್ಟಿದೆ. ಒಮ್ಮೆ ಒಂದು ಆಪ್ ಇನ್‌ಸ್ಟಾಲ್ ಮಾಡಿಕೊಂಡು ನೋಡಿದರೆ ಸಾಕು. ಬಿಟ್ಟೆನೆಂದರೂ ಬಿಡದ ಮಾಯೆಯ ಚಟವಾಗಿ ಮನಸ್ಸನ್ನು ಆವರಿಸುತ್ತದೆ. ದೇಹ ಚಡಪಡಿಸುವಂತೆ ಮಾಡುತ್ತದೆ. ಎಲ್ಲಿಂದ ಸರಿ ಮಾಡುವುದು? ಯಾರು ಸರಿ ಮಾಡಬೇಕು? ಒಂದು ಸಮಾಜವಾಗಿ ನಾವು ಕೇಳಿಕೊಳ್ಳಬೇಕಾದ, ಉತ್ತರ ಹುಡುಕಬೇಕಾದ, ಅಂತರಾಳ ಶೋಧಿಸಬೇಕಾದ ಪ್ರಶ್ನೆಗಳಿವು.
ಇದನ್ನೂ ಓದಿ: ಆನ್‌ಲೈನ್ ಗೇಮ್ ವ್ಯಸನಕ್ಕೆ ಬಲಿಯಾದ ಮೂವರು ಸಹೋದರಿಯರು; ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರ ಕಳವಳ












Click it and Unblock the Notifications