
ಭಾರೀ ವಿವಾದ ಹುಟ್ಟುಹಾಕಿದ ಪ್ರಧಾನಿ ಮೋದಿ ರೋಡ್ ಶೋ?
ಗುಜರಾತ್ ಅಸೆಂಬ್ಲಿ ಚುನಾವಣೆಗೆ ಎರಡೂ ಹಂತದ ಮತದಾನ ಮುಕ್ತಾಯಗೊಂಡಿದೆ, ಮತಗಟ್ಟೆ ಸಮೀಕ್ಷೆ ಕೂಡಾ ಹೊರಬಿದ್ದಿದೆ. ಎಲ್ಲಾ ವಾಹಿನಿಗಳು ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎನ್ನುವ ಭವಿಷ್ಯವನ್ನು ನುಡಿದಿದೆ.
ಮತಗಟ್ಟೆ ಸಮೀಕ್ಷೆಯ ಸತ್ಯಾಸತ್ಯಾತೆ ಇನ್ನೆರಡು ದಿನಗಳಲ್ಲಿ (ಡಿಸೆಂಬರ್ 8) ಬಹಿರಂಗವಾಗಲಿದೆ. ಇವೆಲ್ಲದರ ನಡುವೆ, ಎರಡನೇ ಹಂತದ ಮತದಾನದ ವೇಳೆ ಪ್ರಧಾನಿ ಮೋದಿ ಮತ ಚಲಾಯಿಸಲು ಆಗಮಿಸಿದ್ದರು. ಅದು ಈಗ ವಿರೋಧ ಪಕ್ಷಗಳಿಗೆ ಆಹಾರವಾಗಿದೆ.
ಕೈಕುಲುಕಿದರು, ಚಹಾ ಕುಡಿದರು, ಹಾಸ್ಯ ಚಟಾಕೆ ಹಾರಿಸಿದರು..: ಪ್ರಧಾನಿ ಮೋದಿ ಜೊತೆ ಬದ್ಧ ವೈರಿಗಳ ಅನ್ಯೋನ್ಯತೆ
ಸೋಲಿನ ಹತಾಶೆಯಲ್ಲಿರುವ ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ಗೂಬೆ ಕೂರಿಸಲು ಏನಾದರೂ ಒಂದು ಕಾರಣವನ್ನು ಹುಡುಕುತ್ತದೆ ಎಂದು ಬಿಜೆಪಿ ಲೇವಡಿ ಮಾಡಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ಸ್ಪೆಷಲ್ ಪೀಪಲ್' ಎಂದು ಮೋದಿಯವರನ್ನು ಲೇವಡಿ ಮಾಡಿದ್ದಾರೆ.
ಎರಡನೇ ಹಂತದ ಮತದಾನದ ವೇಳೆ ಪ್ರಧಾನಿ ಮೋದಿ ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್ ಸಿಎಂ ಭೂಪೇಂದ್ರ ಪಾಟೀಲ್, ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಇಸುದನ್ ಗಢವಿ ಕೂಡಾ ಮತ ಚಲಾಯಿಸಿದ್ದರು. ಮೋದಿ ಮತ ಚಲಾವಣೆ ವೇಳೆ ನಡೆದಿದ್ದೇನು?

ಮೋದಿ ನಡೆದುಕೊಂಡು ಬಂದು ಮತ ಚಲಾಯಿಸಿದ್ದರು
ಎರಡನೇ ಹಂತದ ಚುನಾವಣೆಯ (ಡಿಸೆಂಬರ್ 5) ದಿನ ಪ್ರಧಾನಿ ಮೋದಿ, ಅಹಮದಾಬಾದಿನ್ ರಾನಿಪ್ ಪ್ರದೇಶದಲ್ಲಿರುವ ನಿಶಾನ್ ಪ್ರೌಢಶಾಲೆಯಲ್ಲಿರುವ ಮತಕೇಂದ್ರದಲ್ಲಿ ಮತ ಚಲಾಯಿಸಲು ಆಗಮಿಸಿದ್ದರು. ಆದರೆ, ಮೋದಿ ಸೀದಾ ಮತಗಟ್ಟೆಗೆ ಆಗಮಿಸದೇ ಸ್ವಲ್ಪ ದೂರ ತಮ್ಮ ವಾಹನವನ್ನು ಮತ್ತು ಎಸ್ಕಾರ್ಟ್ ಗಳನ್ನು ನಿಲ್ಲಿಸಿ ನಡೆದುಕೊಂಡು ಬಂದು ಮತ ಚಲಾಯಿಸಿದ್ದರು.

ಸಹೋದರ ಸೋಮಾಭಾಯ್ ಮೋದಿ ಮನೆಗೂ ಭೇಟಿ
ಮತ ಚಲಾಯಿಸಿದ ನಂತರ ಮತದಾನ ಕೇಂದ್ರದ ಬಳಿಯಿರುವ ತಮ್ಮ ಸಹೋದರ ಸೋಮಾಭಾಯ್ ಮೋದಿ ಮನೆಗೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆ ವೇಳೆ, ಇಕ್ಕೆಲೆಯಲ್ಲಿ ನಿಂತಿದ್ದ ಜನರತ್ತ ಮೋದಿ ಕೈಬೀಸಿದ್ದರು. ಇದೊಂದು ರಾಜಕೀಯ ಗಿಮಿಕ್, ಮತದಾರರ ಮೇಲೆ ಪ್ರಭಾವ ಬೀರಲು ನಡೆಸಿದ ವ್ಯವಸ್ಥಿತ ಕಾರ್ಯಕ್ರಮ'ಎಂದು ಗುಜರಾತ್ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಮಮತಾ ಬ್ಯಾನರ್ಜಿ ಕೂಡ ಪ್ರಧಾನಿ ಮೋದಿ ನಡೆಯನ್ನು ಟೀಕಿಸಿದ್ದಾರೆ.
ಮೋದಿಯವರು ನಡೆದುಕೊಂಡು ಹೋಗಿ ಮತ ಚಲಾಯಿಸಿದ್ದು ರೋಡ್ ಶೋ ಎನ್ನುವ ವಿವಾದ ಈಗ ಸುತ್ತಿಕೊಂಡಿದೆ. ರೋಡ್ ಶೋನ್ ಅಲ್ಲ ಇದು ವಾಕಿಂಗ್ ಅಷ್ಟೇ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಆದರೆ ಬಿಜೆಪಿಯ ಸ್ಪಷ್ಟನೆಗೆ ಸೊಪ್ಪು ಹಾಕದ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡಲು ನಿರ್ಧರಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರಧಾನಿ ಮೋದಿ ನಡೆಯನ್ನು ಟೀಕಿಸಿದ್ದಾರೆ.

ಇದು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ
"ಇದು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ, ರಾಜಕೀಯ ಪಕ್ಷಗಳು ಆಯೋಗದ ಕಾನೂನನ್ನು ಗೌರವಿಸಬೇಕಿದೆ. ಸರ್ವೋಚ್ಚ ನ್ಯಾಯಾಲಯ ಹೇಳಿದಂತೆ, ಕೇಂದ್ರ ಚುನಾವಣಾ ಆಯೋಗಕ್ಕೆ ಮುಖ್ಯಸ್ಥರನ್ನು ನೇಮಿಸುವಾಗ ಕೆಲವೊಂದು ಪದ್ದತಿಯನ್ನು ಪಾಲಿಸಬೇಕಿದೆ"ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಸುಪ್ರೀಂಕೋರ್ಟ್ ಕೆಲವು ದಿನಗಳ ಹಿಂದೆ ಆಯೋಗದ ಕಮಿಷನರ್ ನೇಮಕದ ಬಗ್ಗೆ ಹೇಳಿಕೆಯನ್ನು ನೀಡಿತ್ತು.