ಜಲ ನಿರ್ವಹಣೆಯಲ್ಲಿ ಎಐ ಬಳಕೆ ಅಗತ್ಯ, ತಂತ್ರಜ್ಞಾನ ಜತೆ ಮಾನವ ಸಹಕಾರ ಬೇಕು: ತುಷಾರ್ ಗಿರಿನಾಥ್
ಬೆಂಗಳೂರು: ಬೆಂಗಳೂರು ಜಲಮಂಡಳಿ ಎಐ ತಂತ್ರಜ್ಞಾನ ಅಳಡಿಸಿಕೊಂಡು ಯಶಸ್ಸು ಕಂಡಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸಲು ಪ್ಲ್ಯಾನ್ ಮಾಡಿಕೊಂಡಿದೆ. 'ಕೇವಲ ತಂತ್ರಜ್ಞಾನವೊಂದೇ ಎಲ್ಲ ಬದಲಾವಣೆಗಳನ್ನೂ ತರಲು ಸಾಧ್ಯವಿಲ್ಲ. ಆ ತಂತ್ರಜ್ಞಾನದ ಜೊತೆಗೆ ಸಂಸ್ಥೆಗಳು, ಸರ್ಕಾರದ ವ್ಯವಸ್ಥೆ ಹಾಗೂ ಮಾನವನ ಸಹಕಾರ ಬೆರೆತಾಗ ಮಾತ್ರವೇ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಗಳು ಸಂಪೂರ್ಣ ಯಶಸ್ಸು ಕಾಣಲು ಸಾಧ್ಯ' ಎಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ 'ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026'ರ ವೇದಿಕೆಯಲ್ಲಿ ಅವರು ಮಾತನಾಡಿದರು. ಭವಿಷ್ಯದ ನಗರ ಆಡಳಿತದಲ್ಲಿ ಒಗ್ಗಟ್ಟಿನ ಕಾರ್ಯಾಚರಣೆ ಮುಖ್ಯವಾಗಿರುತ್ತದೆ. ಜಲ ಸಂರಕ್ಷಣೆ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಇಸ್ರೇಲ್ ಸಾಧಿಸಿರುವ ಅದ್ಭುತ ಪ್ರಗತಿಯನ್ನು ವಿವರಿಸಿದರು.

ಯಾವುದೇ ಒಂದು ನಾವೀನ್ಯತಾ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಎಲ್ಲಾ ವಲಯಗಳ ಪರಸ್ಪರ ಸಹಕಾರ ಅತ್ಯಗತ್ಯ. ಕೇವಲ ತಂತ್ರಜ್ಞಾನದ ಅಳವಡಿಕೆಯಷ್ಟೇ ಅಲ್ಲದೆ, ಸರ್ಕಾರಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು (ಸ್ಟಾರ್ಟ್-ಅಪ್‌ಗಳು), ಕೈಗಾರಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂಬುದಕ್ಕೆ ಇಸ್ರೇಲ್ ದೇಶದ ಯಶಸ್ಸೇ ಬಹುದೊಡ್ಡ ಸಾಕ್ಷಿಯಾಗಿದೆ. ಜಲ ನಿರ್ವಹಣೆಯ ವಿಚಾರದಲ್ಲಿ ನಾವಿಂದು ಅದೇ ಮಾದರಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇಂದು ಕೃತಕ ಬುದ್ಧಿಮತ್ತೆಯು (ಎಐ) ಎಲ್ಲಾ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿದ್ದು, ಕುಡಿಯುವ ನೀರು ಪೂರೈಕೆ ಹಾಗೂ ನಿರ್ವಹಣೆಯಂತಹ ಅತ್ಯಂತ ಸೂಕ್ಷ್ಮ ವಲಯದಲ್ಲಿಯೂ ಇದರ ಬಳಕೆ ಅನಿವಾರ್ಯವಾಗಿದೆ. ನಾವು ಎಐ ತಂತ್ರಜ್ಞಾನವನ್ನು ಬೆಂಗಳೂರು ಜಲಮಂಡಳಿಯಲ್ಲಿ ಎಷ್ಟರಮಟ್ಟಿಗೆ ಹಾಗೂ ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಯಶಸ್ವಿಯಾಗಿ ತೋರಿಸಿಕೊಟ್ಟರೆ, ಜಾಗತಿಕ ಮಟ್ಟದಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ. ಇದೇ ರೀತಿಯ ನೀರಿನ ಸವಾಲುಗಳನ್ನು ಎದುರಿಸುತ್ತಿರುವ ವಿಶ್ವದ ಅನೇಕ ದೇಶಗಳಿಗೆ ನಾವೇ ನೇರವಾಗಿ ಪರಿಹಾರ ಒದಗಿಸಿದ ಬಹುದೊಡ್ಡ ಕೀರ್ತಿ ನಮ್ಮದಾಗಲಿದೆ ಎಂದು ಹೇಳಿದರು.
ಕರ್ನಾಟಕದೊಂದಿಗೆ ಕೈ ಜೋಡಿಸಲು ಇಸ್ರೇಲ್ ಸಿದ್ದ
ಅತಿಥಿಗಳಾಗಿ ಭಾಗವಹಿಸಿದ್ದ ಇಸ್ರೇಲ್‌ನ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮ್ಯಾನ್ ಅವರು, ನೀರಿನ ನಿರ್ವಹಣೆಯಲ್ಲಿ ಇಸ್ರೇಲ್‌ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು. ತಂತ್ರಜ್ಞಾನ ಸಹಿತ ತಾವು ಕರ್ನಾಟಕದೊಂದಿಗೆ ಕೈಜೋಡಿಸುವ ಕುರಿತು ಭರವಸೆ ನೀಡಿದರು.
ಇಸ್ರೇಲ್ ಒಂದು ಕಾಲದಲ್ಲಿ ತೀವ್ರ ಜಲಕ್ಷಾಮ ಎದುರಿಸುತ್ತಿತ್ತು. ಆದರೆ ನಿರಂತರ ತಾಂತ್ರಿಕ ನಾವೀನ್ಯತೆ (Innovation), ಸರ್ಕಾರದ ದಿಟ್ಟ ನೀತಿಗಳು ಮತ್ತು ಸಾರ್ವಜನಿಕರ ಸಂಪೂರ್ಣ ಸಹಕಾರದಿಂದ ನಾವು ಆ ದೊಡ್ಡ ಸವಾಲನ್ನು ಅವಕಾಶವಾಗಿ ಬದಲಾಯಿಸಿದೆವು. ಇಂದು ಇಸ್ರೇಲ್ ತನ್ನ ಶೇ. 90ರಷ್ಟು ತ್ಯಾಜ್ಯನೀರನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸ್ಮಾರ್ಟ್ ವಾಟರ್ ಗ್ರಿಡ್‌ಗಳ ಸಮರ್ಥ ಬಳಕೆಯಿಂದ ನೀರಿನ ಸೋರಿಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದ್ದೇವೆ ಎಂದರು.
ಜಲಮಂಡಳಿಯೊಂದಿಗೆ ಇಸ್ರೇಲ್ ಅನುಭವ ಹಂಚಿಕೆ
ಬೆಂಗಳೂರಿನಂತಹ ಬೃಹತ್ ಮತ್ತು ವೇಗವಾಗಿ ಬೆಳೆಯುತ್ತಿರುವ ಮಹಾನಗರದಲ್ಲಿ ಸುಸ್ಥಿರ ಜಲ ಪರಿಸರ ವ್ಯವಸ್ಥೆ ನಿರ್ಮಿಸಲು ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಜಲಮಂಡಳಿಯೊಂದಿಗೆ (BWSSB) ನಮ್ಮ ತಂತ್ರಜ್ಞಾನ, ಎಐ ಪರಿಣತಿ ಮತ್ತು ಅನುಭವವನ್ನು ಹಂಚಿಕೊಳ್ಳಲು ಇಸ್ರೇಲ್ ಸದಾ ಸಿದ್ಧವಿದೆ ಎಂದು ಇದೇ ವೇಳೆ ಅವರು ಘೋಷಿಸಿದರು.














Click it and Unblock the Notifications