ಜಗನ್ ಮೋಹನ್ ರೆಡ್ಡಿಗೆ ಡಬ್ಬಲ್ ಹೊಡೆತ
ಹೈದರಾಬಾದ್, ಜ.9: ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ಡಬ್ಬಲ್ ಹೊಡೆತ ಬಿದ್ದಿದೆ. ಸಾಕ್ಷಿ ಟಿವಿಯಲ್ಲಿ ಪ್ರಸಾರವಾದ ವರದಿಗೆ ದಂಡ ಕಟ್ಟಿದರೆ, ಜಾರಿ ನಿರ್ದೇಶನಾಲಯ ಮಾಧ್ಯಮ ಸಂಸ್ಥೆಯ ಆಸ್ತಿ ಜಪ್ತಿ ಮಾಡಿದೆ.
ನಲ್ಸಾರ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರ ಸಂಭ್ರಮಾಚರಣೆ ಬಗ್ಗೆ ಜಗನ್ ಅವರ ಸಾಕ್ಷಿ ಟಿವಿ ಚಾನೆಲ್ ವರದಿ ಮಾಡಿತ್ತು. ಈ ವರದಿ News Broadcasting Standards Authority (NBSA) ನಿಯಮ ಮೀರಿದ್ದು, ತಪ್ಪು ಮಾಹಿತಿ, ನಕಲಿ ವರದಿಗಾರಿಕೆ ಆರೋಪ ಸಾಬೀತಾಗಿದ್ದರಿಂದ 1 ಲಕ್ಷ ರು ದಂಡ ವಿಧಿಸಲಾಗಿದೆ.
ನಲ್ಸಾರ್ ವಿವಿಯ ಹಿರಿಯ ವಿದ್ಯಾರ್ಥಿನಿಯರಿಗೆ ಕಿರಿಯ ವಿದ್ಯಾರ್ಥಿನಿಯರು ಜುಬುಲಿ ಹಿಲ್ಸ್ ನ ಪಬ್ ನಲ್ಲಿ ಫೇರ್ ವೆಲ್ ಪಾರ್ಟಿ ಬಗ್ಗೆ ವಿದ್ಯಾರ್ಥಿನಿಯರ ಡ್ರೆಸ್ ಕೋಡ್, ಸಂಸ್ಕೃತಿ ಅವಹೇಳನ ಬಗ್ಗೆ ಅಪಮಾನವಾಗುವ ರೀತಿ ಸಾಕ್ಷಿ ಟಿವಿ ವರದಿ ಮಾಡಿತ್ತು. ನಂತರ ವಿದ್ಯಾರ್ಥಿನಿಯರು NBSAಗೆ ದೂರು ನೀಡಿದ್ದರು.

ದೂರು ಸ್ವೀಕರಿಸಿ ಪ್ರಕರಣದ ತನಿಖೆ ನಡೆಸಿದ NBSA ಸಾಕ್ಷಿ ಟಿವಿಗೆ 1 ಲಕ್ಷ ರು ದಂಡ, ಜ.16,16 ಹಾಗೂ 17 ರಂದು ಸತತವಾಗಿ ವಿದ್ಯಾರ್ಥಿನಿಯರ ಕ್ಷಮೆಯಾಚನೆ ಸ್ಕ್ರೋಲ್ ನ್ಯೂಸ್ ನಲ್ಲಿ ಕಾಣಿಸಬೇಕು ಎಂದು ಹೇಳಿದೆ.
ಇನ್ನೊಂದೆಡೆ, ಜಾರಿ ನಿರ್ದೇಶನಾಲಯ(ED) ಜಗನ್ ಒಡೆತನದ ಜಗತಿ ಪಬ್ಲಿಕೇಷನ್ ಸಂಸ್ಥೆಯ 59 ಕೋಟಿ ರು ಮೌಲ್ಯದ ನಿಶ್ಚಿತ ಠೇವಣಿ ಮುಟ್ಟುಗೋಲು ಪ್ರಕ್ರಿಯೆಗೆ ಚಾಲನೆ ನೀಡಿದೆ. ಕಡಪ ಸಂಸದ ಜಗನ್ ರೆಡ್ಡಿ ಅವರು ಮನಿಲಾಂಡ್ರಿಂಗ್ ಪ್ರಕರಣದ ಆರೋಪಿಯಾಗಿದ್ದು, ಜಾರಿ ನಿರ್ದೇಶನಾಲಯದ ನಿರ್ದೇಶನದ ಮೇರೆಗೆ ಸಿಬಿಐ ತಂಡ ಮಾಧ್ಯಮ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಟೆರೊ ಮತ್ತು ಅರಬಿಂದೋ ಫರ್ಮಾಗೆ ಸೇರಿದ 21.5 ಕೋಟಿ ರು ಆಸ್ತಿಯನ್ನು ಸಿಬಿಐ ವಶಪಡಿಸಿಕೊಂಡಿದೆ.












Click it and Unblock the Notifications