ದೇಶಿಯ ವಿಮಾನದಲ್ಲಿ ಶೇ 100ರಷ್ಟು ಪ್ರಯಾಣಿಕರ ಸಂಚಾರಕ್ಕೆ ಒಪ್ಪಿಗೆ
ನವದೆಹಲಿ, ಅಕ್ಟೋಬರ್ 12; ದೇಶಿಯ ವಿಮಾನಗಳು ಯಾವುದೇ ನಿರ್ಬಂಧಗಳಿಲ್ಲದೇ ಶೇ 100ರಷ್ಟು ಪ್ರಯಾಣಿಕರೊಂದಿಗೆ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಅಕ್ಟೋಬರ್ 18ರಿಂದ ಈ ಆದೇಶ ಜಾರಿಗೆ ಬರಲಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ವಿಮಾನಗಳ ಹಾರಾಟಕ್ಕೆ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಶೇ 100ರಷ್ಟು ಪ್ರಯಾಣಿಕರ ಹಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ.

ಈಗ ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದ್ದು, ಹೊಸ ಪ್ರಕರಣಗಳ ಸಂಖ್ಯೆ ಸಹ ಗಣನೀಯವಾಗಿ ಇಳಿಕೆಯಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಪ್ರಯಾಣಿಕರೊಂದಿಗೆ ವಿಮಾನ ಹಾರಾಟಕ್ಕೆ ಅವಕಾಶ ನೀಡಿದೆ.
ಕೇಂದ್ರ ಸರ್ಕಾರ ಶೇ 100ರಷ್ಟು ಪ್ರಯಾಣಿಕರೊಂದಿಗೆ ದೇಶಿಯ ವಿಮಾನಗಳು ಹಾರಾಟಕ್ಕೆ ಅವಕಾಶ ನೀಡಿದೆ. ಆದರೆ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಕೋವಿಡ್ ಹರಡುವಿಕೆ ತಡೆಯಲು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರ ದೇಶಿಯ ವಿಮಾನಗಳಲ್ಲಿನ ಪ್ರಯಾಣಿಕರ ಪ್ರಮಾಣವನ್ನು ಶೇ 72.5 ರಿಂದ ಶೇ 85ಕ್ಕೆ ಹೆಚ್ಚಿಸಲು ಅನುಮತಿ ನೀಡಿತ್ತು. ಈಗ ಶೇ 100ರಷ್ಟು ಪ್ರಯಾಣಿಕರ ಸೇವೆಗೆ ಒಪ್ಪಿಗೆ ನೀಡಿದೆ.
ವಿಮಾನ ಸಂಚಾರಕ್ಕೆ ಇರುವ ಬೇಡಿಕೆಯನ್ನು ಪರಿಶೀಲಿಸಿದ ಬಳಿಕ ಹಾರಾಟಕ್ಕೆ ಇದ್ದ ನಿರ್ಬಂಧಗಳನ್ನು ತೆರೆವುಗೊಳಿಸಲಾಗಿದೆ. ಅಕ್ಟೋಬರ್ 18ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ಮಾರ್ಚ್‌ನಲ್ಲಿ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಬಳಿಕ ಮೇ ತಿಂಗಳಿನಲ್ಲಿ ದೇಶಿಯ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು.
ಅಕ್ಟೋಬರ್ 9ರಂದು ಶೇ 71.5 ಪ್ರಯಾಣಿಕರೊಂದಿಗೆ 2340 ವಿಮಾನಗಳು ದೇಶದಲ್ಲಿ ಹಾರಾಟ ನಡೆಸಿವೆ. ಈಗ ದಸರಾ ಹಬ್ಬದ ಅಂಗವಾಗಿ ಜನರ ಸಂಚಾರ ಹೆಚ್ಚಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಜನದಟ್ಟಣೆ ಉಂಟಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ ಆಗಿದ್ದವು.
ಟರ್ಮಿನಲ್ 1 ಓಪನ್; ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ದೇಶಿಯ ವಿಮಾನಗಳಿಗೆ ಅಕ್ಟೋಬರ್ 13ರಿಂದ ತೆರೆಯಲಿದೆ. ಗೋ ಫಸ್ಟ್ ಟರ್ಮಿನಲ್‌ನಿಂದ ವಿಮಾನ ಸೇವೆ ಆರಂಭಿಸಲಿದೆ.
ಅಕ್ಟೋಬರ್ 20ರಿಂದ ಸ್ಟಾರ್ ಏರ್, ಟ್ರೂ ಜೆಟ್ ಸೇರಿದಂತೆ ವಿವಿಧ ಕಂಪನಿಗಳು ಟರ್ಮಿನಲ್ 1ರಿಂದ ವಿಮಾನ ಸೇವೆ ಆರಂಭಿಸಲಿವೆ. ಇಂಡಿಗೋ ಸಂಸ್ಥೆ ಅಕ್ಟೋಬರ್ 31ರಿಂದ ಟರ್ಮಿನಲ್ 1 ಬಳಕೆ ಮಾಡಲಿದೆ.
ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರ ಕಳೆದ ವರ್ಷದ ಏಪ್ರಿಲ್‌ನಲ್ಲಿ ಟರ್ಮಿನಲ್ 1ರಿಂದ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಟರ್ಮಿನಲ್ 2ರಿಂದ ಮಾತ್ರ ವಿಮಾನ ಹಾರಾಟ ನಡೆಸುತ್ತಿದ್ದವು.
ದೆಹಲಿಯಲ್ಲಿಯೂ ಕಾರ್ಯಾರಂಭ; ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ 18 ತಿಂಗಳಿನಿಂದ ಮುಚ್ಚಿದ್ದ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಸಹ ಅಕ್ಟೋಬರ್ 31ರಿಂದ ಕಾರ್ಯಾರಂಭ ಮಾಡಲಿದೆ.
ಟರ್ಮಿನಲ್ 1 ಕಾರ್ಯಾರಂಭ ಮಾಡಿದರೆ ಎಲ್ಲಾ ಮೂರು ಟರ್ಮಿನಲ್ ಕಾರ್ಯಾರಂಭ ಮಾಡಿದಂತೆ ಆಗಲಿದೆ ಎಂದು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ಕಳೆದ ವರ್ಷ ಮೇ, ಟರ್ಮಿನಲ್ 2 ಈ ವರ್ಷದ ಜುಲೈನಲ್ಲಿ ಕಾರ್ಯಾರಂಭ ಮಾಡಿದ್ದವು.
2020ರ ಮಾರ್ಚ್ 25ರಿಂದ ಟರ್ಮಿನಲ್ 1ರಿಂದ ಯಾವುದೇ ವಿಮಾನವೂ ಹಾರಾಟ ನಡೆಸಿಲ್ಲ. ದೇಶಿಯ ವಿಮಾನಗಳ ಹಾರಾಟ ಸಂಪೂರ್ಣವಾಗಿ ನಡೆಯುತ್ತಿದ್ದರೂ ಸಹ ಟರ್ಮಿನಲ್ 1 ಬಳಕೆ ಮಾಡಿರಲಿಲ್ಲ.











Click it and Unblock the Notifications