Telangana Election 2023: ರೂಪುಗೊಳ್ಳುತ್ತಿದೆ ಗೌಪ್ಯ ಕಾರ್ಯತಂತ್ರ- ಒಂದು ತಿಂಗಳ ಕಾಲ ಹೈದರಾಬಾದ್‌ನಲ್ಲಿ ಡಿಕೆಶಿ ವಾಸ್ತವ್ಯ
ಹೈದರಾಬಾದ್, ಅಕ್ಟೋಬರ್ 07: ಇನ್ನೆರಡು ತಿಂಗಳಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಾಗಿದೆ. ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ತೆಲಂಗಾಣದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೌಪ್ಯ ಕಾರ್ಯತಂತ್ರ ರೂಪಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೈದರಾಬಾದ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣ ಚುನಾವಣಾ ನಿರ್ವಹಣೆ ಮತ್ತು ಕಾರ್ಯತಂತ್ರದ ಯೋಜನೆಗಳ ಮೇಲ್ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರು ಸುಮಾರು ಒಂದು ತಿಂಗಳು ಹೈದರಾಬಾದ್‌ನಲ್ಲಿ ಕಳೆಯುವ ಸಾಧ್ಯತೆಯಿದೆ. ಪಕ್ಷದ ಚುನಾವಣಾ ನಿರ್ವಹಣೆ ಪ್ರಕ್ರಿಯೆಯ ಮೇಲೆ ಸಂಪೂರ್ಣ ಹಿಡಿತವನ್ನು ಡಿಕೆಶಿ ಹೊಂದಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆಲುವಿನ ಹಾದಿಯನ್ನು ಅವರೇ ರೂಪಿಸಲಿದ್ದಾರೆ ಎಂದು ಕಾಂಗ್ರೆಸ್‌ನ ಬಲ್ಲ ಮೂಲಗಳು ತಿಳಿಸಿವೆ.

ತೆಲಂಗಾಣ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಶಿವಕುಮಾರ್ ಅವರನ್ನು ಭೇಟಿ ಮಾಡಿ ತೆಲಂಗಾಣದಲ್ಲಿ ಪಕ್ಷದ ಪ್ರಚಾರ ಹಾಗೂ ಕಾರ್ಯತಂತ್ರ ರೂಪಿಸಲು ಆಹ್ವಾನಿಸಿದ್ದಾರೆ.
ಇದಕ್ಕೆ ಒಪ್ಪಿಕೊಂಡಿರುವ ಡಿಕೆ ಶಿವಕುಮಾರ್ ಅವರು ರೇವಂತ್ ಅವರಿಗೆ ಹೈದರಾಬಾದ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವೀಗ ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲದೆ ತೆಲಂಗಾಣದ ಇತರ ರಾಜಕೀಯ ಪಕ್ಷಗಳಿಗೂ ಮಹತ್ವದ್ದಾಗಿದೆ. ಡಿಕೆ ಶಿವಕುಮಾರ್ ಅವರ ಕಾರ್ಯತಂತ್ರ ಕರ್ನಾಟಕದಲ್ಲಿ ಯಶಸ್ವಿಯಾದ ಕಾರಣ ಈ ಬೆಳವಣಿಗೆಗಳು ತೆಲಂಗಾಣದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ ಎಂದು ಹೇಳಲಾಗುತ್ತಿದೆ.

ಶಿವಕುಮಾರ್ ಅವರು ರೇವಂತ್ ರೆಡ್ಡಿ ಅವರನ್ನು ಟಿಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೈಎಸ್‌ಆರ್‌ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರೂ ಸಹ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ವಿಲೀನವು ಇನ್ನೂ ಔಪಚಾರಿಕವಾಗಿಲ್ಲ. ಒಂದು ವೇಳೆ, ವೈಎಸ್‌ಆರ್‌ಟಿಪಿ ಪಕ್ಷ ಕಾಂಗ್ರೆಸ್‌ನಲ್ಲಿ ವಿಲೀನಗೊಂಡರೆ ಅದರ ಕ್ರೆಡಿಟ್ ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಹೇಳಲಾಗುತ್ತಿದೆ.
ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಡಿಕೆ ಶಿವಕುಮಾರ್ ಅವರು ರಾಜಕೀಯ ಕಾರ್ಯತಂತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ತಂದುಕೊಡುವಲ್ಲಿ ಡಿಕೆಶಿ ಅವರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ತೆಲಂಗಾಣ ಕಾಂಗ್ರೆಸ್ ನಾಯಕರು ಡಿಕೆಶಿ ಅವರನ್ನು ಪ್ರಚಾರಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ.
ತೆಲಂಗಾಣದಲ್ಲಿ ಸತತ ಎರಡು ಅವಧಿಗೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಅಧಿಕಾರ ನಡೆಸಿದ್ದಾರೆ. ಅಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಾಂಗ್ರೆಸ್‌ನ ಆರು ಗ್ಯಾರಂಟಿಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡುತ್ತಿದೆ ಎಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ.
ಕರ್ನಾಟಕದಂತೆಯೇ ತೆಲಂಗಾಣದಲ್ಲಿಯೂ ಚುನಾವಣೆಗೂ ಮುನ್ನ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ. ಬಿಎಸ್‌ಆರ್‌ನ ಕೆಲ ಪ್ರಮುಖ ನಾಯಕರು ಬಿಆರ್‌ಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ತೆಲಂಗಾಣ ಹೊಸ ರಾಜ್ಯವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸಿಂಪಥಿ ಅಲೆ ಶುರುವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದು ಚಂದ್ರಶೇಖರ್ ರಾವ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಈಗ ತೆಲಂಗಾಣದಲ್ಲಿ ಏನಿದ್ದರೂ ಬಿಆರ್‌ಎಸ್ ವರ್ಸ್‌ಸ್ ಕಾಂಗ್ರೆಸ್ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications