ತುಮಕೂರು, ಚಿಕ್ಕಬಳ್ಳಾಪುರ, ಬಿಡದಿ, ಹೊಸಕೋಟೆವರೆಗೂ ಮೆಟ್ರೋ : ಬಿಗ್ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ನವದೆಹಲಿ: ಮೂರನೇ ಹಂತದ 3ಎ ಯೋಜನೆಯಡಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿಲೋಮೀಟರ್ ಉದ್ದದ 28 ನಿಲ್ದಾಣಗಳ ಮಾರ್ಗಕ್ಕೆ 28,405 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬೆಂಗಳೂರು, ಬಿಡದಿ, ಮೈಸೂರು, ಕನಕಪುರ, ನೆಲಮಂಗಲ, ತುಮಕೂರು, ಏರ್ಪೋರ್ಟ್, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತು ಕೋಲಾರದಂತಹ ಪಟ್ಟಣಗಳಿಗೆ ಆರ್ಆರ್‌ಟಿಎಸ್ ಡಿಪಿಆರ್ ಸಿದ್ಧಪಡಿಸಲು ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಯೋಜನೆಗಳು ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಿ, ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪ್ರಾದೇಶಿಕ ಕ್ಷಿಪ್ರ ಸಂಚಾರ ವ್ಯವಸ್ಥೆ(RRTS)ಗೆ ಮನವಿ ಮಾಡಲಾಗಿದೆ. ಬಿಡದಿ- ಮೈಸೂರು, ಹಾರೋಹಳ್ಳಿ- ಕನಕಪುರ, ನೆಲಮಂಗಲ- ತುಮಕೂರು, ವಿಮಾನ ನಿಲ್ದಾಣ- ಚಿಕ್ಕಬಳ್ಳಾಪುರ, ಹೊಸಕೋಟೆ- ಕೋಲಾರ ಮಧ್ಯೆ ಈ ಸಂಚಾರ ವ್ಯವಸ್ಥೆ ನಿರ್ಮಿಸಲು ಡಿಪಿಆರ್ ತಯಾರಿಸಲು ಮನವಿ ಮಾಡಿದ್ದೇವೆ.

ಬೆಂಗಳೂರಿ ದಟ್ಟಣೆ ಹಾಗೂ ಒತ್ತಡ ಕಡಿಮೆ ಮಾಡಲು ಈ ಭಾಗದಲ್ಲಿ ಸ್ಯಾಟಲೈಟ್ ಟೌನ್ ನಿರ್ಮಿಸಬೇಕು ಎಂದು ಈ ಯೋಜನೆಗೆ ಮನವಿ ಮಾಡಿದ್ದು, ಇದನ್ನು ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಬೆಂಗಳೂರಿಗೆ ಶಕ್ತಿ ತುಂಬದಿದ್ದರೆ ದೇಶಕ್ಕೆ ಅಪಮಾನ ಮಾಡಿದಂತಾಗುತ್ತದೆ. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದೆ ಎಂದು ಮನದಟ್ಟು ಮಾಡಿದ್ದೇನೆ ಎಂದು ಹೇಳಿದರು.
ಮೆಟ್ರೋ 3ಎ ಯೋಜನೆಗೆ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ಒಟ್ಟು 28,405 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ಯೋಜನೆಗೆ 15.01.2025ರಂದು ಕೇಂದ್ರ ಸಚಿವಾಲಯದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅನುಮತಿ ನೀಡಿದರೆ ನಾವು ಕೆಲಸ ಆರಂಭಿಸುತ್ತೇವೆ ಎಂದು ಸಚಿವರಿಗೆ ತಿಳಿಸಿದ್ದೇವೆ. ಇದರ ಪರಿಶೀಲನೆಗೆ ಸಿಸ್ತ್ರ ಎಂಬ ಸಂಸ್ಥೆಗೆ ವಹಿಸಲಾಗಿದೆ. ಅದರ ಶಿಫಾರಸ್ಸಿಗೆ ನಾವು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಇನ್ನು ಮಂಗಳವಾರ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಕೆಲವು ಯೋಜನೆಗಳಿಗೆ ಬಾಕಿ ಇರುವ ಅನುಮೋದನೆಗೆ ಮನವಿ ಮಾಡಿದ್ದೇನೆ. ಮೆಟ್ರೋ 2ನೇ ಹಂತದ ಯೋಜನೆಗೆ 15 ವರ್ಷಗಳ ಹಿಂದೆ ಅಂದರೆ 2010ರ ಜುಲೈನಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆಗ 26 ಸಾವಿರ ಕೋಟಿ ಇದ್ದ ಯೋಜನೆ ವೆಚ್ಚ ಈಗ 40 ಸಾವಿರ ಕೋಟಿಗೆ ಏರಿಕೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ 2500 ಕೋಟಿ ಹೆಚ್ಚು ವೆಚ್ಚವಾಗಿದೆ. 2026ರ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳಿಸಲಾಗುವುದು. ಹೀಗಾಗಿ ಈ ಪರಿಷ್ಕೃತ ದರಕ್ಕೆ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ವಿಚಾರವಾಗಿ ಮೊದಲು ನಾವು ಕೇಂದ್ರ ಸರ್ಕಾರಕ್ಕೆ ದಾಖಲೆಗಳನ್ನು ಸಲ್ಲಿಸಬೇಕು. ಪರಿಷ್ಕೃತ ಡಿಪಿಆರ್ ಸಲ್ಲಿಸುತ್ತಿದ್ದೇವೆ. ರಾಮನಗರದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಕಚೇರಿ ಆರಂಭಿಸಲಾಗುತ್ತಿದೆ. ಅರಣ್ಯ ಇಲಾಖೆಯ ಎಷ್ಟು ಭೂಮಿ ಬೇಕಾಗುತ್ತದೆ. ಅದಕ್ಕೆ ಎಷ್ಟು ಪರ್ಯಾಯ ಭೂಮಿ ನೀಡಬೇಕು ಎಂದೆಲ್ಲಾ ತೀರ್ಮಾನ ಆಗಬೇಕಿದೆ. ಈಗಾಗಲೇ ಪರ್ಯಾಯ ಭೂಮಿಯನ್ನು ಗುರುತಿಸಲಾಗಿದೆ. ಅದೆಲ್ಲವನ್ನು ಮುಗಿಸಿಕೊಂಡು ಹಂತ ಹಂತವಾಗಿ ಮುಂದುವರಿಯುತ್ತೇವೆ. ಇದಕ್ಕೆ ಮಂಡ್ಯ ಅಥವಾ ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಬೇಕು. ಈ ಯೋಜನೆ ತಾಂತ್ರಿಕ ತೀರ್ಮಾನಗಳು ಸಿಡ್ಬ್ಲ್ಯೂಸಿಗೆ ಇರುತ್ತದೆ. ನಾವು ನಮ್ಮ ಪ್ರಸ್ತಾವನೆ ನೀಡುತ್ತೇವೆ. ನಂತರ ಮುಂದಿನ ಪ್ರಕ್ರಿಯೆ ಸಿಡ್ಬ್ಲ್ಯೂಸಿ ನಡೆಸಲಿದೆ ಎಂದು ತಿಳಿಸಿದರು.












Click it and Unblock the Notifications