G20 Summit: ಭಾರತ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ?
ಈ ದಿನ ಅಂದರೆ 09 ಸೆಪ್ಟೆಂಬರ್ 2023ರ ಈ ದಿನ ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯಲಿದೆ. ಏಕೆಂದರೆ ಭಾರತ ಇದೇ ಮೊದಲ ಬಾರಿಗೆ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದೆ. ಹೀಗೆ ಅಧ್ಯಕ್ಷತೆ ವಹಿಸಿರುವ ಮೊದಲನೇ ಶೃಂಗಸಭೆಯಲ್ಲೇ ಭಾರತಕ್ಕೆ & ಭಾರತದ ರಾಜತಾಂತ್ರಿಕತೆಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಅದರಲ್ಲೂ ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ ಬಯಸಿರುವ ಭಾರತಕ್ಕೆ ಇನ್ನುಮುಂದೆ ಆನೆಬಲ ಸಿಕ್ಕಂತಾಗಿದೆ.
ಭಾರತದ ಒತ್ತಾಸೆ & ಭಾರತ ಸರ್ಕಾರದ ಅದ್ಭುತ ನಡೆಯಿಂದಾಗಿ ಇಂದು ಆಫ್ರಿಕಾ ಒಕ್ಕೂಟ ರಾಷ್ಟ್ರಗಳಿಗೆ ಜಿ20 ಶೃಂಗಸಭೆ ಖಾಯಂ ಸದಸ್ಯತ್ವ ಸಿಕ್ಕಿದೆ. ಹೀಗೆ ಸದಸ್ಯ ಸ್ಥಾನ ಕೊಡಿಸಲು ಭಾರತ ಸಾಕಷ್ಟು ಕಷ್ಟಪಟ್ಟಿತ್ತು ಎಂಬುದು ಇಲ್ಲಿ ಗಮನಾರ್ಹ. ಹೀಗೆ ಭಾರತ ಆಫ್ರಿಕಾದ ಒಕ್ಕೂಟಕ್ಕೆ ಜಿ20ಯ ಖಾಯಂ ಸದಸ್ಯತ್ವ ಕೊಡಿಸಲು ಇಷ್ಟೊಂದು ಕಷ್ಟಪಟ್ಟಿದ್ದು ಯಾಕೆ? ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಒನ್‌ಲೈನ್ ಉತ್ತರ ಸ್ಪಷ್ಟ ಹಾಗೂ ನೇರ. ಅದೇನೆಂದರೆ ಆಫ್ರಿಕಾ ಒಕ್ಕೂಟದಲ್ಲಿ ಒಂದಲ್ಲ ಎರಡಲ್ಲ ಭರ್ತಿ 55 ಸದಸ್ಯ ರಾಷ್ಟ್ರಗಳು ಇವೆ. ಹಾಗಾದರೆ ಇದರಿಂದ ಏನು ಪ್ರಯೋಜನ ಅಂದ್ರಾ? ಮುಂದೆ ಓದಿ.

ಒಂದೇ ಕಲ್ಲು.. ಎರಡು ಹಕ್ಕಿ!
ಹೌದು ಭಾರತ ಈಗ ಕೈಗೊಂಡಿರುವ ಕಾರ್ಯದಿಂದ ಮುಂದೆ ದೊಡ್ಡ ಯಶಸ್ಸು ಸಿಗುವುದು ಪಕ್ಕಾ. ಹೇಗೆಂದರೆ ಆಫ್ರಿಕಾ ಒಕ್ಕೂಟದ 55 ರಾಷ್ಟ್ರಗಳು ಜಾಗತಿಕವಾಗಿ ಮುಂದೆ ಭಾರತಕ್ಕೆ ಬೆಂಬಲವಾಗಿ ನಿಲ್ಲುವ ನಿರೀಕ್ಷೆ ಇದೆ. ಅಕಸ್ಮಾತ್ 55 ದೇಶಗಳು ನಿಲ್ಲದೆ ಇದ್ದರೂ ಈ ಪೈಕಿ ಅರ್ಧಕ್ಕರ್ಧ ದೇಶಗಳು ಭಾರತದ ಪರವಾಗಿ ನಿಲ್ಲಲಿವೆ. ಇದು ಭಾರತಕ್ಕೆ ವಿಶ್ವಸಂಸ್ಥೆಯಲ್ಲೂ ದೊಡ್ಡ ಬಲ ನೀಡಲಿದೆ. ಹೇಗೆಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಈ ತನಕ ಖಾಯಂ ಸ್ಥಾನ ಪಡೆಯಲು ಆಗಿಲ್ಲ. ಈ ಪ್ರಯತ್ನಕ್ಕೆ ಕೆಲವರು ಅಡ್ಡಿ ಮಾಡುತ್ತಿದ್ದು ಅದನ್ನೆಲ್ಲಾ ಎದುರಿಸಲು ಭಾರತಕ್ಕೆ ಈಗ ಆನೆಬಲ ಬಂದಂತಾಗಿದೆ.
ಜಿ20 ರಾಷ್ಟ್ರಗಳನ್ನು ಒಪ್ಪಿಸಿದ್ದೇ ಭಾರತ?
ಮತ್ತೊಂದು ಕಡೆ ಆಫ್ರಿಕಾ ಒಕ್ಕೂಟವನ್ನ ಜಿ20ಗೆ ಸೇರಿಸುವ ಬಗ್ಗೆ ಇತರ ಸದಸ್ಯ ರಾಷ್ಟ್ರಗಳ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನಪಟ್ಟಿದೆ. ಅಲ್ಲದೆ ಖುದ್ದು ಭಾರತ ಜಿ20 ಸದಸ್ಯ ರಾಷ್ಟ್ರಗಳ ನಾಯಕರ ಜತೆಗೆ ಮಾತನಾಡಿ, ಭಾರತದ ರಾಜತಾಂತ್ರಿಕ ಅಧಿಕಾರಿಗಳು ಆಫ್ರಿಕಾ ಒಕ್ಕೂಟವನ್ನು ಜಿ20ಗೆ ಸೇರಿಸಲು ಶ್ರಮಪಟ್ಟಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕೇಂದ್ರದ ನಡೆ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಅವರು ಇಂದು ಅಧಿಕೃತವಾಗಿ ಆಫ್ರಿಕಾ ಒಕ್ಕೂಟವನ್ನು ಜಿ20 ಒಕ್ಕೂಟಕ್ಕೆ ಸೇರ್ಪಡೆ ಮಾಡಿದ್ದಾರೆ. ಇದಿಷ್ಟೇ ಅಲ್ಲ ಇನ್ನೂ ಒಂದು ತಂತ್ರಗಾರಿಕೆ ಮುಂದಿಟ್ಟಿದೆ ಭಾರತ.

ಒಡೆದು ಹೋದ ಜನಕ್ಕೆ ಒಗ್ಗಟ್ಟಿನ ಪಾಠ?
ಅಷ್ಟಕ್ಕೂ ಆಫ್ರಿಕಾ ಜನಸಂಖ್ಯೆ ಸುಮಾರು 140 ಕೋಟಿ. ಆದರೆ ಆಫ್ರಿಕಾ ಖಂಡ ಒಗ್ಗಟ್ಟಿನ ಮಂತ್ರ ಬಿಟ್ಟು, ಸಣ್ಣಪುಟ್ಟ ದೇಶಗಳಾಗಿ ಒಡೆದು ಹೋಗಿದೆ. ಹೀಗಿದ್ದಾಗ ಅವರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ ಸದ್ದಿಲ್ಲದೆ ಸಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಕೂಡ ಅವರ ಈ ಒಗ್ಗಟ್ಟಿನ ಮಂತ್ರಕ್ಕೆ ಬೆಂಬಲ ನೀಡಿದೆ ಎನ್ನಲಾಗಿದೆ. ಹೀಗೆ ಭವಿಷ್ಯದಲ್ಲಿ ಆಫ್ರಿಕಾದಲ್ಲಿನ ದೇಶಗಳು ಒಂದಾದರೆ ಭಾರತಕ್ಕೆ ಅದರಿಂದ ದೊಡ್ಡ ಲಾಭವಿದೆ. ಹಾಗೇ ಭವಿಷ್ಯದಲ್ಲಿ ಆ ದೇಶದ ಜನರು ಭಾರತದ ಸಹಾಯ ನೆನಪು ಮಾಡಿಕೊಳ್ಳುತ್ತಾರೆ.
ಯುರೋಪ್ ಒಕ್ಕೂಟಕ್ಕೆ ಆಫ್ರಿಕಾ ಸಮ!
ಇಷ್ಟುದಿನ ಜಿ20 ಒಕ್ಕೂಟಕ್ಕೆ ಸೇರಬೇಕು ಎಂದು ಆಫ್ರಿಕಾ ನಾಯಕರು ಸಾಕಷ್ಟು ಯತ್ನಿಸಿದ್ದರು. ಈಗ ಭಾರತದ ಅಧ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರಕ್ಕೆ ಇಡೀ ಜಗತ್ತು ಜೈ ಎಂದಿದೆ. ಐರೋಪ್ಯ ಒಕ್ಕೂಟಕ್ಕೆ ಸಮಾನವಾಗಿ ಆಫ್ರಿಕಾ ಒಕ್ಕೂಟ ಕುಡ ಖಾಯಂ ಸದಸ್ಯತ್ವವನ್ನ ಪಡೆದುಕೊಂಡಿದೆ. ಜಿ20 ಕುಟುಂಬದ ಸದಸ್ಯತ್ವಕ್ಕೆ ಆಫ್ರಿಕಾ ಒಕ್ಕೂಟಕ್ಕೂ ಸ್ವಾಗತ ಕೋರಿರುವ ಪ್ರಧಾನಿ ಮೋದಿ, ಜಿ20 ಮತ್ತು ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿ ಮತ್ತಷ್ಟು ಬಲಗೊಳ್ಳಲಿದೆ ಎಂದಿದ್ದಾರೆ. ಈ ಮೂಲಕ ಜಗತ್ತು ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಕಡೆ ಆಶ್ಚರ್ಯದ ನೋಟ ಬೀರಿದೆ.












Click it and Unblock the Notifications