ಇಬ್ರು ಹೆಂಡ್ತೀರ ಜೊತೆ ಸಂಸಾರ ಮಾಡ್ತೇನೆ: ಪೊಲೀಸ್ ಠಾಣೆಯಲ್ಲೇ ಭೂಪನ ಹೈಡ್ರಾಮಾ

ತಮಿಳುನಾಡು: ಪ್ರೀತಿ, ವಿಶ್ವಾಸ ಮತ್ತು ಸಹಿಷ್ಣುತೆಯಿಂದ ಕೂಡಿರಬೇಕಾದ ಕೌಟುಂಬಿಕ ಸಂಬಂಧಗಳಲ್ಲಿ ಕೆಲವೊಮ್ಮೆ ಮನುಷ್ಯನ ಆಸೆ, ಮೋಹಗಳು ನುಗ್ಗಿಬಿಡುತ್ತವೆ. ಇಂತಹ ಆಸೆಗಳಿಂದ ಉದ್ಭವಿಸುವ ಅನಿರೀಕ್ಷಿತ ತಿರುವುಗಳ ಪರಿಣಾಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ತಮಿಳುನಾಡಿನ ದಿಂಡಿಗಲ್‌ನಲ್ಲಿ ಇಂತಹದ್ದೇ ಹೈಡ್ರಾಮಾವೊಂದು ನಡೆದಿದ್ದು, ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ವೈರಲ್ ಆಗುತ್ತಿದೆ.

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ವಡಮದುರೈ ಸಮೀಪದ ಸೆಂಕುರಿಚ್ಚಿ ಪ್ರದೇಶದ ನಿವಾಸಿ 28 ವರ್ಷದ ಸಡೆಯಾಂಡಿ ಈ ಘಟನೆಯ ರೂವಾರಿ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಈತನಿಗೆ ಸುಮತಿ ಎಂಬ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

Dindigul Man

ಸಡೆಯಾಂಡಿ ಹಾಗೂ ಸುಮತಿ ದಂಪತಿಯ ಸಂಸಾರ ಸುಗಮವಾಗಿಯೇ ಸಾಗುತ್ತಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಸಡೆಯಾಂಡಿಯ ನಡವಳಿಕೆಯಲ್ಲಿ ಹಠಾತ್ ಬದಲಾವಣೆ ಕಂಡುಬಂದಿತ್ತು. ಯಾವಾಗಲೂ ಮೊಬೈಲ್ ಫೋನ್ ಹಿಡಿದುಕೊಂಡು ರಹಸ್ಯವಾಗಿ ಯಾರೊಂದಿಗೋ ಮಾತನಾಡುತ್ತಿದ್ದ. ಗಂಡನ ಈ ದಿಢೀರ್ ಬದಲಾವಣೆಯನ್ನು ಕಂಡು ಅನುಮಾನಗೊಂಡ ಪತ್ನಿ ಸುಮತಿ, ಈ ಬಗ್ಗೆ ಆತನನ್ನೇ ನೇರವಾಗಿ ಪ್ರಶ್ನಿಸಿದ್ದಾಳೆ. ಆದರೆ, ಸಡೆಯಾಂಡಿ ಹೆಂಡತಿಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೆ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದು ಗಂಡ-ಹೆಂಡತಿಯ ನಡುವೆ ದೊಡ್ಡ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು.

ದಿಢೀರ್ ನಾಪತ್ತೆಯಾದ ಗಂಡ

ಹೀಗಿರುವಾಗ, ಕಳೆದ ಕೆಲವು ದಿನಗಳ ಹಿಂದೆ ಸಡೆಯಾಂಡಿ ದಿಢೀರನೆ ಮನೆಯಿಂದ ನಾಪತ್ತೆಯಾಗಿದ್ದ. ಇದರಿಂದ ಗಾಬರಿಗೊಂಡ ಸುಮತಿ, ಸಂಬಂಧಿಕರ ಮನೆ ಸೇರಿದಂತೆ ಹಲವೆಡೆ ಹುಡುಕಾಡಿದರೂ ಆತನ ಸುಳಿವು ಸಿಗಲಿಲ್ಲ. ಆತನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದ ಕಂಗಾಲಾದ ಸುಮತಿ, ಬೇರೆ ದಾರಿ ಕಾಣದೆ ತನ್ನ ಗಂಡನನ್ನು ಹುಡುಕಿಕೊಡುವಂತೆ ವಡಮದುರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರಿಗೇ ಶಾಕ್ ಕೊಟ್ಟ ಸಡೆಯಾಂಡಿ

ಪತ್ನಿಯ ದೂರಿನ ಆಧಾರದ ಮೇಲೆ ಪೊಲೀಸರು ಸಡೆಯಾಂಡಿಯ ಮೊಬೈಲ್ ನಂಬರ್ ಮತ್ತು ಟವರ್ ಸಿಗ್ನಲ್ ಆಧರಿಸಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದರು. ಆಗ ಪೊಲೀಸರಿಗೇ ಒಂದು ಅಚ್ಚರಿಯ ಕಾದಿತ್ತು. ಸಡೆಯಾಂಡಿ ಎಲ್ಲಿಗೂ ನಾಪತ್ತೆಯಾಗಿರಲಿಲ್ಲ, ಬದಲಾಗಿ ಪುತ್ತೂರು ಪಿಚ್ಚಂಪಟ್ಟಿ ಪ್ರದೇಶದ 21 ವರ್ಷದ ನಾಗೇಶ್ವರಿ ಎಂಬ ಯುವತಿಯೊಂದಿಗೆ ರಹಸ್ಯವಾಗಿ ಎರಡನೇ ಮದುವೆಯಾಗಿ, ಅವಳೊಂದಿಗೆ ಪ್ರತ್ಯೇಕವಾಗಿ ಸಂಸಾರ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ, ನಾಗೇಶ್ವರಿಗೆ ತನಗೆ ಈ ಮೊದಲೇ ಮದುವೆಯಾಗಿರುವ ಹಾಗೂ ಇಬ್ಬರು ಮಕ್ಕಳಿರುವ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟು, ಆಕೆಯನ್ನು ವಂಚಿಸಿ ಎರಡನೇ ವಿವಾಹವಾಗಿದ್ದ. ಈ ಎಲ್ಲಾ ಮಾಹಿತಿಯನ್ನು ಕಲೆಹಾಕಿದ ಪೊಲೀಸರು, ತಕ್ಷಣ ಮೊದಲ ಪತ್ನಿ ಸುಮತಿಗೆ ವಿಷಯ ಮುಟ್ಟಿಸಿದರು. ಈ ವಿವಾದವನ್ನು ಬಗೆಹರಿಸಲು ಸಡೆಯಾಂಡಿ, ಆತನ 2ನೇ ಪತ್ನಿ ನಾಗೇಶ್ವರಿ ಮತ್ತು ಮೊದಲ ಪತ್ನಿ ಸುಮತಿ ಮೂವರನ್ನೂ ವಡಮದುರೈ ಪೊಲೀಸ್ ಠಾಣೆಗೆ ಕರೆಸಿದರು.

ಪೊಲೀಸ್ ಠಾಣೆಯಲ್ಲೇ ಹೈಡ್ರಾಮಾ

ಪೊಲೀಸರ ಸಮ್ಮುಖದಲ್ಲಿ ಪಂಚಾಯಿತಿ ಶುರುವಾಯಿತು. ಆಗ ಸಡೆಯಾಂಡಿ ಅತ್ಯಂತ ಕೂಲ್ ಆಗಿ, "ನನ್ನ ಮೊದಲ ಹೆಂಡತಿ ಯಾವಾಗಲೂ ನನ್ನೊಂದಿಗೆ ಜಗಳವಾಡುತ್ತಲೇ ಇರುತ್ತಾಳೆ. ಅದಕ್ಕಾಗಿಯೇ ನಾನು ನೆಮ್ಮದಿ ಅರಸಿ ಎರಡನೇ ಮದುವೆಯಾಗಿದ್ದೇನೆ. ಈಗ ನನಗೆ ಇಬ್ಬರು ಹೆಂಡತಿಯರೊಂದಿಗೂ ಒಟ್ಟಿಗೆ ಜೀವಿಸಲು ಸಮ್ಮತವಿದೆ. ಕಾನೂನು ಏನೇ ಹೇಳಿದರೂ ನನಗೆ ಅದರ ಬಗ್ಗೆ ಚಿಂತೆಯಿಲ್ಲ. ದಯವಿಟ್ಟು ಇಬ್ಬರು ಹೆಂಡತಿಯರನ್ನೂ ನನ್ನೊಂದಿಗೇ ಕಳುಹಿಸಿಕೊಡಿ. ಇಬ್ಬರನ್ನೂ ಒಂದೇ ಮನೆಯಲ್ಲಿಟ್ಟುಕೊಂಡು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಹೇಳಿದ್ದಾನೆ.

ಇದನ್ನು ಕೇಳಿದ ಪೊಲೀಸರು ಒಮ್ಮೆಲೆ ದಂಗಾಗಿ ಹೋದರು. ಈ ವೇಳೆ 2ನೇ ಪತ್ನಿ ನಾಗೇಶ್ವರಿ, "ಅವರಿಗೆ ಮೊದಲೇ ಮದುವೆಯಾಗಿರುವ ವಿಚಾರ ನನಗೆ ಈಗಷ್ಟೇ ಗೊತ್ತಾಯಿತು. ಹಾಗಿದ್ದರೂ ನಾನು ಅವರೊಂದಿಗೇ ಬದುಕುತ್ತೇನೆ, ನನ್ನನ್ನು ಅವರೊಂದಿಗೇ ಕಳುಹಿಸಿಕೊಡಿ" ಎಂದು ಪಟ್ಟು ಹಿಡಿದಳು. ಇನ್ನೊಂದೆಡೆ ಮೊದಲ ಪತ್ನಿ ಸುಮತಿ ಕಣ್ಣೀರು ಹಾಕುತ್ತಾ, "ನನ್ನ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ನನಗೆ ನನ್ನ ಗಂಡ ಮಾತ್ರ ಬೇಕು" ಎಂದು ಪೊಲೀಸರ ಬಳಿ ಕೈಮುಗಿದು ಬೇಡಿಕೊಂಡಳು.

ಕಾನೂನು ಪಾಠ ಕಲಿಸಿದ ಪೊಲೀಸರು

ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ವಡಮದುರೈ ಪೊಲೀಸರು, ಸಡೆಯಾಂಡಿಯನ್ನು ಪ್ರತ್ಯೇಕವಾಗಿ ಕರೆದೊಯ್ದು ಕಾನೂನಿನ ಭಾಷೆಯಲ್ಲಿ ಎಚ್ಚರಿಕೆ ನೀಡಿದರು. "ಮೊದಲ ಪತ್ನಿ ಜೀವಂತವಾಗಿರುವಾಗ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಕಾನೂನುಬದ್ಧವಾಗಿ ಅಪರಾಧ. ನಿನ್ನ ಹೆಂಡತಿ ದೂರು ನೀಡಿದರೆ ನೀನು ನೇರವಾಗಿ ಜೈಲಿಗೆ ಹೋಗಬೇಕಾಗುತ್ತದೆ" ಎಂದು ವಿವರಿಸಿ ಬುದ್ಧಿವಾದ ಹೇಳಿದರು.

ನಂತರ , ಎರಡನೇ ಪತ್ನಿ ನಾಗೇಶ್ವರಿಗೂ ಸೂಕ್ತ ಸಲಹೆ, ಬುದ್ಧಿವಾದಗಳನ್ನು ಹೇಳಿ ಆಕೆಯನ್ನು ಆಕೆಯ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು. ಸಡೆಯಾಂಡಿಗೆ ತನ್ನ ಮೊದಲ ಪತ್ನಿ ಸುಮತಿ ಹಾಗೂ ಮಕ್ಕಳೊಂದಿಗೆ ಸೇರಿ ಬದುಕು ಸಾಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಆ ದಂಪತಿಯನ್ನು ಒಟ್ಟಿಗೆ ಕಳುಹಿಸಿಕೊಡಲಾಯಿತು. ಈ ವಿಲಕ್ಷಣ ಘಟನೆಯಿಂದ ವಡಮದುರೈ ಪೊಲೀಸ್ ಠಾಣಾ ಆವರಣದಲ್ಲಿ ಕೆಲವು ಗಂಟೆಗಳ ಕಾಲ ಭಾರಿ ಹೈಡ್ರಾಮಾ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+