Maharashtra CM: ಇವರೇ ನೋಡಿ ಮಹಾರಾಷ್ಟ್ರ ಸಿಎಂ ಆಗೋದು
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದಿರುವ ಬಿಜೆಪಿ, ಶಿವಸೇನೆ (ಶಿಂಧೆ ಬಣ), ನ್ಯಾಷನಲಿಸ್ಟ್ ಕಾಂಗ್ರೆಸ್ (ಅಜಿತ್ ಪವಾರ್ ಬಣ) ಸರ್ಕಾರ ರಚನೆ ಕಸರತ್ತು ಇನ್ನೇನು ಕೊನೆ ಹಂತಕ್ಕೆ ಬಂದಿದೆ. ಏಕನಾಥ್ ಶಿಂಧೆ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದ ಕಾರಣ ಸಿಎಂ ಆಯ್ಕೆ ತಡವಾಗಿದ್ದು, ಇದೀಗ ಅಧಿಕಾರ ಹಂಚಿಕೆ ಅಂತಿಮವಾಗಿದ್ದು ಬಿಜೆಪಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಶಿಂಧೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬೆನ್ನಲ್ಲೇ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಮೂಲಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಡಿಸೆಂಬರ್ 2 ಅಥವಾ 3 ರಂದು ಸಭೆ ನಡೆಯಲಿದೆ ಎಂದು ಹಿರಿಯ ನಾಯಕರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸಲಿದ್ದಾರೆ.
ಎರಡು ಉಪಮುಖ್ಯಮಂತ್ರಿ ಸ್ಥಾನ
ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಲಿದ್ದು, ಏಕನಾಥ್ ಶಿಂಧೆ ಅಥವಾ ಅವರ ಮಗ ಶ್ರೀಕಾಂತ್ ಶಿಂಧೆ ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಶ್ರೀಕಾಂತ್ ಶಿಂಧೆ ಉಪ ಮುಖ್ಯಮಂತ್ರಿ ಸ್ಥಾನ ಪಡೆದರೆ, ಏಕನಾಥ್ ಶಿಂಧೆ ಅವರಿಗೆ ಕೇಂದ್ರದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಡಿಸೆಂಬರ್ 2 ರಂದು ಸೋಮವಾರ ಮಹಾರಾಷ್ಟ್ರ ಸಿಎಂ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ರಾಜ್ಯದ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗಳಿಸುವ ಮೂಲಕ ಭಾರಿ ಗೆಲುವು ಸಾಧಿಸಿದೆ. ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿದೆ.
ಎನ್‌ಡಿಎ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿಸೆಂಬರ್ 5 ರಂದು ಆಜಾದ್ ಮೈದಾನದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ ಈಗಾಗಲೇ ಮಾಹಿತಿ ನೀಡಿದ್ದಾರೆ.
ಏಕನಾಥ್ ಶಿಂಧೆ ಬಿಜೆಪಿ ಷರತ್ತಿಗೆ ಒಪ್ಪಿಕೊಂಡಿದ್ದರೂ ಪಕ್ಷದ ಕೆಲವು ಹಿರಿಯ ನಾಯಕರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಾಯುತಿ ಮೈತ್ರಿಕೂಟಕ್ಕೆ ಎನ್‌ಸಿಪಿ ಸೇರಿಕೊಳ್ಳದೇ ಇದ್ದರೆ ಶಿಂಧೆ ಅವರ ಶಿವಸೇನೆ 90-100 ಸ್ಥಾನಗಳಲ್ಲಿ ಗೆಲ್ಲುತ್ತಿತ್ತು ಎಂದು ಶಿವಸೇನಾ ಶಾಸಕ ಗುಲಾಬ್ರಾವ್ ಪಾಟೀಲ್ ಹೇಳಿದ್ದಾರೆ.
ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯನ್ನು ಎದುರಿಸಿದ್ದರೆ ಇನ್ನೂ ಹೆಚ್ಚು ಸ್ಥಾನ ಗೆಲ್ಲುತ್ತಿದ್ದರು ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾವ್ಸಾಹೇಬ್ ದಾನ್ವೆ ಕೂಡ ಹೇಳಿದ್ದಾರೆ.












Click it and Unblock the Notifications