ಮಿಕ್ಕೆಲ್ಲಾ ರೂಪಾಂತರಗಳಿಗಿಂತ ಡೆಲ್ಟಾ ಅತಿ ವೇಗವಾಗಿ ಹರಡುತ್ತಿದೆ ಹುಷಾರ್; WHO
ನವದೆಹಲಿ, ಜುಲೈ 20: "ಭಾರತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಪತ್ತೆಯಾಗಿ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರ ಬೇರೆಲ್ಲಾ ರೂಪಾಂತರಗಳಿಗಿಂತಲೂ ಅತಿ ವೇಗವಾಗಿ ಹರಡುತ್ತಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
"ಈ ಡೆಲ್ಟಾ ರೂಪಾಂತರ ಈಗಾಗಲೇ ನೂರು ದೇಶಗಳಲ್ಲಿ ಹರಡಿದೆ. ಮಿಕ್ಕೆಲ್ಲಾ ರೂಪಾಂತರಗಳಿಗಿಂತ ಈ ರೂಪಾಂತರದ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ. ಈ ರೂಪಾಂತರ ಹರಡುತ್ತಿರುವ ವೇಗವನ್ನು ಗಮನಿಸಿದರೆ, ಶೀಘ್ರವೇ ಜಾಗತಿಕವಾಗಿ ಅತಿ ಪ್ರಬಲವಾದ ರೂಪಾಂತರವಾಗುವ ಸಾಧ್ಯತೆಯಿದೆ" ಎಂದು ಡಬ್ಲುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.

ಸೋಮವಾರವಷ್ಟೆ, "ದೇಶದಲ್ಲಿರುವ ಶೇ.80ರಷ್ಟು ಕೊರೊನಾ ಸೋಂಕಿತ ಪ್ರಕರಣಗಳಿಗೆ ಡೆಲ್ಟಾ ರೂಪಾಂತರ ಕಾರಣ" ಎಂದು ಕೇಂದ್ರ ತಜ್ಞರ ಸಮಿಯ ಮುಖ್ಯಸ್ಥ ಡಾ. ಎನ್‌ಕೆ ಅರೋರಾ ಹೇಳಿದ್ದರು. "ಈ ರೂಪಾಂತರ ಅದರ ಹಿಂದಿನ ಆಲ್ಫಾ ರೂಪಾಂತರಕ್ಕಿಂತ ಶೇ. 40-60 ರಷ್ಟು ಹೆಚ್ಚಿಗೆ ಹರಡಬಲ್ಲದು. ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯ ಪ್ರದೇಶ ಸೇರಿದಂತೆ ದೇಶಾದ್ಯಂತ 11 ರಾಜ್ಯಗಳಲ್ಲಿ 55-60 ಪ್ರಕರಣಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರದ ಎವೈ.1 ಮತ್ತು ಎವೈ.2 ಪತ್ತೆಯಾಗಿದೆ. ಅದರ ಹರಡುವಿಕೆ ಹಾಗೂ ರೂಪಾಂತರದ ಮೇಲೆ ಲಸಿಕೆ ಪ್ರಭಾವದ ಕುರಿತು ಅಧ್ಯಯನ ಮಾಡಲಾಗುತ್ತಿದೆ" ಎಂದು ತಿಳಿಸಿದ್ದರು.
"ನೇಪಾಳ, ಪೋರ್ಚುಗಲ್ ನಂತಹ ದೇಶಗಳಲ್ಲಿಯೂ ಎವೈ 1 ಕಂಡುಬಂದಿದೆ. ಅದರ ಹರಡುವಿಕೆ, ಮತ್ತು ಗುಣಲಕ್ಷಣವನ್ನು ಅಧ್ಯಯನ ಮಾಡಲಾಗುತ್ತಿದೆ. ಇನ್ನಷ್ಟು ಹೆಚ್ಚು ಸಾಂಕ್ರಾಮಿಕದ ವೈರಾಣು ಬಂದರೆ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ" ಎಂದು ಎಚ್ಚರಿಸಿದ್ದರು.
ಇದೀಗ ಈ ರೂಪಾಂತರ ಅತಿ ವೇಗವಾಗಿ ಹರಡುತ್ತಿದ್ದು, ಜನರು ಎಚ್ಚರಿಕೆಯಿಂದಿರಬೇಕೆಂದು WHO ತಿಳಿಸಿದೆ.












Click it and Unblock the Notifications