Delhi Pollution: ದೆಹಲಿಯಲ್ಲಿ ಕಳಪೆಯಾದ ಗಾಳಿಯ ಗುಣಮಟ್ಟ: ಕೆಲ ವಾಹನಗಳಿಗೆ, ಕಟ್ಟಡ ನಿರ್ಮಾಣ, ಧ್ವಂಸಕ್ಕೆ ನಿಷೇಧ
ದೆಹಲಿ ನವೆಂಬರ್ 15: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿದ್ದು ಜನರ ಆರೋಗ್ಯದ ಬಗ್ಗೆ ಆತಂಕ ಶುರುವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಗೆ ದಟ್ಟ ಮಂಜಿನಂತೆ ಹವಾಮಾನ ಬದಲಾಗುತ್ತಿದ್ದು ಜನ ಉಸಿರಾಡುವುದು ಕಷ್ಟವಾಗಿದೆ. ತೋರಿಕೆಗೆ ಚಳಿಗಾಲದ ಮಂಜಿನಂತೆ ಕಾಣುವ ಧೂಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ.
ಹೌದು.. ಈ ಚಳಿಗಾಲದಲ್ಲಿ ದೆಹಲಿಯ ತಾಪಮಾನ ಮೊದಲ ಬಾರಿಗೆ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಹವಾಮಾನ ಬದಲಾವಣೆ ಜೊತೆಗೆ ನಗರದ ಗಾಳಿಯ ಗುಣಮಟ್ಟದಲ್ಲಿ ಕಳಪೆಯಾಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) ಈ ಋತುವಿನಲ್ಲಿ ಮೊದಲ ಬಾರಿಗೆ ತೀವ್ರ ಎಂದು ನೋಂದಾಯಿಸಲಾಗಿದೆ.

ಕಳೆದ 10 ವರ್ಷಗಳಲ್ಲಿ ತೀವ್ರ ಮಾಲಿನ್ಯದ ಸ್ಥಿತಿ ದೆಹಲಿಯಲ್ಲಿ ಕಂಡುಬಂದಿದೆ. ದೆಹಲಿಯ ಗಾಳಿಯ ಗುಣಮಟ್ಟ 'ತೀವ್ರ' ವರ್ಗಕ್ಕೆ ಹದಗೆಟ್ಟಿದೆ. ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಸೇರಿದಂತೆ ರಾಷ್ಟ್ರೀಯ ರಾಜಧಾನಿಯಲ್ಲಿ (ಎನ್‌ಸಿಆರ್) ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವಿಭಾಗದಲ್ಲಿದೆ. ಭಾರತದ ಪರಿಸರ ವೀಕ್ಷಣಾ ಸಂಸ್ಥೆ, ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ (CAQM), ಈ ಮಾಲಿನ್ಯವನ್ನು ಎದುರಿಸಲು ಇಂದಿನಿಂದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಅನ್ನು ಜಾರಿಗೆ ತಂದಿದೆ.
ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ನಿರ್ಬಂಧಗಳು ಜಾರಿಗೆ ಬಂದಿವೆ. ಅಪಾಯಕಾರಿ ಮಾಲಿನ್ಯ ಮಟ್ಟಗಳಿಗೆ ಪ್ರತಿಕ್ರಿಯೆಯಾಗಿ ದೆಹಲಿ ಸರ್ಕಾರ ಮುಂದಿನ ಆದೇಶದವರೆಗೆ ಪ್ರಾಥಮಿಕ ಶಾಲಾ ತರಗತಿಗಳನ್ನು ನಡೆಸಲಾಗುವುದಿಲ್ಲ ಎಂದು ಘೋಷಿಸಿದೆ. ಆನ್‌ಲೈನ್ ತರಗತಿಗಳನ್ನು ನಡೆಸಬಹುದು ಎಂದು ಶಾಲೆಗಳಿಗೆ ಸೂಚನೆ ನೀಡಿದೆ.
ಇಂದಿನಿಂದ ಈ ಕೆಳಗಿನ ಬದಲಾವಣೆಗಳಾಗಲಿವೆ..
ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರದಲ್ಲಿ ಇಂದಿನಿಂದ BS-III ಪೆಟ್ರೋಲ್ ಮತ್ತು BS-IV ಡೀಸೆಲ್ ನಾಲ್ಕು ಚಕ್ರಗಳ ವಾಹನದ ಮೇಲೆ ನಿಷೇಧ ಹೇರಲಾಗಿದೆ. ಉಲ್ಲಂಘಿಸುವವರಿಗೆ 20,000 ರೂಪಾಯಿ ದಂಡ ವಿಧಿಸಲಾಗುತ್ತದೆ.
CNG ಮತ್ತು ಎಲೆಕ್ಟ್ರಿಕ್ ವಾಹನಗಳಂತಹ ಶುದ್ಧ ಇಂಧನದಿಂದ ಚಲಿಸುವ ವಾಹನಗಳನ್ನು ಓಡಿಸಲು ಅನುಮತಿಸಲಾಗಿದೆ. ಕಡಿಮೆ ಮಾಲಿನ್ಯವನ್ನು ಹೊರಸೂಸುವ BS-VI ವಾಹನಗಳನ್ನು ಸಹ ಅನುಮತಿಸಲಾಗಿದೆ.
ಜೊತೆಗೆ ಧೂಳು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ದೆಹಲಿಯಲ್ಲಿ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಎನ್‌ಸಿಆರ್‌ನಾದ್ಯಂತ ನಿರ್ಮಾಣ ಮತ್ತು ಡೆಮಾಲಿಷನ್ (ಸಿ&ಡಿ) ನಿಯಮಗಳ ಅನುಸರಣೆ ಕಡ್ಡಾಯವಾಗಿದೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಸಹ GRAP-III ಮಾರ್ಗಸೂಚಿಗಳ ಪ್ರಕಾರ ತನ್ನ ಕಾರ್ಯಾಚರಣೆಗಳನ್ನು ನಡೆಸಲಿದೆ.
ದೆಹಲಿಯ AQI 441 ತಲುಪಿದೆ
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ ದೆಹಲಿಯ AQI ಗುರುವಾರ 441 ಆಗಿತ್ತು. ನೋಯ್ಡಾ ಮತ್ತು ಗುರುಗ್ರಾಮ್‌ನಂತಹ ಇತರ ಪ್ರದೇಶಗಳು ಕ್ರಮವಾಗಿ 455 ಮತ್ತು 444 ನಲ್ಲಿ ಇದೇ ಮಟ್ಟವನ್ನು ದಾಖಲಿಸಿವೆ. ದೆಹಲಿಯ 24-ಗಂಟೆಗಳ ಸರಾಸರಿ AQI ಗುರುವಾರ 424 ನಲ್ಲಿ ದಾಖಲಾಗಿದೆ, ಆನಂದ್ ವಿಹಾರ್, ವಿವೇಕ್ ವಿಹಾರ್, ವಜೀರ್‌ಪುರ್, ಬವಾನಾ ಸೆಕ್ಟರ್ 8, ಏರ್‌ಪೋರ್ಟ್ ಟರ್ಮಿನಲ್ 3, ITO ಮತ್ತು ಜಹಾಂಗೀರ್‌ಪುರಿ ಪ್ರದೇಶಗಳು ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿರುವ ಪ್ರದೇಶಗಳಲ್ಲಿ ಸೇರಿವೆ.












Click it and Unblock the Notifications