Delhi CM: ದೆಹಲಿ ಮುಖ್ಯಮಂತ್ರಿ ಪ್ರಮಾಣವಚನ ಯಾವಾಗ?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ. 70 ವಿಧಾನಸಭಾ ಸ್ಥಾನಗಳಲ್ಲಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಲಿದ್ದು, ಮುಖ್ಯಮಂತ್ರಿ ಪ್ರಮಾಣ ವಚನ ಯಾವಾಗ ಎನ್ನುವ ಪ್ರಶ್ನೆ ಆರಂಭವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಮತ್ತು ಅಮೆರಿಕಗೆ ಭೇಟಿ ನೀಡಲಿದ್ದು ಅವರು ವಾಪಸ್ ಬಂದ ಬಳಿಕವೇ ದೆಹಲಿ ಹೊಸ ಸಿಎಂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಫೆಬ್ರವರಿ 13 ನರೇಂದ್ರ ಮೋದಿ ಯುಎಸ್‌ಗೆ ಭೇಟಿ ನೀಡಲಿದ್ದಾರೆ.

ದೆಹಲಿಯಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಇದೀಗ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಕಸರತ್ತು ಮಾಡುತ್ತಿದೆ. ಈಗಾಗಲೇ ನಾಯಕರ ಜೊತೆ ಮಾತುಕತೆಗಳು ಆರಂಭವಾಗಿವೆ. ಈಗಾಗಲೇ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ನಿರ್ಧಾರವನ್ನು ಕೇಂದ್ರದ ನಾಯಕರು ಮಾಡಲಿದ್ದಾರೆ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಹೇಳಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ಶಾಸಕರು ತಮಗೆ ನೀಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿ ಮಾಡಲಿದ್ದಾರೆ. ಯುಎಸ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿರುವ ಟ್ರಂಪ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.
1998ರ ಬಳಿಕ ಅಧಿಕಾರಕ್ಕೆ
1998 ರಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಅಧಿಕಾರ ಕಳೆದುಕೊಂಡಿತು, 2013 ರವರೆಗೆ ಮುಂದಿನ ಮೂರು ಬಾರಿ ಕಾಂಗ್ರೆಸ್ ಸತತವಾಗಿ ಅಧಿಕಾರಕ್ಕೆ ಬಂದಿತು. ಬಳಿಕ ಬಂದ ಎಎಪಿ ಒಂದು ದಶಕಗಳ ಕಾಲ ದೆಹಲಿಯಲ್ಲಿ ಆಡಳಿತ ನಡೆಸಿತು. ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್ ಮತ್ತು ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಪ್ರಮುಖ ನಾಯಕರೇ ಈ ಬಾರಿ ಸೋತಿದ್ದಾರೆ.
ಮುಖ್ಯಮಂತ್ರಿ ಯಾರು?
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನೇ ಸೋಲಿಸಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಜಾಟ್ ಸಮುದಾಯದವರಾಗಿದ್ದು ಜಾತಿ ಕಾರ್ಡ್ ಕೂಡ ಅವರು ಸಿಎಂ ಆಗಲು ಸಹಾಯ ಮಾಡುವ ಸಾಧ್ಯತೆ ಇದೆ. ಸತೀಶ್ ಉಪಾಧ್ಯಾಯ, ವಿಜೇಂದರ್ ಗುಪ್ತಾ, ಆಶಿಶ್ ಸೂದ್ ಮತ್ತು ಪವನ್ ಶರ್ಮಾ ಅವರಂತಹ ಅನುಭವಿ ನಾಯಕರು ಕೂಡ ದೆಹಲಿ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.












Click it and Unblock the Notifications