ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ 134 ಆಪ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ನವದೆಹಲಿ, ನವೆಂಬರ್ 11: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಒಟ್ಟು 134 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಮಹಿಳೆಯರಿಗೆ ಸ್ಥಾನವನ್ನು ನೀಡಲಾಗಿದೆ.
ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸುದೀರ್ಘ ಸಭೆಯ ನಂತರ ಅಂತಿಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು. ಶುಕ್ರವಾರ ಪ್ರಕಟಿಸಿರುವ ಅಂತಿಮ ಪಟ್ಟಿಯಲ್ಲಿ 60ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನವನ್ನು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಶೇ.90ರಷ್ಟು ಅಭ್ಯರ್ಥಿಗಳು ತಳಮಟ್ಟದಲ್ಲಿ ಕೆಲಸ ಮಾಡುವ ಆಪ್ ಕಾರ್ಯಕರ್ತರೇ ಆಗಿದ್ದಾರೆ ಎಂದು ಆಪ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಮೊದಲೇ ಘೋಷಿಸಿದಂತೆ ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್ ಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಯಲಿದೆ. ತದನಂತರ ಡಿಸೆಂಬರ್ 7ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಆಪ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.
|
ಟಿಕೆಟ್ ಪಡೆಯುವುದಕ್ಕಾಗಿ 20,000 ಅರ್ಜಿ
ದೆಹಲಿ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ಟಿಕೆಟ್ ಪಡೆಯಲು 20,000ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ಹೇಳಿಕೊಂಡಿದೆ. ಈ ಹಿಂದಿನ ದಿನವೇ ಪಕ್ಷವು ತನ್ನ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಚುನಾವಣೆಗೆ ಪಕ್ಷದ 10 ಭರವಸೆಗಳ ಬಗ್ಗೆ ಘೋಷಿಸಿದ್ದರು.

ಆಪ್ ಘೋಷಿಸಿದ 10 ಭರವಸೆಗಳು
ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯ ಅಖಾಡಕ್ಕೆ ಧುಮುಕಿರುವ ಆಮ್ ಆದ್ಮಿ ಪಕ್ಷವು ಬಿಜೆಪಿಗೆ ಸೆಡ್ಡು ಹೊಡೆಯಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಇದರ ಮಧ್ಯೆ ರಾಜಧಾನಿ ಮತದಾರರಿಗೆ ಅರವಿಂದ್ ಕೇಜ್ರಿವಾಲ್ 10 ಭರವಸೆಗಳನ್ನು ನೀಡಿದ್ದಾರೆ. ಆ ಭರವಸೆಗಳು ಯಾವುವು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಅರವಿಂದ್ ಕೇಜ್ರಿವಾಲ್ ನೀಡಿದ 10 ಭರವಸೆ:
* ನಗರವನ್ನು ಸುಂದರಗೊಳಿಸುವುದು
* ಭೂಕುಸಿತಗಳನ್ನು ತೆಗೆದುಹಾಕುವುದು
* ಪಾರ್ಕಿಂಗ್ ಸಮಸ್ಯೆಗೆ ಪರಿಹಾರ
* ದೆಹಲಿಯನ್ನು ಬೀದಿ ಪ್ರಾಣಿಗಳಿಂದ ಮುಕ್ತಗೊಳಿಸುವುದು
* ಎಂಸಿಡಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸುಧಾರಿಸಲಾಗುವುದು
* ಉದ್ಯಾನವನಗಳನ್ನು ಸುಧಾರಿಸಲಾಗುವುದು ಮತ್ತು ದೆಹಲಿ ಉದ್ಯಾನವನಗಳ ನಗರವಾಗಲಿದೆ
* ತಾತ್ಕಾಲಿಕ ಕಾರ್ಮಿಕರನ್ನು ಕಾಯಂಗೊಳಿಸಲಾಗುವುದು, ವೇತನವನ್ನು ನಿಯಮಿತವಾಗಿ ನೀಡಲಾಗುವುದು
* ಈಗ ವ್ಯಾಪಾರಿಗಳಿಗೆ ಆನ್‌ಲೈನ್‌ನಲ್ಲಿ ಪರವಾನಗಿ ನೀಡಲಾಗುವುದು. "ಇನ್ಸ್‌ಪೆಕ್ಟರ್ ರಾಜ್" ಕೊನೆಗೊಳ್ಳುತ್ತದೆ
* ಬೀದಿ ವ್ಯಾಪಾರಿಗಳಿಗಾಗಿ ಸ್ವಚ್ಛ ಮಾರಾಟ ವಲಯಗಳನ್ನು ಮಾಡಲಾಗುವುದು

ರಾಜಧಾನಿ ಮಹಾನಗರ ಪಾಲಿಕೆಗಾಗಿ ತ್ರಿಕೋನ ಸ್ಪರ್ಧೆ
ನವದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ರಾಜಕೀಯ ಪಕ್ಷಗಳು ಪೈಪೋಟಿಗೆ ಇಳಿದಿವೆ. ರಾಷ್ಟ್ರೀಯ ಪಕ್ಷಗಳ ಎದುರು ಆಮ್ ಆದ್ಮಿ ಪಕ್ಷ ಕೂಡ ತೊಡೆ ತಟ್ಟಿ ನಿಂತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನವದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಪ್ ಪಕ್ಷಕ್ಕೆ ಚುನಾವಣೆಯು ಪ್ರತಿಷ್ಠೆಯಾಗಿದ್ದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮರ್ಯಾದೆ ಪ್ರಶ್ನೆಯಾಗಿದೆ. ಅದೇ ರೀತಿ ಆಪ್ ಮತ್ತು ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಕಚ್ಚೆ ಕಟ್ಟಿಕೊಂಡು ನಿಂತಿದೆ.

ದೆಹಲಿ ಮಹಾನಗರ ಪಾಲಿಕೆಗೆ ಯಾವಾಗ ಚುನಾವಣೆ
ನವದೆಹಲಿ ಮಹಾನಗರ ಪಾಲಿಕೆಯ 250 ಕ್ಷೇತ್ರಗಳಿಗೆ ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 4ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7ರಂದು ಮತ ಎಣಿಕೆ ಕಾರ್ಯ ನಡೆಯುತ್ತದೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ 2012ರಲ್ಲಿ ದೆಹಲಿ ಪಾಲಿಕೆಯನ್ನು ಉತ್ತರ, ದಕ್ಷಿಣ ಹಾಗೂ ಪೂರ್ವ ನಿಗಮಗಳಾಗಿ ವಿಭಜನೆ ಮಾಡಲಾಯಿತು.












Click it and Unblock the Notifications