ಕತ್ತುಸೀಳಿ ಹಿರಿಯ IAS ಅಧಿಕಾರಿ ಹತ್ಯೆ, ಪತ್ನಿ ನೇಣಿಗೆ

ದೆಹಲಿಯ ಮಧ್ಯ ಭಾಗದಲ್ಲಿರುವ ಕಾಕಾ ನಗರ್ ದಲ್ಲಿರುವ IAS ಅಧಿಕಾರಿಯ ಅಧಿಕೃತ ನಿವಾಸದಲ್ಲಿ ಶುಕ್ರವಾರ ಸಂಜೆ ಈ ಪೈಶಾಚಿಕ ಕೃತ್ಯಗಳು ನಡೆದಿವೆ. ಕೇಂದ್ರ ಸರಕಾರದಲ್ಲಿ ಜಂಟಿ ಕಾರ್ಯದರ್ಶಿಯಂತಹ ಉನ್ನತ ಸ್ಥಾನದಲ್ಲಿದ್ದ ಕೆ ವಿಜಯ್ ಕುಮಾರ್ ಮತ್ತು ಅವರ ಪತ್ನಿ ಸೀತಾ ಹತ್ಯೆಗೀಡಾದವರು. ಸೀತಾ ಅವರ ಕಳೇಬರ ಫ್ಯಾನಿಗೆ ನೇತಾಡುತ್ತಿತ್ತು.
ವಿಜಯ್ ಕುಮಾರ್ ಅವರ ಮನೆ ಒಳಗಿನಿಂದ ಲಾಕ್ ಮಾಡಲಾಗಿದ್ದು, ಯಾವುದೇ ವಸ್ತುಗಳು ಕಳುವಾಗಿಲ್ಲ. ದಂಪತಿಯ ಪುತ್ರಿ ಸ್ನೇಹಿತರೊಂದಿಗೆ ರಾಜಸ್ಥಾನಕ್ಕೆ ತೆರಳಿದ್ದರು. ಶುಕ್ರವಾರ ಮಧ್ಯಾಹ್ನ ಮನೆಗೆ ಮರಳಿದ ದಂಪತಿಯ ಪುತ್ರಿ ಸುಮಾರು ಅರ್ಧ ಗಂಟೆ ಕಾಲ ಕಾಲಿಂಗ್ ಬೆಲ್ ಮಾಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಪ್ಪನ ಮೊಬೈಲಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ.
ಆನಂತರ ಆಕೆ ತಂದೆಯ ಕಚೇರಿಗೆ ಕರೆ ಮಾಡಿದ್ದಾರೆ. ಆದರೆ, ವಿಜಯ್ ಕುಮಾರ್ ಕಚೇರಿಗೆ ಬಂದಿಲ್ಲ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಗಾಬರಿಗೊಂಡ ದಂಪತಿಯ ಪುತ್ರಿ ಇನ್ನೂ ತಡಮಾಡದೆ ಪೊಲೀಸರಿಗೆ ತಿಳಿಸಲಾಗಿ ಅವರು ಬಾಗಿಲು ಒಡೆದು ನೋಡಿದಾಗ ಮನೆಯಲ್ಲಿ ದುರಂತಗಳು ಘಟಿಸಿರುವುದು ಬೆಳಕಿಗೆ ಬಂದಿದೆ.
ಬೆಳಗ್ಗೆ 7.30ಕ್ಕೇ ಎಂದಿನಂತೆ ವಿಜಯ್ ಕುಮಾರ್ ಅವರ ಮನೆಗೆ ಕೆಲಸದವಳು ಬಂದಿದ್ದಳಾದರೂ ಯಾರೂ ಬಾಗಿಲು ತೆರೆಯದಿದ್ದಕ್ಕೆ ವಾಪಸ್ ಹೋಗಿದ್ದಾಗಿ ಮನೆಗೆಲಸದವಳು ಪೊಲೀಸರಿಗೆ ಹೇಳಿದ್ದಾಳೆ. ವಿಜಯ್ ಕುಮಾರ್ ತಮ್ಮ ಮನೆಗೆ CCTV camera ವ್ಯವಸ್ಥೆ ಹಾಕಿಸಿಕೊಂಡಿದ್ದು, ಅದನ್ನು ಪರಿಶೀಲಿಸಿದ ನಂತರ ಕೊಲೆಗಳ ರಹಸ್ಯ ಬಯಲಾಗಬಹುದು ಎಂದು ಪೊಲೀಸರು ಆಶಿಸಿದ್ದಾರೆ.












Click it and Unblock the Notifications