ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಖರ್ಚಿನ ವಿವರ: ಕಾಫಿಗೆ 12 ರೂ., ಟೀ 6 ರೂ.
ನವದೆಹಲಿ, ಜನವರಿ 23: ದೆಹಲಿ ವಿಧಾನಸಭೆ ಚುನಾವಣೆ-2025ರ ಪ್ರಚಾರ ಜೋರಾಗಿದೆ. ದೆಹಲಿಯ 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಘೋಷಣೆಯಾಗಲಿದೆ. 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿಗಳು ಪ್ರಚಾರಕ್ಕೆ ಎಷ್ಟು ಹಣ ಖರ್ಚು ಮಾಡಬೇಕು? ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಚುನಾವಣಾ ಆಯೋಗ ಅಭ್ಯರ್ಥಿಗಳು ಒಂದು ಪ್ಲೇಟ್ ಚೊಲೆ-ಕುಲ್ಚೆ ಮತ್ತು ಪೂರಿ-ಸಬ್ಜಿಗೆ 35 ರೂ., ಸಮೋಸ ಮತ್ತು ಬ್ರೆಡ್ ಪಕೋಡಾಗೆ 12 ರೂ., ಒಂದು ಕಪ್ ಟೀ 6 ರೂ, ಮತ್ತು ಕಾಫಿಗೆ 12 ರೂ. ಖರ್ಚು ಮಾಡಬಹುದು ಎಂದು ದರವನ್ನು ನಿಗದಿ ಮಾಡಿದೆ. ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ಇಷ್ಟು ಖರ್ಚು ಮಾಡಬೇಕು ಎಂದು ನಿಯಮ ಹೇಳಿದೆ.

ಜಿಲ್ಲಾ ಚುನಾವಣಾಧಿಕಾರಿಗಳು, ಮಾರ್ಕೆಟ್ ಡೀಲರ್‌ಗಳು, ಪಕ್ಷಗಳ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ಕುರಿತು ಆಯೋಗ ದರ ನಿಗದಿ ಮಾಡಿದೆ. ಒಟ್ಟಾರೆ ಚುನಾವಣಾ ವೆಚ್ಚವಾಗಿ ಒಬ್ಬ ಅಭ್ಯರ್ಥಿ 40 ಲಕ್ಷ ರೂ. ಖರ್ಚು ಮಾಡಬಹುದು ಎಂದು ಆಯೋಗ ಹೇಳಿದೆ, ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗೆ 95 ಲಕ್ಷ ರೂ. ನಿಗದಿ ಮಾಡಲಾಗಿತ್ತು.
ಅಭ್ಯರ್ಥಿಗಳ ಚುನಾವಣಾ ವೆಚ್ಚ: 2019ರಲ್ಲಿ ವಿಧಾನಸಭೆ ಚುನಾವಣೆಗೆ 28 ಲಕ್ಷ ಮತ್ತು ಲೋಕಸಭೆಗೆ 70 ಲಕ್ಷ ರೂ. ವೆಚ್ಚ ಮಾಡಬಹುದು ಎಂದು ಚುನಾವಣಾ ಆಯೋಗ ನಿಯಮ ರೂಪಿಸಿತ್ತು. ಆದರೆ ಈಗ ವೆಚ್ಚಗಳ ಅಧಿಕವಾಗುತ್ತಿರುವ ಕಾರಣ ಚುನಾವಣಾ ವೆಚ್ಚವನ್ನು ಸಹ ಏರಿಕೆ ಮಾಡಲಾಗಿದೆ.
ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಿದ ದಿನದಿಂದಲೇ ಆತನ ಚುನಾವಣಾ ವೆಚ್ಚವನ್ನು ಲೆಕ್ಕಹಾಕಲಾಗುತ್ತದೆ. ಫಲಿತಾಂಶ ಪ್ರಕಟಗೊಳ್ಳುವ ತನಕ ಅಭ್ಯರ್ಥಿ ಚುನಾವಣಾ ಖರ್ಚಿನ ಮೇಲೆ ಆಯೋಗ ನಿಗಾವಹಿಸಲಿದೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡುವ ವಾಹನಗಳ ಇಂಧನಕ್ಕೆ ಎಷ್ಟು ಖರ್ಚು ಮಾಡಬೇಕು? ಎಂದು ನಿಯಮ ತಿಳಿಸಿದೆ.
ಚುನಾವಣಾ ಆಯೋಗ ನಿಗದಿ ಮಾಡಿರುವ ಖರ್ಚಿನಲ್ಲಿ ಯಾವ ಅಭ್ಯರ್ಥಿಯೂ ಚುನಾವಣೆ ನಡೆಸುವುದಿಲ್ಲ. ಆಯೋಗ ವಾಹನಗಳ ಇಂಧನಕ್ಕೆ ನಿಗದಿ ಮಾಡಿರುವ ದರದಲ್ಲಿ ಯಾವ ವಾಹನವೂ ಬಾಡಿಗೆಗೆ ಸಿಗುವುದಿಲ್ಲ ಎಂದು ಪಕ್ಷಗಳ ಬೆಂಬಲಿಗರು ಹೇಳುತ್ತಿದ್ದಾರೆ.
2025ರ ದೆಹಲಿ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. 2015, 2020ರಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಜಯಗಳಿಸಿದೆ. ಈ ಬಾರಿ ಆಡಳಿತ ವಿರೋಧಿ ಅಲೆ ಇದ್ದು, ಎಎಪಿ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್, ಬಿಜೆಪಿ ಹೇಳುತ್ತಿವೆ.
ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಎಎಪಿ ನೇರ ಎದುರಾಳಿಗಳು. ಇಂಡಿಯಾ ಮೈತ್ರಿಕೂಟದಲ್ಲಿ ಮಿತ್ರಪಕ್ಷಗಳಾಗಿದ್ದರೂ ಸಹ ಎಎಪಿ, ಕಾಂಗ್ರೆಸ್ ದೆಹಲಿ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತಿವೆ. ಬಿಜೆಪಿ 70 ಸೀಟುಗಳ ಪೈಕಿ 68ರಲ್ಲಿ ಕಣಕ್ಕಿಳಿದಿದ್ದು, ಎರಡು ಸೀಟುಗಳನ್ನು ಜೆಡಿಯುಗೆ ಬಿಟ್ಟುಕೊಟ್ಟಿದೆ.
ದೆಹಲಿ ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. 10/1/2025ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ. 17/1/2025 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು. 18/1/2025 ನಾಮಪತ್ರಗಳ ಪರಿಶೀಲನೆ ನಡೆದಿದ್ದು,
20/1/2025 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು.
5/2/2025 (ಬುಧವಾರ) 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 8/2/2025 (ಶನಿವಾರ) ಮತ ಎಣಿಕೆ ನಡೆಯಲಿದೆ. 10/2/2025ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಬೇಕಿದೆ.












Click it and Unblock the Notifications