Delhi Election: ದೆಹಲಿ ವಿಧಾನಸಭೆ ಚುನಾವಣೆ: ಸಿ.ಎಂ ಅತಿಶಿ ಮರ್ಲೆನಾ ಸಿಂಗ್ vs ಸ್ಮೃತಿ ಇರಾನಿ ಫೈಟ್ ?
ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ದೆಹಲಿ ರಾಜಕೀಯದ ಲೆಕ್ಕಾಚಾರಗಳು ಜೋರಾಗಿವೆ. ದೆಹಲಿಯಲ್ಲಿ ಇದೀಗ ಆಮ್ ಆದ್ಮಿ ಪಾರ್ಟಿ ಅಧಿಕಾರದಲ್ಲಿ ಇದೆ. ಈ ಹಿಂದೆ ಎಎಪಿಯಿಂದ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿದ್ದರು. ಆದರೆ, ಮದ್ಯ ಹಗರಣದಲ್ಲಿ ಜೈಲು ಸೇರಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದೀಗ ದೆಹಲಿಯ ಮುಖ್ಯಮಂತ್ರಿಯಾಗಿ ಅತಿಶಿ ಮರ್ಲೆನಾ ಸಿಂಗ್ ಅವರು ಇದ್ದಾರೆ. ಈ ಬಾರಿ ಚುನಾವಣೆಗೆ ಅರವಿಂದ್ ಕೇಜ್ರಿವಾಲ್ ನೇತೃತ್ವ ವಹಿಸಿದ್ದರೂ, ಅತಿಶಿ ಅವರು ಎಎಪಿ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಇದೀಗ ಬಿಜೆಪಿ ಇದಕ್ಕೆ ರಣತಂತ್ರ ರೂಪಿಸುತ್ತಿದೆ.
ದೆಹಲಿಯಲ್ಲಿ ಈ ಬಾರಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುವುದು ಸವಾಲಿನಿಂದ ಕೂಡಿದೆ. ದೆಹಲಿಯಲ್ಲಿ ಈ ಬಾರಿ ಬಿಜೆಪಿಗೆ ಪೂರಕ ವಾತಾವರಣ ಇದೆ. ದೆಹಲಿ ವಿಧಾನಸಭೆ ಚುನಾವಣೆ ಮುಂದಿನ ವರ್ಷ ಅಂದರೆ 2025ನೇ ಸಾಲಿನ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ದೆಹಲಿ ವಿಧಾನಸಭೆಯಲ್ಲಿ ಒಟ್ಟು 70 ಶಾಸಕರ ಸಂಖ್ಯಾಬಲವಿದೆ. ಕಳೆದ ಬಾರಿ ನಡೆದಿದ್ದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ ಮುಂದಿನ ಬಾರಿ ಮಹಿಳಾ ಸಿ.ಎಂ ಟ್ರೆಂಡ್ ಆಗುತ್ತಿದ್ದು, ಎಎಪಿಗೆ ಶಾಕ್ ನೀಡುವುದಕ್ಕೆ ಬಿಜೆಪಿ ಮುಂದಾಗಿದೆ.

ಎಎಪಿ ಈ ಬಾರಿ ಅಧಿಕಾರಕ್ಕೆ ಬರುವುದು ಕಳೆದ ಬಾರಿಗಿಂತಲೂ ಸಿಕ್ಕಾಪಟ್ಟೆ ಕಷ್ಟ ಅಂತಲೇ ಹೇಳಲಾಗ್ತಿದೆ. ಈ ನಡುವೆ ಬಿಜೆಪಿ ನಾಯಕಿ ಹಾಗೂ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ದೆಹಲಿ ವಿಧಾನಸಭೆ ಚುನಾವಣೆಯ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವುದಕ್ಕೆ ಬಿಜೆಪಿ ಮುಂದಾಗಿದೆ ಎಂದು ವರದಿಯಾಗಿದೆ. ಸ್ಮೃತಿ ಇರಾನಿ ಅವರು ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರು. ಅವರನ್ನು ಮತ್ತೆ ಸಕ್ರಿಯ ರಾಜಕೀಯಕ್ಕೆ ಕರೆದುಕೊಂಡು ಬರುವ ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಬಿಜೆಪಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ, ದೆಹಲಿಯಲ್ಲಿ ಎಎಪಿ ಮಹಿಳಾ ಅಭ್ಯರ್ಥಿ ಹಾಗೂ ಬಿಜೆಪಿಯಿಂದ ಸ್ಮೃತಿ ಇರಾನಿ ನಡುವೆ ಫೈಟ್ ಏರ್ಪಟ್ಟರೆ ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರವಿದೆ. ಕಳೆದ ಬಾರಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸೀಟುಗಳ ಪೈಕಿ ಎಎಪಿ ಒಂದೇ ಪಕ್ಷ ಬರೋಬ್ಬರಿ 62 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು.

ಬಿಜೆಪಿಯಲ್ಲಿ ಪೈಪೋಟಿ: ಇದರ ಹೊರತಾಗಿ ದೆಹಲಿ ಬಿಜೆಪಿಯಲ್ಲಿ ಪ್ರಬಲ ಪೈಪೋಟಿ ಇದೆ ಎಂದು ಹೇಳಲಾಗುತ್ತಿದೆ. ದೆಹಲಿಯ ಬಿಜೆಪಿ ನಾಯಕರಾದ ಮನೋಜ್ ತಿವಾರಿ, ಪ್ರದೀಪ್ ಖಂಡೇಲ್ವಾಲ್ ಹಾಗೂ ಬಾನ್ಸುರಿ ಸ್ವರಾಜ್ ಅವರು ಸೇರಿದಂತೆ ಹಲವು ಸ್ಪರ್ಧಿಗಳು ಬಿಜೆಪಿಯಲ್ಲಿ ಇದ್ದಾರೆ. ಈಗಾಗಲೇ ಇವರು ದೆಹಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಬಿಜೆಪಿಗೆ ಶಕ್ತಿ ತುಂಬುತ್ತಿದ್ದಾರೆ. ಹೀಗಾಗಿ, ಈಗಾಗಲೇ ಕೆಲಸ ಮಾಡುತ್ತಿರುವವರನ್ನು ಬಿಟ್ಟು ಹೊಸಬರನ್ನು ತರುವ ಪ್ರಯತ್ನ ಕಡಿಮೆ ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಯಾವಾಗಲೂ ಅಚ್ಚರಿ ಮೂಡಿಸುತ್ತದೆ. ಹೀಗಾಗಿ, ಈ ಬಾರಿ ಬಿಜೆಪಿಯಿಂದ ಯಾರು ಮುಖ್ಯಮಂತ್ರಿ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.












Click it and Unblock the Notifications