Delhi Election 2025 Exit Poll: ಪಿ-ಮಾರ್ಕ್ ಸಮೀಕ್ಷೆಯಲ್ಲಿ ಅರಳಿದ ಕಮಲ, ಎಎಪಿಗೆ ಭಾರೀ ಹಿನ್ನಡೆ
ದೆಹಲಿ ಜನವರಿ 5: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ಇಂದು ಪೂರ್ಣಗೊಂಡಿದ್ದು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಬಹಿರಂಗಗೊಂಡಿವೆ. ಹಲವಾರು ಸಮೀಕ್ಷೆಯ ಫಲಿತಾಂಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಅದೇ ರೀತಿ ಪಿ-ಮಾರ್ಕ್ ಸಮೀಕ್ಷೆಯೂ ಕೂಡ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಹಾಗಾದರೆ ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಲಿದೆ ಎಂದು ಈಗ ತಿಳಿಯೋಣ.
ಪಿ-ಮಾರ್ಕ್ ಸಮೀಕ್ಷೆಯ ಪ್ರಕಾರ ಬಿಜೆಪಿ 39-49 ಸ್ಥಾನಗಳೊಂದಿಗೆ ದೆಹಲಿಯಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ. ಎಎಪಿ 21-31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದು ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದಿಲ್ಲ ಎಂದಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ಯಾವುದೇ ಎಕ್ಸಿಟ್ ಪೋಲ್‌ನಲ್ಲೂ ಕಾಂಗ್ರೆಸ್‌ಗೆ ಕನಿಷ್ಠ 5 ಸೀಟುಗಳು ಸಹ ಬಂದಿಲ್ಲ. ಇದರಿಂದಾಗಿ ದೆಹಲಿಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣುವುದು ಪಕ್ಕಾ ಎನ್ನಲಾಗುತ್ತಿದೆ.

ಅಲ್ಲದೆ ಬಹುತೇಕ ಸಮೀಕ್ಷೆಗಳು ಕಮಲವನ್ನು ಅರಳಿಸಿ ಪೊರಕೆಯನ್ನು ಗುಡಿಸಿ ಬೀಸಾಡಿದೆ. ದೆಹಲಿಯಲ್ಲಿ ಈ ಬಾರಿ ಎಎಪಿ ಗೆಲುವು ಸಾಧಿಸುವುದು ಕಷ್ಟ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಕಳೆದ ಎರಡು ಚುನಾವಣೆಗಳಲ್ಲೂ ಆಮ್ ಆದ್ಮಿ ಪಕ್ಷ ದೆಹಲಿಯ ಅಧಿಕಾರದ ಗದ್ದುಗೆ ಹಿಡಿದಿತ್ತು. ಆದರೀಗ ಆ ಅವಕಾಶವನ್ನು ಕಳೆದುಕೊಂಡಿದೆ. ದೆಹಲಿ ಮತದಾನ ಪ್ರಭುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಕ್ಷದತ್ತ ಒಲವು ತೋರಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ. ದೆಹಲಿ ವಿಧಾನಸಭಾ ಚುನಾವಣೆಯ 70 ಕ್ಷೇತ್ರಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಂಡಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೋತ್ತರ ಸಮೀಕ್ಷೆಗಳ ಕುರಿತು ಮಾತನಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಬಗ್ಗೆ ನನಗೆ ವಿಶ್ವಾಸ ಇದೆ. ದೆಹಲಿಯ ಜನರು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.
ನಮಗೆ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ದೆಹಲಿಯ ಜನರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಆಮ್ ಆದ್ಮಿ ಪಾರ್ಟಿಯು ದೆಹಲಿಯನ್ನು ತೊರೆಯುತ್ತಿದೆ ಮತ್ತು ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ದೆಹಲಿಯ ಜನರು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಬಯಸಿದ್ದಾರೆ ಎಂದು ಅವರು ತಿಳಿಸಿದರು.












Click it and Unblock the Notifications