ಮತ್ತೆ ರೈತ ಹೋರಾಟ ಆರಂಭ: ಪಂಜಾಬ್, ಹರಿಯಾಣ ಗಡಿ ಬಂದ್, ಇಂಟರ್ನೆಟ್ ಮೇಲೂ ಸರ್ಕಾರದ ಕಣ್ಣು!
ನವದೆಹಲಿ, ಫೆಬ್ರವರಿ.11: ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13 ರಂದು ರೈತರ 'ದೆಹಲಿ ಚಲೋ'ಗೆ ಕರೆ ನೀಡಿವೆ. ಈ ರ‍್ಯಾಲಿಗೆ ಮುಂಚಿತವಾಗಿ ಪಂಜಾಬ್ ಮತ್ತು ಹರಿಯಾಣ ಗಡಿಗಳನ್ನು ಮುಚ್ಚಲಾಗುತ್ತಿದೆ.
200ಕ್ಕೂ ಹೆಚ್ಚು ರೈತ ಸಂಘಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳ ಗಡಿಗಳನ್ನು ಮುಚ್ಚಲಾಗಿದೆ. ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಎಂಬ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು ಮತ್ತು ಎಸ್‌ಎಂಎಸ್‌ಗಳನ್ನು ಸ್ಥಗಿತಗೊಳಿಸಲು ಹರಿಯಾಣ ಸರ್ಕಾರ ಶನಿವಾರ ಆದೇಶಿಸಿದೆ.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣ ಸರ್ಕಾರ ಫೆಬ್ರವರಿ 13 ರಂದು ರೈತರ ಉದ್ದೇಶಿತ 'ದೆಹಲಿ ಚಲೋ' ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 13 ರವರೆಗೆ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್, ಬಲ್ಕ್ ಎಸ್‌ಎಂಎಸ್ ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಶನಿವಾರ ಘೋಷಿಸಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಖಾತರಿಪಡಿಸುವ ಕಾನೂನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಈ 'ದೆಹಲಿ ಚಲೋ' ಮೆರವಣಿಗೆಯ ಉದ್ದೇಶವಾಗಿದೆ.ಈ ಪ್ರತಿಭಟನೆಯು 2020 ರಲ್ಲಿ ದೆಹಲಿ ಗಡಿಯಲ್ಲಿ ಒಂದೂವರೆ ವರ್ಷದವರೆಗೆ ನಡೆದ ರೈತರ ಪ್ರತಿಭಟನೆಯನ್ನು ನೆನಪಿಸುವಂತಿದೆ. ಏಕೆಂದರೆ ಈ ಬಾರಿಯೂ ಸಹ, ರೈತರು ಎಲ್ಲಾ ಅಗತ್ಯ ವಸ್ತುಗಳು, ಪಡಿತರ ಮತ್ತು ಸಿಲಿಂಡರ್‌ಗಳೊಂದಿಗೆ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದಾರೆ.
ಹರಿಯಾಣ ಆಡಳಿತವು ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಧ್ವನಿ ಕರೆಗಳನ್ನು ಹೊರತುಪಡಿಸಿ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಒದಗಿಸಲಾದ ಬೃಹತ್ ಎಸ್‌ಎಂಎಸ್ ಮತ್ತು ಎಲ್ಲಾ ಡಾಂಗಲ್ ಸೇವೆಗಳನ್ನು ಅಮಾನತುಗೊಳಿಸಲಾಗುತ್ತದೆ. ಈ ಆದೇಶವು ಫೆಬ್ರವರಿ 11 ರ ಬೆಳಗ್ಗೆ 6 ರಿಂದ ಫೆಬ್ರವರಿ 13 ರ ರಾತ್ರಿ 11:59 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇನ್ನು, ರೈತರ 'ದೆಹಲಿ ಚಲೋ' ಮೆರವಣಿಗೆಗೆ ಪೂರ್ವಭಾವಿಯಾಗಿ ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳಲ್ಲಿ ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿಯನ್ನು ಭದ್ರಪಡಿಸಲು ಭಾರಿ ಬಂದೋಬಸ್ತ್ ವ್ಯವಸ್ಥೆಗಳು ನಡೆಯುತ್ತಿವೆ. ರೈತರ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಂಬಾಲಾದಲ್ಲಿ ಹರಿಯಾಣ ಪೊಲೀಸರು ಮತ್ತು ಸ್ಥಳೀಯ ಆಡಳಿತವು ಬ್ಯಾರಿಕೇಡ್‌ಗಳನ್ನು ಹಾಕುತ್ತಿದೆ.

ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹರಿಯಾಣದ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್, ಪೊಲೀಸ್ ಮಹಾನಿರೀಕ್ಷಕ (ಅಂಬಾಲಾ ರೇಂಜ್) ಶಿವಾಸ್ ಕವಿರಾಜ್ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಜಶಂದೀಪ್ ಸಿಂಗ್ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ಚಂಡೀಗಢದಿಂದ ದೆಹಲಿಗೆ ಹೋಗುವ ಪ್ರಯಾಣಿಕರು ದೇರಾಬಸ್ಸಿ, ಬರ್ವಾಲಾ/ರಾಮ್‌ಗಢ, ಸಹಾ, ಶಹಬಾದ್, ಕುರುಕ್ಷೇತ್ರ ಅಥವಾ ಪಂಚಕುಲ, NH-344 ಯಮುನಾನಗರ ಇಂದ್ರಿ/ಪಿಪ್ಲಿ, ಕರ್ನಾಲ್ ಮೂಲಕ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ತಿಳಿಸಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಪಂಜಾಬ್‌ಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹರಿಯಾಣ ಪೊಲೀಸರು 50 ಕಂಪನಿಗಳ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ. ಪ್ರತಿಭಟನಾ ನಿರತ ರೈತರು ಯೋಜಿತ ಮೆರವಣಿಗೆಯಲ್ಲಿ ಅನುಮತಿ ಇಲ್ಲದೆ ಭಾಗವಹಿಸದಂತೆ ಮನವಿ ಮಾಡಲಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳಲ್ಲಿ ಇದೇ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ರೈತರು ಅಂಬಾಲಾ-ಶಂಭು ಗಡಿ, ಖಾನೌರಿ-ಜಿಂದ್ ಮತ್ತು ದಬ್ವಾಲಿ ಗಡಿಯಿಂದ ದೆಹಲಿಗೆ ಹೋಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.












Click it and Unblock the Notifications