Delhi Assembly Election 2025: ದೆಹಲಿ ಚುನಾವಣೆ, ಎಎಪಿಗೆ ಪ್ರಬಲ ಪೈಪೋಟಿಯ ಆತಂಕ
ನವದೆಹಲಿ, ಜನವರಿ 15: 2025ರ ದೆಹಲಿ ವಿಧಾನಸಭೆ ಚುನಾವಣೆ ಆಮ್ ಆದ್ಮಿ ಪಕ್ಷಕ್ಕೆ ಸವಾಲು. 2015, 2020ರಲ್ಲಿ ಗೆಲುವು ಸಾಧಿಸಿರುವ ಪಕ್ಷ ಈ ಬಾರಿ ಬಿಜೆಪಿ, ಕಾಂಗ್ರೆಸ್‌ನಿಂದ ಪ್ರಬಲ ಪೈಪೋಟಿ ಎದುರಿಸುವ ನಿರೀಕ್ಷೆ ಇದೆ. ಕಳೆದ ಚುನಾವಣೆಯಲ್ಲಿ ಎಎಪಿ 70 ಕ್ಷೇತ್ರಗಳ ಪೈಕಿ 62ರಲ್ಲಿ ಜಯಗಳಿಸುವ ಮೂಲಕ ಪ್ರಚಂಡ ಜಯ ದಾಖಲಿಸಿತ್ತು. ಆದರೆ ಈ ಬಾರಿ ಚುನಾವಣಾ ಚಿತ್ರಣ ಬೇರೆಯಾಗಿದೆ, ಎಎಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂದು ವರದಿಗಳಿವೆ.
ದೆಹಲಿಯ 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಈ ಬಾರಿಯೂ ಗೆದ್ದು, ಹ್ಯಾಟ್ರಿಕ್ ಬಾರಿಸಬೇಕು ಎಂದು ಎಎಪಿ ಪಕ್ಷ ತಂತ್ರವನ್ನು ರೂಪಿಸಿ ಚುನಾವಣಾ ಪ್ರಚಾರ ಆರಂಭಿಸಿದೆ.

ಕಳೆದ ಚುನಾವಣೆಯಲ್ಲಿ 70ರ ಪೈಕಿ 62 ಕ್ಷೇತ್ರಗಳಲ್ಲಿ ಎಎಪಿ ಗೆದ್ದಿತ್ತು. ಆದರೆ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಶೇ 5ರಷ್ಟು ಮತಗಳು ಮಾತ್ರ ಇತ್ತು. ಈ ಬಾರಿ ಚುನಾವಣಾ ಚಿತ್ರಣ ಬದಲಾಗಿದೆ. ಆದ್ದರಿಂದ ಎಎಪಿಗೆ ಪ್ರಬಲ ಪೈಪೋಟಿ ಇದೆ ಎಂದು ರಾಜಕೀಯ ತಜ್ಞರು ಅಂದಾಜಿಸಿದ್ದಾರೆ.
ಎಎಪಿಗೆ ಪ್ರಬಲ ಪೈಪೋಟಿ: 2015ರಲ್ಲಿ 6 ಕ್ಷೇತ್ರಗಳಲ್ಲಿ ಶೇ 9ರಷ್ಟು ಗೆಲುವಿನ ಅಂತರ ಇತ್ತು. 2020ರಲ್ಲಿ ಇದು 13 ಸೀಟುಗಳಿಗೆ ಏರಿಕೆಯಾಗಿದೆ. ಉತ್ತರ ದೆಹಲಿಯಲ್ಲಿ 2015ರಲ್ಲಿ ಪಕ್ಷಕ್ಕೆ ಭಾರೀ ಬೆಂಬಲ ಸಿಕ್ಕಿತ್ತು. ಆದರೆ 2020ರಲ್ಲಿ ಬೆಂಬಲ ಕಡಿಮೆಯಾಗಿದೆ.
ದೊಡ್ಡ ಅಂತರದ ಗೆಲುವಿನ ಕ್ಷೇತ್ರಗಳು ಹೆಚ್ಚಾದರೆ ಪಕ್ಷಕ್ಕೆ ಹೆಚ್ಚಿನ ಸೀಟುಗಳು ಸಿಗಲಿವೆ. ಆದರೆ ಕಳೆದ ಎರಡು ಚುನಾವಣೆಯಲ್ಲಿ ಶೇ 10ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ಕ್ಷೇತ್ರಗಳು ಈ ಬಾರಿಯ ಚುನಾವಣೆಯಲ್ಲಿ ಯಾರ ಪಾಲಾಗಲಿದೆ? ಎಂದು ಊಹಿಸುವುದು ಕಷ್ಟ. ಆದ್ದರಿಂದ ಸರಿಯಾದ ಚುನಾವಣಾ ತಂತ್ರಗಾರಿಕೆಯ ಅಗತ್ಯವಿದೆ.
2015ಕ್ಕೆ ಹೋಲಿಕೆ ಮಾಡಿದರೆ 2020ರಲ್ಲಿ ಪ್ರಬಲ ಪೈಪೋಟಿ ಎದುರಾಗಿದ್ದ ಕ್ಷೇತ್ರಗಳ ಸಂಖ್ಯೆ ಅಧಿಕವಾಗಿತ್ತು. 2015, 2020ರಲ್ಲಿ ಎಎಪಿ ಜಯಗಳಿಸಿದರೂ ಸಹ ಹಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ಎದುರಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಬಾರಿ ಪಕ್ಷ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದು, ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
2013ರಲ್ಲಿ ಶೇ 4ರಷ್ಟು ಕೇತ್ರಗಳನ್ನು ಎಎಪಿ ಶೇ 30ರಷ್ಟು ಮತಗಳ ಅಂತರದಲ್ಲಿ ಗೆದ್ದಿತ್ತು. 2015ರಲ್ಲಿ ಪ್ರಚಂಡ ಜಯದಾಖಲು ಮಾಡಿ ಈ ಪ್ರಮಾಣವನ್ನು ಪಕ್ಷ ಶೇ 17ಕ್ಕೆ ಹೆಚ್ಚಿಸಿಕೊಂಡಿತ್ತು. ಆದರೆ 2020ರಲ್ಲಿ ಇದು ಪುನಃ ಶೇ 11ಕ್ಕೆ ಕುಸಿಯಿತು. 2020ರಲ್ಲಿ ಬಿಜೆಪಿ 8 ಸೀಟುಗಳಲ್ಲಿ ಜಯಗಳಿಸಿತ್ತು.
2008ರಲ್ಲಿ ಕಾಂಗ್ರೆಸ್ 43 ಸೀಟುಗಳಲ್ಲಿ ಜಯಗಳಿಸಿತ್ತು. ಬಿಜೆಪಿ ಶೇ 5ರಷ್ಟು ಮತಗಳ ಅಂತರದಲ್ಲಿ 9 ಸೀಟುಗಳನ್ನು ಗೆದ್ದಿತ್ತು. 2013ರಲ್ಲಿ ಎಎಪಿ ಪಕ್ಷದ ಆಗಮನದ ಬಳಿಕ ಬಿಜೆಪಿ, ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿದೆ. ಎರಡು ಚುನಾವಣೆಯಲ್ಲಿ ಗೆದ್ದು ಎಎಪಿ ಅಧಿಕಾರ ಹಿಡಿದಿದೆ.












Click it and Unblock the Notifications