Delhi Assembly Election 2025: "ಪ್ರೀತಿಯ ದೆಹಲಿ ಜನರೇ" ಪ್ರಿಯಾಂಕಾ ಗಾಂಧಿ ಸಂದೇಶ ವೈರಲ್!
Delhi Assembly Election 2025: ದೆಹಲಿ ವಿಧಾನಸಭೆ ಚುನಾವಣೆ 2025ರ ಮತದಾನ ಭರ್ಜರಿಯಾಗಿ ನಡೆದಿದೆ. ದೆಹಲಿಯಲ್ಲಿ ಮತದಾನ ನಡೆಯುವಾಗಲೇ ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕಾ ಗಾಂಧಿ ಅವರು ದೆಹಲಿ ಮತದಾರರಿಗೆ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಈ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ.
ಆದರೆ, ಬಿಜೆಪಿ ಹಾಗೂ ಎಎಪಿ ನಡುವೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಭಾರೀ ಪೈಪೋಟಿ ಕೊಡುತ್ತಿದೆ. ಕಾಂಗ್ರೆಸ್ ಮೈತ್ರಿಕೂಟದ ಪಕ್ಷಗಳ ನಡುವೆಯೇ ಸ್ಪರ್ಧೆ ಜೋರಾಗಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬುಧವಾರ ಮತಚಲಾಯಿಸಿರುವ ಪ್ರಿಯಾಂಕಾ ಗಾಂಧಿ ಅವರು ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಮೊದಲ ಬಾರಿ ಅವರು ಸಂಸತ್ ಪ್ರವೇಶ ಮಾಡಿದಾಗಲೇ ಭಿನ್ನ ಬ್ಯಾಗ್‌ಗಳ ಮೂಲಕ ಗಮನ ಸೆಳೆದಿದ್ದರು. ಇದೀಗ ಅವರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪತಿ ರಾಬರ್ಟ್ ವಾದ್ರಾ ಹಾಗೂ ಪುತ್ರನೊಂದಿಗೆ ಮತ ಚಲಾಯಿಸಿ ದೆಹಲಿ ಮತದಾರರೊಂದಿಗೆ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ನನ್ನ ಪ್ರೀತಿಯ ದೆಹಲಿ ಜನರೇ ಎಂದ ಪ್ರಿಯಾಂಕಾ: ಕೇಂದ್ರಾಡಳಿತ ಪ್ರದೇಶ ಹಾಗೂ ದೆಹಲಿ ವಿಧಾನಸಭೆ ಚುನಾವಣೆ ಮತದಾನ ಇಂದು ನಡೆದಿದೆ. ದೆಹಲಿ ಚುನಾವಣೆಯ ಫಲಿತಾಂಶವು ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ. ಇಂದು ಘಟಾನುಘಟಿ ನಾಯಕರು ಮತ ಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸಹ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನನ್ನ ಪ್ರೀತಿಯ ದೆಹಲಿ ಜನರೇ ಎನ್ನುವ ಶೀರ್ಷಿಕೆಯೊಂದಿಗೆ ಸಂದೇಶ ಹಂಚಿಕೊಂಡಿದ್ದಾರೆ.
ನನ್ನ ಪ್ರೀತಿಯ ದೆಹಲಿ ಜನರೇ.. ಸಂವಿಧಾನವು ನಿಮಗೆ ಕೊಟ್ಟಿರುವ ಅಧಿಕಾರವನ್ನು ಬಳಸಿಕೊಂಡು ಮುಂದಿನ ಐದು ವರ್ಷಗಳ ಕಾಲ ನಿಮ್ಮ ಭವಿಷ್ಯವನ್ನು ನಿರ್ಧರಿಸುವ ದಿನ ಇದಾಗಿದೆ ಎಂದಿದ್ದಾರೆ. ಮುಂದುವರಿದು ನಿಮ್ಮ ಒಂದು ಮತವು ನಿಮ್ಮನ್ನು ಮತ್ತು ನಿಮ್ಮ ದೆಹಲಿಯನ್ನು ಬಲಿಷ್ಠಗೊಳಿಸುತ್ತದೆ. ನಿಮ್ಮ ಹಕ್ಕನ್ನು ಬುದ್ಧಿವಂತಿಕೆಯಿಂದ ಬಳಸಿ ಮತ್ತು ಮತ ಚಲಾಯಿಸಿ ಎಂದು ಹೇಳಿದ್ದಾರೆ.
ದೆಹಲಿ ಗ್ಯಾಸ್‌ಚೇಂಬರ್: ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ. ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಅವರು ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಅಲ್ಲದೆ ವಯನಾಡ್‌ನಿಂದ ದೆಹಲಿಗೆ ಹಿಂದಿರುಗಿದ ಮೇಲೆ ದೆಹಲಿಯನ್ನು ಗ್ಯಾಸ್ ಚೇಂಬರ್ ಎಂದು ಜರಿದಿದ್ದರು. ವಯನಾಡ್ ಹಾಗೂ ದೆಹಲಿ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದರು. ವಯನಾಡ್‌ನಲ್ಲಿ ಸ್ವಚ್ಛಂದವಾದ ಗಾಳಿ ಇದೆ. ದೆಹಲಿ ಗ್ಯಾಸ್ ಚೇಂಬರ್‌ನಂತೆ ಬದಲಾಗಿದೆ ಎಂದಿದ್ದರು.
ದೆಹಲಿಯಲ್ಲಿ ಬಿರುಸಿನ ಮತದಾನ: ದೆಹಲಿಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಶುರುವಾಗಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸಿರುವ ಎಎಪಿಯು ಹ್ಯಾಟ್ರಿಕ್ ಸಾಧನೆ ಮಾಡುವ ಹುಮ್ಮಸ್ಸು ತೋರಿಸುತ್ತಿದೆ. ಆದರೆ, ಕಳೆದ 25 ವರ್ಷಗಳಿಂದ ಆಡಳಿತದಿಂದ ದೂರವಿರುವ ಬಿಜೆಪಿಯು ಈ ಬಾರಿ ಎಎಪಿಗೆ ಭಾರೀ ಪೈಪೋಟಿ ಕೊಡುತ್ತಿದೆ. ಮದ್ಯ ನೀತಿ ಹಗರಣ ಹಾಗೂ ಭ್ರಷ್ಟಾಚಾರ ಆರೋಪಗಳು ಎಎಪಿಗೆ ಮುಳುವಾಗುವ ಸಾಧ್ಯತೆ ಇದೆ.
ಇನ್ನು ಕಾಂಗ್ರೆಸ್‌ನಲ್ಲಿ ಈ ಹಿಂದೆ ಸತತ ಮೂರು ಅವಧಿಗೆ 15 ವರ್ಷಗಳ ಕಾಲ ಆಡಳಿತ ನಡೆಸಿತ್ತು. ಆದರೆ, ಕಳೆದ ಎರಡು ಬಾರಿಯಿಂದಲೂ ಇಲ್ಲಿ ಪ್ರಬಲ ಪೈಪೋಟಿ ಕೊಡುತ್ತಿಲ್ಲ. ಕಳೆದ ಬಾರಿ ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು.












Click it and Unblock the Notifications