ದೀಪಾ ಮಲಿಕ್ ಬದುಕನ್ನೇ ಬದಲಿಸಿದ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಯ ಆ ಒಂದು ಮಾತು!
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ದೀಪಾ ಮಲಿಕ್. ಅವರ ಈ ಅದ್ಭುತ ಸಾಧನೆಯ ಹಿಂದೆ ಅಡಗಿರುವ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.
ಕಷ್ಟಗಳು ಎದುರಾದಾಗ ಕುಗ್ಗಿ ಹೋಗುವ ಬದಲು, ಅದನ್ನ ಎದುರಿಸಿ ನಿಲ್ಲುವ ಧೈರ್ಯವನ್ನ ದೀಪಾ ಮಲಿಕ್ ಮಾಡಿದ್ದಾರೆ. ಅವರ ಈ ಯಶಸ್ಸಿನ ಹಾದಿಯಲ್ಲಿ, ಆಸ್ಪತ್ರೆಯೊಬ್ಬರ ಸ್ವಚ್ಛತಾ ಕಾರ್ಮಿಕಳ ಮಾತುಗಳು ಹೇಗೆ ಪ್ರಭಾವ ಬೀರಿದವು ಎಂಬುದು ನಿಜಕ್ಕೂ ಆಶ್ಚರ್ಯಕರ.

ದೀಪಾ ಮಲಿಕ್ ಜೀವನದ ಹೋರಾಟ
ದೀಪಾ ಮಲಿಕ್ ಅವರ ಬದುಕು ಎಂದಿಗೂ ಹೂವಿನ ಹಾಸಿಗೆಯಾಗಿರಲಿಲ್ಲ. ಅವರಿಗೆ ಕೇವಲ 29 ವರ್ಷ ವಯಸ್ಸಾಗಿದ್ದಾಗ ಬೆನ್ನುಹುರಿಯ ಟ್ಯೂಮರ್ (ಕ್ಯಾನ್ಸರ್) ಇರುವುದು ಗೊತ್ತಾಯಿತು. ಇದು ಅವರ ಜೀವನದಲ್ಲಿ ಎದುರಾಗಿರುವ ಅತಿದೊಡ್ಡ ಆಘಾತ. ಶಸ್ತ್ರಚಿಕಿತ್ಸೆಯ ನಂತರ ದೀಪಾ ಅವರ ಸೊಂಟದ ಕೆಳಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿತು. ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನ ವೈದ್ಯರು ತಿಳಿಸಿದರು.
ಬೆನ್ನುಹುರಿಯ ಟ್ಯೂಮರ್ ನಿಂದಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡಾಗ ದೀಪಾ ಅವರಿಗೆ ತನ್ನ ಕನಸುಗಳೆಲ್ಲಾ ನುಚ್ಚುನೂರಾದವು ಎಂದು ಅನಿಸಿತ್ತು. ಇನ್ನು ವೀಲ್ ಚೇರ್ ನಲ್ಲೇ ಜೀವನ ಕಳೆಯಬೇಕು ಎಂಬ ವಾಸ್ತವವನ್ನ ಒಪ್ಪಿಕೊಳ್ಳುವುದು ಅವರಿಗೆ ಸ್ವಲ್ಪ ಕಷ್ಟವಾಯ್ತು.
ಆಸ್ಪತ್ರೆಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪಾ ಅವರಿಗೆ ಭವಿಷ್ಯದ ಬಗ್ಗೆ ಚಿಂತೆ ಕಾಡಲಾರಂಭಿಸಿತು. ಆದರೆ, ಅದೇ ಆಸ್ಪತ್ರೆಯಲ್ಲಿದ್ದ ಒಬ್ಬ ಮಹಿಳೆ ದೀಪಾ ಅವರ ಆಲೋಚನಾ ಲಹರಿಯನ್ನೇ ಬದಲಾಯಿಸಿದರು.
ಆಸ್ಪತ್ರೆ ಸ್ವಚ್ಛತಾ ಕಾರ್ಮಿಕಳಿಂದ ಸಿಕ್ಕ ಜೀವನ ಪಾಠ
ಆಸ್ಪತ್ರೆಯ ಅದೇ ವಾರ್ಡ್‌ನಲ್ಲಿ ಸುಮಾರು 35 ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ದೀಪಾ ಅವರ ಪಾಲಿಗೆ ದೇವತೆಯಾಗಿ ಬಂದಳು. ಆ ಮಹಿಳೆಯ ಮಕ್ಕಳು ಬೆಳೆದು ದೊಡ್ಡವರಾಗಿ, ಸರ್ಕಾರಿ ಉದ್ಯೋಗದಲ್ಲಿದ್ದರು. ಇದನ್ನು ತಿಳಿದ ದೀಪಾ ಒಂದು ದಿನ ಆ ಮಹಿಳೆಗೆ, "ನಿಮ್ಮ ಮಕ್ಕಳು ಈಗ ಉತ್ತಮ ಕೆಲಸದಲ್ಲಿದ್ದಾರೆ, ನೀವೇಕೆ ಈ ವಯಸ್ಸಿನಲ್ಲಿ ಕೆಲಸ ಬಿಟ್ಟು ವಿಶ್ರಾಂತಿ ಪಡೆಯಬಾರದು?" ಎಂದು ಕೇಳಿದರು.
ಅದಕ್ಕೆ ಆ ಮಹಿಳೆ ನೀಡಿದ ಉತ್ತರ ದೀಪಾ ಅವರ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿತು. "ಈ ಕೆಲಸವೇ ನನಗೆ ನನ್ನ ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಅವರಿಗೆ ಉತ್ತಮ ಜೀವನ ರೂಪಿಸಿಕೊಡಲು ಶಕ್ತಿ ನೀಡಿದ್ದು," ಎಂದು ಆಕೆ ಹೆಮ್ಮೆಯಿಂದ ಹೇಳಿದಳು. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಘನತೆ ಇದೆ ಎಂಬುದನ್ನ ಅವರ ಮಾತುಗಳು ದೀಪಾಗೆ ಅರಿವು ಮಾಡಿಕೊಟ್ಟವು.
ಆ ಸ್ವಚ್ಛತಾ ಸಿಬ್ಬಂದಿ ದೀಪಾಗೆ ಹೇಳಿದ ಮತ್ತೊಂದು ಮಾತು ಅವರ ಬದುಕಿಗೆ ಹೊಸ ತಿರುವು ನೀಡಿತು. "ಮಗಳೇ, ನಾನು ಹೆಚ್ಚು ಓದಿಲ್ಲದಿರಬಹುದು, ಆದರೆ ನನಗೊಂದು ವಿಷಯ ಗೊತ್ತಿದೆ. ನಿನಗೆ ಇನ್ನು ಮುಂದೆ ನಡೆಯಲು ಸಾಧ್ಯವಾಗದಿರಬಹುದು, ಆದರೆ ನೀನು ಖಂಡಿತಾ ಬದುಕುತ್ತೀಯಾ" ಎಂದು ಆಕೆ ಧೈರ್ಯ ತುಂಬಿದಳು. ನಮ್ಮಲ್ಲಿರುವುದರ ಬಗ್ಗೆ ನಾವೆಂದೂ ಹೆಮ್ಮೆ ಮತ್ತು ಕೃತಜ್ಞತೆ ಹೊಂದಿರಬೇಕು ಎಂಬುದನ್ನ ಆಕೆ ದೀಪಾಗೆ ಕಲಿಸಿಕೊಟ್ಟಳು.
40ನೇ ವಯಸ್ಸಿನಲ್ಲಿ ಕ್ರೀಡಾ ಲೋಕಕ್ಕೆ ಎಂಟ್ರಿ
ಆಸ್ಪತ್ರೆಯ ಹಾಸಿಗೆಯಲ್ಲಿ ಸಿಕ್ಕ ಈ ಸ್ಪೂರ್ತಿಯಿಂದ ದೀಪಾ ಮಲಿಕ್ ತಮ್ಮ ಬದುಕನ್ನ ಹೊಸದಾಗಿ ಆರಂಭಿಸಲು ನಿರ್ಧರಿಸಿದರು. ವ್ಹೀಲ್ ಚೇರ್ ನಲ್ಲೇ ಕುಳಿತು ತಮ್ಮ 40ನೇ ವಯಸ್ಸಿನಲ್ಲಿ ಕ್ರೀಡಾ ಜಗತ್ತಿಗೆ ಕಾಲಿಟ್ಟರು. 40ನೇ ವಯಸ್ಸಿನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ.
ಆದರೆ ದೀಪಾ ಮಲಿಕ್ ಅವರು ಎಲ್ಲಾ ಅಡೆತಡೆಗಳನ್ನ ಮೀರಿ ನಿಂತರು. ಶಾಟ್‌ಪುಟ್, ಜಾವೆಲಿನ್ ಥ್ರೋ ಹಾಗೂ ಈಜು ಸ್ಪರ್ಧೆಗಳಲ್ಲಿ ಕಠಿಣ ತರಬೇತಿ ಪಡೆದರು. ಇದರ ಫಲವಾಗಿ 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಶಾಟ್‌ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು.
ಒಬ್ಬ ಸಾಮಾನ್ಯ ಸ್ವಚ್ಛತಾ ಸಿಬ್ಬಂದಿಯ ಸಾಮಾನ್ಯ ಮಾತುಗಳು, ಕ್ರೀಡಾ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ದೀಪಾ ಮಲಿಕ್ ಅವರಿಗೆ ಹೇಗೆ ದಾರಿದೀಪವಾಯಿತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಂಗವೈಕಲ್ಯವು ಕೇವಲ ದೇಹಕ್ಕೆ ಸೀಮಿತವೇ ಹೊರತು ಮನಸ್ಸಿಗಲ್ಲ ಎಂಬುದನ್ನು ಅವರು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ.


Click it and Unblock the Notifications
