Cyclone Mocha: ಮೇ 15ರವರೆಗೆ 'ಮೋಚಾ' ಹಾವಳಿ, ಪ್ರತಿ ಗಂಟೆಗೆ 175 ಕಿ.ಮೀ. ವೇಗ
ಬೆಂಗಳೂರು, ಮೇ 11: ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಕಳೆದ ಮೇ 6ರಂದು ವಾಯುಭಾರ ಕುಸಿತ ರೂಪದಲ್ಲಿ ಸೃಷ್ಟಿಯಾಗಿ ಸದ್ಯ 'ಮೋಚಾ' ಚಂಡಮಾರುತವಾಗಿ ಬದಲಾಗಿದೆ. ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ಇದರ ಆರ್ಭಟ ಮುಂದಿನ ಮೇ 15ವರೆಗೆ ಮುಂದುವರಿಯಲಿದೆ
ದೇಶದಲ್ಲಿ ಮುಂದಿನ ನಾಲ್ಕು ದಿನಗಳ ಪೈಕಿ ನಾಳೆ ಶುಕ್ರವಾರದಿಂದ ಮೂರು ದಿನ ದಕ್ಷಿಣ ಭಾರತ ಕರಾವಳಿ ತೀರಗಳಿಗೆ ಹೆಚ್ಚು ಹಾನಿಯಾಬಹುದು. ಈ ಹಾನಿ ಕುರಿತು ಚಂಡಮಾರುತದ (ಗಾಳಿ) ವೇಗದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.

ಹಾಗಾದರೆ ಚೆಂಡಮಾರುತದ ವೇಗ, ಅದರ ಚಲನೆ ಮತ್ತು ಕರ್ನಾಟಕ ರಾಜ್ಯದ ಮೇಲೆ ಅದರ ಪ್ರಭಾವ ಕುರಿತು ಇಲ್ಲಿ ಪೂರ್ತಿ ವಿವರಿಸಲಾಗಿದೆ.
ಇಂದಿನಿಂದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಚಂಡಮಾರುತದ ವೇಗವು ಗುರುವಾರ ಬೆಳಗ್ಗೆ 11.30ಕ್ಕೆ ಗಂಟೆಗೆ ಪ್ರತಿ ಗಂಟೆಗೆ 75-85ಕಿಲೋ ಮೀಟರ್ ನಷ್ಟಿತ್ತು. ಸಂಜೆ 5.30ಕ್ಕೆ 85-95 ಕಿಲೋ ಮೀಟರ್ ನಷ್ಟ ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೊಮ್ಮೆ 105 ಕಿಲೋ ಮೀಟರ್ ವೇಗದಲ್ಲಿ ಮೋಚಾ ಸುಂಟರಗಾಳಿ ಬೀಸಲಿದೆ.
ಗರಿಷ್ಠ ವೇಗದಲ್ಲಿ ಸಂಚರಿಸಲಿರುವ ಮೋಚಾ ಚಂಡಮಾರುತ ಶುಕ್ರವಾರ ಬೆಳಗ್ಗೆ 5.30ಕ್ಕೆ 115-125 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತದೆ. ನಂತರ 11.30 ಗಂಟೆಗೆ 135-145 ಕಿಲೋ ಮೀಟರ್‌ವರೆಗೆ ಮತ್ತಷ್ಟು ಹೆಚ್ಚಾಗಲಿದೆ. ಅಂದು ರಾತ್ರಿ 12.30ರ ವೇಳೆಗೆ ಚಂಡಮಾರುತದ ವೇಗ ಗರಿಷ್ಠ 165 ಕಿಲೋ ಮೀಟರ್‌ಗೆ ಏರಿಕೆಯಾಗಲಿದೆ. ಈ ವೇಳೆ ಸಮುದ್ರ ತೀರದ ಪ್ರದೇಶಗಳಲ್ಲಿ ಮಳೆ ಆರ್ಭಟಿಸಲಿದೆ.

ಮೇ 13 ಶನಿವಾರ ಬೆಳಗ್ಗೆ 11.30ರಿಂದ ಭಾನುವಾರ ಮೇ 14ರ ಬೆಳಗ್ಗೆ 11.30ಗಂಟೆವರೆಗೆ ಒಟ್ಟು 24 ಗಂಟೆವರೆಗೆ 160 ಕಿಮೀಯಿಂದ 175 ಕಿಲೋ ಮೀಟರ್ ವರೆಗೆ ವೇಗವಾಗಿ ಚಂಡಮಾರುತದ ಗಾಳಿ ಬೀಸಲಿದೆ. ಬಳಿಕ ಅಂದು ರಾತ್ರಿ 12.30 ಚಂಡಮಾರುತದ ಅಬ್ಬರ ಅರ್ಧದಷ್ಟು ತಗ್ಗಲಿದ್ದು, ಆಗ ಗಾಳಿಯ ವೇಗ ಪ್ರತಿ ಗಂಟೆಗೆ 85 ಕಿಲೋ ಮೀಟರ್‌ನಿಂದ 105ಕಿಮೀ ಇರಲಿದೆ. ಹೀಗೆ ನಂತರ ದಿನಗಳಲ್ಲಿ ಚಂಡಮಾರುತದ ಪ್ರಭಾವ ಕ್ರಮೇಣ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಕರ್ನಾಟಕದಲ್ಲಿ ನಿರಂತರ ಮಳೆ ಸಾಧ್ಯತೆ
ಈ ಚಂಡಮಾರುತವು ಬಂಗಾಳಕೊಲ್ಲಿಯಿಂದ ಹಿಡಿದು ಆಂಧ್ರಪ್ರದೇಶ, ಓಡಿಶಾ, ತಮಿಳುನಾಡು ಕರಾವಳಿಗೆ ಹಾಗೂ ಕರ್ನಾಟಕದ ಅರಬ್ಬಿ ಸಮುದ್ರ ತೀರದವರೆಗೆ ತನ್ನ ಚಲನೆ/ಪ್ರಭಾವ ವಿಸ್ತರಿಸಲಿದೆ. ಈ ವೇಳೆ ನಿರಂತರ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.
ಈ ವೇಳೆ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ಬಳ್ಳಾರ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಹಾಗೂ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆ ಮೇ 15ರವರೆಗೆ ವ್ಯಾಪಕ ಮಳೆ ಬೀಳುವ ನಿರೀಕ್ಷೆ ಇದೆ.
ಅಬ್ಬರಿಸಿ ಮರೆಯಾದ ಚಂಡಮಾರುತಗಳ ವಿವರ
ಸದ್ಯ ಮೋಚಾ ಚಂಡಮಾರುತ ಅಬ್ಬರಿಸುತ್ತದೆ ಎನ್ನಲಾಗಿದೆ. ಇದಕ್ಕೆ ಯೆಮನ್ ದೇಶ 'ಮೋಚಾ' ಎಂದು ಹೆಸರಿಟ್ಟಿದೆ. ಅದಕ್ಕೂ ಮೊದಲು ಮಾಂಡೌಸ್ ಚಂಡಮಾರುತ ಹಾವಳಿ ಇಟ್ಟಿತ್ತು. 'ಮಾಂಡೌಸ್' ಎಂದು UAE ಹೆಸರಿಟ್ಟಿತ್ತು, ಅದಕ್ಕು ಮುನ್ನ 'ಸಿತ್ರಾಂಗ್'ಗೆ ಥೈಲಾಂಡ್ ದೇಶ, 'ಅಸಾನಿ'ಗೆ ಶ್ರೀಲಂಕಾ, 'ಜವಾದ್'ಗೆ ಸೌದಿ ಅರೇಬಿಯಾ ದೇಶ, 'ಶಾಹೀನ್'ಗೆ ಕತಾರ್ ದೇಶ, 'ಗುಲಾಬ್'ಗೆ ಪಾಕಿಸ್ತಾನ್, 'ಯಾಸ್'ಗೆ ಒಮಾನ್ ದೇಶಗಳು ಹೆಸರಿಟ್ಟಿವೆ.











Click it and Unblock the Notifications