Rain Alert: ಡಾನಾ ಚಂಡಮಾರುತ; ಈ ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಇದೀಗ ಚಂಡಮಾರುತ ಅಪ್ಪಳಿಸುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನಿಡಿದೆ. ಅಕ್ಟೋಬರ್ 24ರ ಗುರುವಾರದ ವೇಳೆಗೆ ಒಡಿಶಾ ಮತ್ತು ಪಶ್ಚಿಮ ಬಂಗಳಾದ ಕರಾವಳಿ ಪ್ರದೇಶಗಳಿಗೆ ಡಾನಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 'ಡಾನಾ' ಎನ್ನುವುದು ಕತಾರ್ ಮೂಲದ ಹೆಸರಾಗಿದ್ದು, ಅರೇಬಿಕ್ ಭಾಷೆಯಲ್ಲಿ 'ಡಾನಾ' ಎಂದರೆ ಸುಂದರ ಮತ್ತು ಅಮೂಲ್ಯವಾದ ಮುತ್ತು ಎಂದರ್ಥ.
ಅಕ್ಟೋಬರ್ 24ರಂದು ಒಡಿಶಾದ ಪುರಿ, ಖುರ್ದಾ, ಗಂಜಾಂ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ 20 ಸೆಂಟಿ ಮೀಟರ್ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳ, ಹೌರಾ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಉತ್ತರ ಮತ್ತು ದಕ್ಷಿಣ 24 ಪರಗಣಗಳಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಚದುರಿದಂತೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಶುಕ್ರವಾರ ಒಂದೇ ದಿನ 20 ಸೆಂ. ಮೀ ಮಳೆಯಾಗಬಹುದು ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ. ಈ ಪ್ರಮಾಣ 30 ಸೆಂ.ಮೀ ವರೆಗೆ ಹೆಚ್ಚಾಗಬಹುದು ಇನ್ನೂ ಕೆಲವು ಸ್ಥಳಗಳಲ್ಲಿ 30 ಸೆಂ ಮೀಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದೀಗ ಚಂಡಮಾರುತದಿಂದ ಮತ್ತಷ್ಟು ಮಳೆ ಭೀತಿ ಎದುರಾಗಿದ್ದು ರೈತರಲ್ಲಿ ಬೆಳೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ.
ಎಲ್ಲೆಲ್ಲಿ ಮಳೆ ಎಚ್ಚರಿಕೆ?
ಇಂದು (ಸೋಮವಾರ) ಅಂಡಮಾನ ದ್ವೀಪಗಳಲ್ಲಿ ಚದುರಿದಂತೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಕ್ಟೋಬರ್ 23ರಂದು ಬುಧವಾರ ಒಡಿಶಾ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 24 ಮತ್ತು 25ರಂದು ರಾಜ್ಯದಲ್ಲಿ ಮಳೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಅ. 23ರಂದು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಅಕ್ಟೋಬರ್ 24 ಮತ್ತು 25 ರಂದು ಗಂಗಾನದಿ ಪಶ್ಚಿಮ ಬಂಗಾಳದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಅಕ್ಟೋಬರ್ 24 ಮತ್ತು 25 ರಂದು ಉತ್ತರ ಕರಾವಳಿ ಆಂಧ್ರಪ್ರದೇಶದದಲ್ಲಿ ಚದುರಿದಂತೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಸೂಚನೆ ನೀಡಿದೆ.












Click it and Unblock the Notifications