ಮುಂದಿನ 6 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ 'ಅಂಫಾನ್' ಚಂಡಮಾರುತ
ನವದೆಹಲಿ, ಮೇ 18: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಅಂಫಾನ್ ಎಂಬ ಹೆಸರಿನ ಚಂಡ ಮಾರುತ ಸೃಷ್ಟಿಯಾಗಿರುವುದರಿಂದ ಕರಾವಳಿ ಭಾಗದಲ್ಲಿ ಭೀತಿ ಎದುರಾಗಿದೆ.
ಒಡಿಶಾದ ಪಾರದೀಪ್‌ನಿಂದ ದಕ್ಷಿಣಕ್ಕೆ 870 ಕಿ.ಮೀ ದೂರದಲ್ಲಿ ಕಾಣಿಸಿಕೊಂಡಿದ್ದ ತೀವ್ರ ಸ್ವರೂಪದ ಚಂಡಮಾರುತವು ಮುಂದಿನ ಆರು ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ಮೇ 20ರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಚಂಡ ಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಸಮುದ್ರ ತೀರದಿಂದ ಭೂಪ್ರದೇಶವನ್ನು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಇಲಾಖೆಯ ವಾಡಿಕೆಯಂತೆ ಮಾರ್ಚ್‌ನಿಂದ ಮೇ ವರೆಗೆ ಸುರಿಯುವ ಪೂರ್ವ ಮುಂಗಾರು ಮಳೆ ಉತ್ತಮ ಆರಂಭ ಪಡೆದಿದೆ. ಮಾ.1ರಿಂದ ಮೇ 15ರವರೆಗೆ ಅಂಕಿ ಅಂಶದಂತೆ ದಕ್ಷಿಣಕನ್ನಡದಲ್ಲಿ 113 ಮಿ.ಮೀ ವಾಡಿಕೆ ಮಳೆಯಲ್ಲಿ 139 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ.23ರಷ್ಟು ಹೆಚ್ಚಾಗಿದೆ.

ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಮುನ್ಸೂಚನೆ
ಅಫಾನ್ ಚಂಡಮಾರುತ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ನಿರ್ವಹಿಸಲೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಪಡೆಯು ಒಡಿಶಾಗೆ 10 ಮತ್ತು ಪಶ್ಚಿಮ ಬಂಗಾಳಕ್ಕೆ 7 ತಂಡಗಳನ್ನು ರವಾನಿಸಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಎನ್‌ಡಿಆರ್‌ಎಫ್ ಅಮನ್ವಯ ಸಾಧಿಸಿದ್ದು, ರಕ್ಷಣಾ ಚಟುವಟಿಕೆಗಳನ್ನು ಯೋಜಿಸುತ್ತಿದೆ.

ಒಡಿಶಾದ 12 ಜಿಲ್ಲೆಗಳಿಗೆ ಹೈ ಅಲರ್ಟ್
ಒಡಿಶಾ ಸರ್ಕಾರ ಶುಕ್ರವಾರದಿಂದಲೇ 12 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಕೊರೊನಾ ತಡೆಯಲು ಲಾಕ್ ಜಾರಿಯಲ್ಲಿರುವ ಕಾರಣ ಜನರು ಮನೆಯಲ್ಲಿಯೇ ಇದ್ದಾರೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಪರಿಸ್ಥಿತಿ ಎದುರಿಸಲು ಸಿದ್ಧವಾಗಿ ಇರುವಂತೆ ನಿರ್ದೇಶನ ನೀಡಲಾಗಿದೆ. ಅಂಫಾನ್ ಚಂಡಮಾರುತದ ಪ್ರಭಾವದಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೋವಿಡ್ - 19 ಹೋರಾಟದಲ್ಲಿ ತೊಡಗಿರುವ ರಾಜ್ಯಗಳು ಹವಾಮಾನ ಇಲಾಖೆ ಮುನ್ಸೂಚನೆಯತ್ತಲೂ ಗಮನಹರಿಸಿವೆ.

ಮುಂಗಾರು ವಿಳಂಬ
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಈ ಬಾರಿಯ ಮುಂಗಾರು ವಿಳಂಬವಾಗಿ ಜೂನ್ 5ಕ್ಕೆ ಕೇರಳ ಕರಾವಳಿ ತೀರವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಒಂದೆರೆಡು ದಿನಗಳಲ್ಲಿ ರಾಜ್ಯ ಕರಾವಳಿ ತೀರ ಪ್ರವೇಶಿಸಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಗಾಲ ಆರಂಭವಾಗುವ ನಿರೀಕ್ಷೆ ಇದೆ. ಚಂಡಮಾರುತ ಪ್ರಭಾವ ಮೇ ತಿಂಗಳಾಂತ್ಯದವರೆಗೆಇದ್ದರೆ ಮುಂಗಾರು ವಿಳಂಬವಾಗಬಹುದು.

ಅರಬ್ಬಿ ಸಮುದ್ರದಲ್ಲಿ ಟ್ರಫ್ ನಿರ್ಮಾಣ
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಭೀತಿ ಉಂಟಾದರೆ ಇತ್ತ ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ(ಟ್ರಫ್) ನಿರ್ಮಾಣವಾಗಿದೆ. ಇದೇ ಕಾರಣದಿಂದ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಒಳನಾಡುಮ ಕರಾವಳಿ ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ.












Click it and Unblock the Notifications