ಸಿವೋಟರ್ ಸಮೀಕ್ಷೆ : ಜರ್ರನೆ ಏರಿದ ನರೇಂದ್ರ ಮೋದಿ ಜನಪ್ರಿಯತೆ ಸೂಚ್ಯಂಕ
Recommended Video

ನವದೆಹಲಿ, ಮಾರ್ಚ್ 20 : ಲೋಕಸಭೆ ಚುನಾವಣೆಯ ಕಾವು ಏರುತ್ತಿದ್ದ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮತ್ತೊಂದು ಚುನಾವಣಾ ಸಮೀಕ್ಷೆಯಲ್ಲಿ ದಿಗ್ವಿಜಯ ಸಾಧಿಸಿದ್ದಾರೆ.
ಸಿವೋಟರ್ ಸಂಸ್ಥೆಯೊಂದಿಗೆ ರಿಪಬ್ಲಿಕ್ ನಡೆಸಿದ ಜಂಟಿ ಚುನಾವಣಾ ಸಮೀಕ್ಷೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡುವೆ ಯಾರು ಅತ್ಯಂತ ಜನಪ್ರಿಯತೆ ಗಳಿಸಿದ್ದಾರೆ ಎಂಬುದರತ್ತ ಬೆಳಕು ಚೆಲ್ಲಿದೆ.
2019ರ ಫೆಬ್ರವರಿ 1ರಿಂದ ಮಾರ್ಚ್ 7ರೊಳಗೆ, ಬಾಲಕೋಟ್ ದಾಳಿಯ ನಂತರ ನಡೆಸಿದ ಸಮೀಕ್ಷೆ, ಇಬ್ಬರು ಉನ್ನತ ನಾಯಕರ ಜನಪ್ರಿಯತೆಯಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಅಚ್ಚರಿಯ ಅಂಕಿಸಂಖ್ಯೆಗಳನ್ನು ಹೊರಹಾಕಿದೆ.
ಬಾಲಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ನಂತರ ನರೇಂದ್ರ ಮೋದಿಯವರ ಜನಪ್ರಿಯತೆಯ ಸೂಚ್ಯಂಕ ಮೇಲೇರಿದೆ. ಆದರೆ, ಅದೇ ಸಮಯದಲ್ಲಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿ ಅವರ ಜನಪ್ರಿಯತೆಯ ಸೂಚ್ಯಂಕ ಜರ್ರನೆ ಇಳಿದಿದೆ.

ನರೇಂದ್ರ ಮೋದಿಯವರೇ ಪ್ರಧಾನಿಯಾಗಲಿ
ಮಾರ್ಚ್ 7ರ ಹೊತ್ತಿಗೆ 5079 ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಶೇ.64.3ರಷ್ಟು ಜನರು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲೇಬೇಕು ಎಂದು ಅಭಿಪ್ರಾಯ ಹೇಳಿದ್ದಾರೆ. ಆದರೆ, ಶೇ.26.6ರಷ್ಟು ಜನರು ಮಾತ್ರ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬಹುದು ಎಂದಿದ್ದಾರೆ. ಶೇ.9.1ರಷ್ಟು ಜನರು ಮಾತ್ರ ಬೇರೆ ಯಾರಾದರೂ ಪ್ರಧಾನಿಯಾಗಲಿ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ ಅಥವಾ ಯಾವುದೇ ಅಭಿಪ್ರಾಯ ಹೇಳಿಲ್ಲ. ಬಾಲಕೋಟ್ ಏರ್ ಸ್ಟ್ರೈಕ್ ನಡೆದಿದ್ದು ಫೆಬ್ರವರಿ 26ರಂದು.

ಮೋದಿ ನಂತರದ ಸ್ಥಾನದಲ್ಲಿ ರಾಹುಲ್
ಇದಕ್ಕೂ ಮೊದಲು, ಅಂದರೆ ಬಾಲಕೋಟ್ ಏರ್ ಸ್ಟ್ರೈಕ್ ದಾಳಿಗೂ ಮುಂಚೆ ನಡೆಸಿದ್ದ ಸಮೀಕ್ಷೆಯಲ್ಲಿ, ಸಂಗ್ರಹಿಸಲಾಗಿದ್ದ 4506 ಜನರ ಅಭಿಪ್ರಾಯಗಳಲ್ಲಿ, ಶೇ.53ರಷ್ಟು ಜನರು ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದಿದ್ದರು. ಅವರ ಹಿಂದಿರುವ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲಿ ಎಂದು ಆಗ ಶೇ.36.2ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇವರಿಬ್ಬರೂ ಆಗುವುದು ಬೇಡ ಎಂದು ಅಂದವರು ಶೇ.4.2ರಷ್ಟು ಜನ ಮಾತ್ರ. ಹಳೆಯ ಸಮೀಕ್ಷೆಗೂ ನಂತರ ನಡೆಸಿದ ಸಮೀಕ್ಷೆಗೂ ಭಾರೀ ವ್ಯತ್ಯಾಸ ಕಂಡುಬಂದಿದೆ.

ಏರ್ ಸ್ಟ್ರೈಕ್ ನಂತರ ಜರ್ರನೆ ಏರಿದ ಜನಪ್ರಿಯತೆ
ಮಧ್ಯಂತರ ಬಜೆಟ್ ಮಂಡಿಸಿದ ಸಮಯದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ನಡುವಿನ ಜನಪ್ರಿಯತೆಯ ಸೂಚ್ಯಂಕದ ವ್ಯತ್ಯಾಸ ಶೇ.16.8ರಷ್ಟು ಮಾತ್ರವಿತ್ತು. ಆದರೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಸಿದ ಭರ್ಜರಿ ಏರ್ ಸ್ಟ್ರೈಕ್ ನಂತರ ಮೋದಿಯವರ ಜನಪ್ರಿಯತೆಯ ಸೂಚ್ಯಂಕ ರಾಹುಲ್ ಗಾಂಧಿ ಅವರ ಜನಪ್ರಿಯತೆಗಿಂತ ಶೇ.37.7ರಷ್ಟು ಹೆಚ್ಚಾಗಿದೆ.

ಫಲಿತಾಂಶ ಮೇ 23ರಂದು ತಿಳಿದುಬರಲಿದೆ
ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆಯ ಕಾವು ಏರುತ್ತಿದೆ. ಇಬ್ಬರೂ ನಾಯಕರು 272 ಸಂಖ್ಯೆಯ ಬೆನ್ನತ್ತಿದ್ದಾರೆ. ಯಾವ ಪಕ್ಷಕ್ಕೆ ಈ ಸಂಖ್ಯೆ ಒಲಿಯಲಿದೆ ಎಂಬುದು ಏಳು ಹಂತಗಳ ಚುನಾವಣೆಯ ನಂತರ ಮೇ 23ರಂದು ತಿಳಿದುಬರಲಿದೆ. ಆದರೆ, ಈಗ ಹೊರಬಂದಿರುವ ಚುನಾವಣಾ ಸಮೀಕ್ಷೆ ಕಾಂಗ್ರೆಸ್ಸಿಗೆ ತುಸು ಗಲಿಬಿಲಿ ತಂದಿದ್ದರೂ ಅಚ್ಚರಿಯಿಲ್ಲ.












Click it and Unblock the Notifications