ದೇಶವನ್ನು ಟೀಕೆ ಮಾಡುವುದು ದೇಶ ದ್ರೋಹವಲ್ಲ: ಕಾನೂನು ಆಯೋಗ
ನವದೆಹಲಿ, ಆಗಸ್ಟ್ 31: ದೇಶದ ವಿಚಾರವಾಗಿ ಟೀಕೆ ಮಾಡುವುದು ಅಥವಾ ಒಂದು ನಿರ್ದಿಷ್ಟ ವಿಚಾರದ ಬಗ್ಗೆ ಟೀಕಿಸುವುದನ್ನು ದೇಶದ್ರೋಹ ಎಂದು ಪರಿಗಣಿಸುವಂತಿಲ್ಲ. ದೇಶದಲ್ಲಿ ರಚನಾತ್ಮಕ ವಿಮರ್ಶೆಗೆ ಅವಕಾಶ ಇಲ್ಲ ಅಂದರೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಕಾಲಕ್ಕೆ ಸ್ವಲ್ಪವಾದರೂ ವ್ಯತ್ಯಾಸವಿದೆ ಎಂದು ಕಾನೂನು ಆಯೋಗ ತಿಳಿಸಿದೆ.
ತಮ್ಮದೇ ಇತಿಹಾಸವನ್ನು ವಿಮರ್ಶಿಸುವುದು ಹಾಗೂ ಅಲ್ಲಿನ ತಪ್ಪುಗಳನ್ನು ಪರಾಮರ್ಶಿಸುವುದು ಜನರ ಹಕ್ಕು ಎಂದು ಹೇಳಲಾಗಿದೆ. ಕೇವಲ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸದ್ಯದ ಸರಕಾರದ ನೀತಿ ವಿರುದ್ಧದ ಧ್ವನಿಯಲ್ಲ. ಅಂಥ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬಾರದು ಎಂದು ತಿಳಿಸಲಾಗಿದೆ.
ಹಿಂಸೆಯ ಮೂಲಕ ಅಥವಾ ಕಾನೂನು ಬಾಹಿರ ಮಾರ್ಗವಾಗಿ ಸರಕಾರವನ್ನು ಕಿತ್ತೊಗೆಯಲು ನಡೆಸುವ ಹುನ್ನಾರವನ್ನು ಮಾತ್ರ ದೇಶದ್ರೋಹ ಎಂದು ಪರಿಗಣಿಸಬಹುದು ಎಂಬ ಉಲ್ಲೇಖ ಮಾಡಲಾಗಿದೆ. ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್ ಯು) ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರ ವಿರುದ್ಧ ಮಾಡಲಾದ ದೇಶದ್ರೋಹದ ಆರೋಪವನ್ನು ಉದಾಹರಣೆಯಾಗಿ ನೀಡಲಾಗಿದೆ.

ದೇಶದ ಸಮಗ್ರತೆಯನ್ನು ರಕ್ಷಿಸಿಕೊಳ್ಳುವುದು ಮುಖ್ಯ. ಆದರೆ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮಾಡುವುದು ಸರಿಯಲ್ಲ. ಯಾವುದೇ ನೀತಿಯ ವಿಷಯವಾಗಿ ಸಾರ್ವಜನಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಟೀಕೆ ಮಾಡುವುದು ಪ್ರಜಾತಂತ್ರ ವ್ಯವಸ್ಥೆಯ ಭಾಗ ಎನ್ನಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೇರುವ ಯಾವುದೇ ನಿಆಬಂಧನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಹೇಳಲಾಗಿದೆ. ಐಪಿಸಿ ಸೆಕ್ಷನ್ 124A ದೇಶದ್ರೋಹದ ಬಗ್ಗೆ ತಿಳಿಸುತ್ತದೆ. ಈ ಸೆಕ್ಷನ್ ನ ಪರಿಚಯಿಸಿದ್ದು ಯುನೈಟೆಡ್ ಕಿಂಗ್ ಡಮ್. ದೇಶದ್ರೋಹದ ಕಾನೂನು ಹತ್ತು ವರ್ಷದ ಹಿಂದೆ ತೆಗೆದುಹಾಕಲಾಗಿದೆ.
ಈ ವಿಚಾರವಾಗಿ ಕಾನೂನು ಆಯೋಗವು ಕನ್ಸಲ್ಟೇಷನ್ ಪೇಪರ್ ನ ಹಲವು ವಿಚಾರಗಳನ್ನು ಗಮನಿಸಿದೆ. ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಆಗದಂತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಆಗದ ರೀತಿಯಲ್ಲಿ ದೇಶದ್ರೋಹ ಆರೋಪದ ಕಾನೂನು ಪುನರ್ ವ್ಯಾಖ್ಯಾನ ಆಗಬೇಕು ಎನ್ನಲಾಗಿದೆ.











Click it and Unblock the Notifications