ವಿವಿಧ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣದಲ್ಲಿ ಭಾರೀ ಏರಿಕೆ!
ನವದೆಹಲಿ, ಏಪ್ರಿಲ್ 13; ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿವಿಧ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,36,89,453ಕ್ಕೆ ಏರಿಕೆಯಾಗಿದೆ.
ಕೋವಿಡ್ 2ನೇ ಅಲೆ ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಅದರಲ್ಲೂ ಏಪ್ರಿಲ್ 5ರಿಂದ 11ರ ತನಕ ಹೊಸ ಪ್ರಕರಣಗಳ ಸಂಖ್ಯೆ ಶೇ 70ರಷ್ಟು ಹೆಚ್ಚಾಗಿದೆ.
ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಉತ್ತರಾಖಂಡ್, ಅಸ್ಸಾಂನಲ್ಲಿ ಹೆಚ್ಚಿನ ಹೊಸ ಪ್ರಕರಣ ದಾಖಲಾಗುತ್ತಿದೆ. ಮಹಾರಾಷ್ಟ್ರ, ಛತ್ತೀಸ್‌ಗಢ್, ಪಂಜಾಬ್, ಕರ್ನಾಟಕದಲ್ಲಿ ಒಂದು ವಾರದಲ್ಲಿ ಅವಧಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂಬ ಅಂಕಿ-ಸಂಖ್ಯೆಗಳು ಹೇಳುತ್ತಿವೆ.
ಅಸ್ಸಾಂನಲ್ಲಿ ಕೆಲವು ದಿನಗಳ ಹಿಂದೆ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಈಗ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಏ. 5ರಿಂದ 11ರ ಅವಧಿಯಲ್ಲಿ 1,689 ಹೊಸ ಪ್ರಕರಣ ಪತ್ತೆಯಾಗಿದ್ದು, ಅದರ ಹಿಂದಿನ ವಾರ 407 ಪ್ರಕರಣ ದಾಖಲಾಗಿತ್ತು.

ಬಿಹಾರದಲ್ಲಿ ಅಧಿಕ ಕೇಸ್
ಬಿಹಾರ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಶೇ 334ರಷ್ಟು ಹೆಚ್ಚಾಗಿದೆ. ಏಪ್ರಿಲ್ 5 ರಿಂದ 11ರ ತನಕ ರಾಜ್ಯದಲ್ಲಿ 14,852 ಪ್ರಕರಣ ದಾಖಲಾಗಿದೆ. ಹಿಂದಿನ ವಾರ 3,422 ಪ್ರಕರಣಗಳು ದಾಖಲಾಗಿದ್ದವು.

ಉತ್ತರ ಪ್ರದೇಶ ರಾಜ್ಯ
ಉತ್ತರ ಪ್ರದೇಶ ರಾಜ್ಯದಲ್ಲಿ ಶೇ 281ರಷ್ಟು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಏಪ್ರಿಲ್ 5 ರಿಂದ 11ರ ತನಕ 62,005 ಹೊಸ ಪ್ರಕರಣ ದಾಖಲಾಗಿದೆ. ಅದಕ್ಕೂ ಹಿಂದಿನ ವಾರ 16,269 ಪ್ರಕರಣಗಳು ಪತ್ತೆಯಾಗಿದ್ದವು.

ಹಲವು ರಾಜ್ಯಗಳಲ್ಲಿ ಏರಿಕೆ
ಹಿಂದಿ ಮಾತನಾಡುವ ರಾಜ್ಯಗಳಲ್ಲಿಯೂ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ರಾಜಸ್ಥಾನದಲ್ಲಿ ಶೇ 183, ಜಾರ್ಖಂಡ್‌ನಲ್ಲಿ ಶೇ 182, ಕುಂಭಮೇಳ ನಡೆಯುತ್ತಿರುವ ಉತ್ತರಾಖಂಡ್‌ನಲ್ಲಿ ಶೇ 175ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.

ಮಹಾರಾಷ್ಟ್ರದಲ್ಲಿ ಅಧಿಕ ಕೇಸು
ಏ. 5 ರಿಂದ 11ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಅಧಿಕ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ 3,96,648 ಪ್ರಕರಣ ದಾಖಲಾಗಿದೆ. ಛತ್ತೀಸ್‌ಗಢ್‌ನಲ್ಲಿ 74,251, ಉತ್ತರ ಪ್ರದೇಶದಲ್ಲಿ 62,005, ಕರ್ನಾಟಕದಲ್ಲಿ 50,135 ಮತ್ತು ದೆಹಲಿಯಲ್ಲಿ 48,783 ಪ್ರಕರಣ ದಾಖಲಾಗಿದೆ.












Click it and Unblock the Notifications