ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ: ಆರ್‌ಟಿ-ಪಿಸಿಆರ್ ಪರೀಕ್ಷೆ, ಕ್ವಾರಂಟೈನ್ ಇಲ್ಲ
ನವದೆಹಲಿ, ಫೆಬ್ರವರಿ 10: ಓಮಿಕ್ರಾನ್ ಕೋವಿಡ್ ರೂಪಾಂತರವು ಭಾರತದಲ್ಲಿ ಕಾಣಿಸಿಕೊಂಡಾಗ ಪರಿಚಯಿಸಲಾದ ಅಂತರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯನ್ನು ಸರ್ಕಾರವು ಪರಿಷ್ಕರಣೆ ಮಾಡಿದೆ. ಸರ್ಕಾರವು ಓಮಿಕ್ರಾನ್ ಸಂದರ್ಭದಲ್ಲಿ 'ಅಪಾಯದಲ್ಲಿರುವ' ದೇಶಗಳ ವರ್ಗವನ್ನು ಮಾಡಿತ್ತು. ಆ ಪಟ್ಟಿಯನ್ನು ಈಗ ತೆಗೆದು ಹಾಕಲಾಗಿದೆ.
ಹಾಗೆಯೇ ಏಳು ದಿನಗಳ ಹೋಮ್ ಕ್ವಾರಂಟೈನ್ ಬದಲಾಗಿ ರೋಗಲಕ್ಷಣಗಳು ಹೊಂದಿರುವವರು 14 ದಿನಗಳ ಕಾಲ ಸ್ವಯಂ ನಿರ್ಬಂಧಕ್ಕೆ ಒಳಗಾಗಬೇಕಾಗಿದೆ. ಹೊಸ ಮಾರ್ಗಸೂಚಿಗಳು ಸೋಮವಾರ, ಫೆಬ್ರವರಿ 14 ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಚಿವಾಲಯವು "ನಿರಂತರವಾಗಿ ಬದಲಾಗುತ್ತಿರುವ" ಕೋವಿಡ್ ವೈರಸ್ ಬಗ್ಗೆ ಜನರು ಜಾಗರೂಕರಾಗಿರುವ ಅಗತ್ಯವನ್ನು ಒತ್ತಿಹೇಳಿದೆ. ಆದರೆ "ಆರ್ಥಿಕ ಚಟುವಟಿಕೆಗಳನ್ನು ಅಡೆತಡೆಯಿಲ್ಲದೆ ನಡೆಸಬಹುದು ಎಂದು ಕೂಡಾ ಸರ್ಕಾರವು ಹೇಳಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ವಿದೇಶಿ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ಇತಿಹಾಸವನ್ನು ಒಳಗೊಂಡಂತೆ ಆನ್‌ಲೈನ್‌ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. (ಏರ್ ಸುವಿಧಾ ವೆಬ್ ಪೋರ್ಟಲ್‌ನಲ್ಲಿ ಲಭ್ಯವಿದೆ).

ಮಾರ್ಗಸೂಚಿಯಲ್ಲಿ ಬೇರೆ ಏನೇನಿದೆ?
ಪ್ರಯಾಣದ ದಿನಾಂಕದ 72 ಗಂಟೆಗಳ ಒಳಗೆ ನಡೆಸಿದ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಪ್ರಯಾಣಿಕರು ಅಪ್‌ಲೋಡ್ ಮಾಡಬೇಕು. ಇದರ ಬದಲಾಗಿ ರಡೂ ಲಸಿಕೆ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ದೃಢೀಕರಿಸುವ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬಹುದು. ಆದರೆ ಈ ಆಯ್ಕೆ 72 ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುತ್ತದೆ.
ಈ ದೇಶಗಳಲ್ಲಿ ಕೆನಡಾ, ಹಾಂಗ್ ಕಾಂಗ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿವೆ. "ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಪ್ರಯಾಣಿಕರಿಗೆ ಮಾತ್ರ ವಿಮಾನಯಾನ ಸಂಸ್ಥೆಗಳು ಬೋರ್ಡಿಂಗ್‌ಗೆ ಅವಕಾಶ ನೀಡುತ್ತದೆ. ಹಾಗೆಯೇ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ಅಥವಾ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿದರೆ ಮಾತ್ರ ಬೋರ್ಡಿಂಗ್‌ಗೆ ಅವಕಾಶ ನೀಡುತ್ತದೆ," ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಲಕ್ಷಣರಹಿತ ಪ್ರಯಾಣಿಕರನ್ನು ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್‌ಗಳ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೂಡಾ ಮಾರ್ಗಸೂಚಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಆಗಮನದ ನಂತರ, ಥರ್ಮಲ್ ಸ್ಕ್ರೀನಿಂಗ್ ಜೊತೆಗೆ, ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಲು ಹೇಳಲಾಗಿದೆ. ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯು ಆಯ್ಕೆ ಮಾಡುತ್ತದೆ. ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ತಕ್ಷಣವೇ ನಿರ್ಬಂಧಿಸಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ. ಕೋವಿಡ್ ಪಾಸಿಟಿವ್ ಬಂದರೆ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತದೆ. ಎಲ್ಲಾ ಇತರ ಪ್ರಯಾಣಿಕರು ಯಾವುದೇ ಕೋವಿಡ್ ರೋಗಲಕ್ಷಣಗಳು ಇದ್ದರೆ 14 ದಿನಗಳವರೆಗೆ ಸ್ವಯಂ ನಿರ್ಬಂಧಕ್ಕೆ ಒಳಗಾಗಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 24 ಗಂಟೆಗಳಲ್ಲಿ 67,084 ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಿನ್ನೆ ವರದಿಯಾದ 71,000 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಭಾರತದ ಸಕ್ರಿಯ ಪ್ರಕರಣ 7.9 ಆಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications