ಐದು ರಾಜ್ಯಗಳಲ್ಲಿ 5,000 ಡೋಸ್ ಕೋವಿಡ್ ಲಸಿಕೆ ವ್ಯರ್ಥ
ನವದೆಹಲಿ, ಜನವರಿ 29: ದೇಶದಾದ್ಯಂತ ಜನವರಿ 16ರಿಂದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಲಸಿಕೆ ಅಭಿಯಾನ ಆರಂಭವಾದ 13 ದಿನಗಳಲ್ಲಿ ಐದು ರಾಜ್ಯಗಳಲ್ಲಿಯೇ ಸುಮಾರು 5,000 ಡೋಸ್‌ಗಳಷ್ಟು ಲಸಿಕೆಯನ್ನು ವ್ಯರ್ಥಮಾಡಲಾಗಿದೆ. ಕೋವಿಡ್ ಲಸಿಕೆಯ ಉತ್ಪಾದನೆ, ಪೂರೈಕೆ ಮತ್ತು ವಿತರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಅದಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಲಸಿಕೆ ಪಡೆದುಕೊಳ್ಳಲು ಜನರು ಮುಂದಾಗದೆ ಇರುವುದು ಅಪಾರ ಪ್ರಮಾಣದ ಡೋಸ್‌ಗಳು ವ್ಯರ್ಥವಾಗಲು ಕಾರಣವಾಗಿದೆ.
ಕೋವಿಡ್ ಲಸಿಕೆಗಳ ಬಾಟಲಿಗಳನ್ನು ತೆರೆದ ನಾಲ್ಕು ಗಂಟೆಯೊಳಗೆ ಅದರಲ್ಲಿನ ಲಸಿಕೆಯನ್ನು ಬಳಸಬೇಕಾಗುತ್ತದೆ. ಇಲ್ಲವಾದರೆ ಅವು ಬಳಕೆಗೆ ಯೋಗ್ಯವಾಗುವುದಿಲ್ಲ. ಪ್ರಸ್ತುತ ಸರ್ಕಾರವು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರನ್ನು ಸರ್ಕಾರ ಗುರುತಿಸಿ ಲಸಿಕೆ ನೀಡುತ್ತಿದೆ. ಆದರೆ ಅವರು ಕೂಡ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಹೀಗಾಗಿ ಅನೇಕ ಕಡೆ ಬಾಟಲಿಗಳನ್ನು ತೆರೆದ ಬಳಿಕ ಅವು ಪೂರ್ತಿ ಬಳಕೆಯಾಗದೆ ಹಾಳಾಗುತ್ತಿವೆ.
ಲಸಿಕೆಗಳು ವ್ಯರ್ಥವಾಗುವುದನ್ನು ತಡೆಯಲು ಅಂದು ನಿಗದಿಯಾಗಿರದ ಜನರನ್ನು ಲಸಿಕೆ ಪಡೆದುಕೊಳ್ಳುವಂತೆ ಕರೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಜನವರಿ 16ರಿಂದ ಇಲ್ಲಿಯವರೆಗೂ ಆಯ್ಕೆಯಾದ ಪ್ರತಿ 100 ಮಂದಿಯಲ್ಲಿ 55 ಜನರು ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ.

ಗುರುವಾರ 5,00,000ಕ್ಕೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಇಲ್ಲಿ ಪ್ರತಿ 100 ಮಂದಿಗೆ ಕೇವಲ 49 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಪಂಜಾಬ್‌ನಲ್ಲಿ ಕೇವಲ 1,200 ಡೋಸ್ ನೀಡಲಾಗಿದೆ.
ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗೆ ಹೋಲಿಸಿದರೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ಬಾಟಲಿ ದೊಡ್ಡದಿರುವುದರಿಂದ ಅದರ ವ್ಯರ್ಥ ಪ್ರಮಾಣ ಅಧಿಕವಾಗಿದೆ. ತ್ರಿಪುರಾದಲ್ಲಿ ಅತ್ಯಧಿಕ ಎಂದರೆ, ಶೇ 11ರಷ್ಟು ಡೋಸ್‌ಗಳು ವ್ಯರ್ಥವಾಗಿವೆ. ಬಿಹಾರದಲ್ಲಿ ಶೇ 10ರಷ್ಟು ಲಸಿಕೆಗಳು ನಿರುಪಯುಕ್ತವಾಗಿವೆ.
ಉತ್ತರಾಖಂಡದಲ್ಲಿ ಶೇ 4.1ರಷ್ಟು ಅಂದರೆ ಸುಮಾರು 14,500 ಡೋಸ್ ಲಸಿಕೆ ವ್ಯರ್ಥವಾಗಿವೆ. ಒಡಿಶಾದಲ್ಲಿ ಶೇ 0.58ರಷ್ಟು, 1,125 ಡೋಸ್ ವ್ಯರ್ಥವಾಗಿವೆ.












Click it and Unblock the Notifications