19 ವಿಪಕ್ಷ ನಾಯಕರ ಸಭೆ ಕರೆದ ದೀದಿ; ಕಾಂಗ್ರೆಸ್ ತಳಮಳ

ನವದೆಹಲಿ, ಜೂನ್ 12: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 19 ಬಿಜೆಪಿಯೇತರ ಪಕ್ಷಗಳ ನಾಯಕರ ಸಭೆ ಕರೆದಿದ್ಧಾರೆ. ರಾಷ್ಟ್ರಪತಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಚರ್ಚಿಸಲು ಜೂನ್ 15ರಂದು ಸಭೆ ಕರೆಯಲಾಗಿದೆ. ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರ ನಡೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಇರಿಸುಮುರುಸು ತಂದಿದೆ ಎನ್ನಲಾಗಿದೆ.

ಬಿಜೆಪಿ ಮತ್ತು ಎನ್‌ಡಿಎಯೇತರ ಪಕ್ಷಗಳ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೆ ಎಂಬುದೇ ಈಗ ವಿಪಕ್ಷಗಳನ್ನು ಕಾಡುತ್ತಿರುವ ಯಕ್ಷಪ್ರಶ್ನೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಎಂದು ಸಹಜವಾಗಿ ಉತ್ತರ ಹೇಳುವ ಕಾಲ ಮುಗಿಯಿತು. ಬೆರಳೆಣಿಕೆಯ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಮುಂಚೂಣಿಯಲ್ಲಿರುವುದು ಕಡಿಮೆಯೇ. ಈ ಹಿನ್ನೆಲೆಯಲ್ಲಿ ಬಿಜೆಪಿಯೇತರ ಪಕ್ಷಗಳಿಗೆ ರಾಷ್ಟ್ರಮಟ್ಟದಲ್ಲಿ ನಾಯಕತ್ವದ ಕೊರತೆ ಇದೆ. ಈ ಖಾಲಿ ಜಾಗ ತುಂಬಲು ಕಾಂಗ್ರೆಸ್ ಜೊತೆ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರು ಪೈಪೋಟಿಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಕರೆದಿರುವ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.

ದೀದಿ ನಡೆಯಿಂದ ಕಾಂಗ್ರೆಸ್ ಅಸಮಾಧಾನಗೊಳ್ಳಲು ಕಾರಣ ಇಲ್ಲದಿಲ್ಲ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ಸಂಪರ್ಕಿಸಲು ಕಾಂಗ್ರೆಸ್ ಈಗಾಗಲೇ ಹೆಜ್ಜೆ ಇಡಲು ಆರಂಭಿಸಿತ್ತು. ಟಿಎಂಸಿ ಜೊತೆಗೂ ಕಾಂಗ್ರೆಸ್ ಮಾತನಾಡಲು ಮುಂದಾಗಿತ್ತು. ಇಂಥ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಪ್ರತ್ಯೇಕವಾಗಿ ಹೆಜ್ಜೆ ಇಡುವ ಅಗತ್ಯ ಏನಿತ್ತು ಎಂಬುದು ಕಾಂಗ್ರೆಸ್ ನಾಯಕರಿಗೆ ಬೇಸರ ಮೂಡಿಸಿರುವುದು ತಿಳಿದುಬಂದಿದೆ. ಕಾಂಗ್ರೆಸ್ ಮಾತ್ರವಲ್ಲ ಎಡಪಕ್ಷಗಳೂ ಕೂಡ ದೀದಿ ನಡೆಯಿಂದ ಅಸಮಾಧಾನಗೊಂಡಿವೆಯಂತೆ. ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಈ ವಿಚಾರದ ಬಗ್ಗೆ ಟಿಎಂಸಿಗೆ ಸಂದೇಶ ಕೂಡ ರವಾನೆ ಮಾಡಿದ್ದಾರೆನ್ನಲಾಗಿದೆ.

Congress Unhappy With Mamata Banerjee Calling 19 Opposition Leaders Meet

ಬಿಜೆಪಿಯೇತರ ಪಕ್ಷಗಳ ಜೊತೆ ಸಂವಹನ ನಡೆಸಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಣೆ ಹೊರಿಸಲಾಗಿತ್ತು. ಸೋನಿಯಾ ಗಾಂಧಿಗೆ ಕೋವಿಡ್‌ನಿಂದ ಅನಾರೋಗ್ಯ ಉದ್ಭವಿಸಿರುವುದರಿಂದ ಖರ್ಗೆಗೆ ಜವಾಬ್ದಾರಿ ನೀಡಲಾಗಿದೆ. ಈ ವಿಚಾರವನ್ನು ಇತರ ಪಕ್ಷಗಳಿಗೆ ಸೋನಿಯಾ ಗಾಂಧಿ ತಿಳಿಸಿಯೂ ಇದ್ದಾರೆ. ಟಿಎಂಸಿ, ಎನ್‌ಸಿಪಿ ಮೊದಲಾದ ಪಕ್ಷಗಳನ್ನು ಸಂಪರ್ಕಸಿ ಅಭಿಪ್ರಾಯ ಹಂಚಿಕೊಳ್ಳಲಾಗಿದೆ. ಇಂಥ ಹೊತ್ತಲ್ಲಿ ಮಮತಾ ಬ್ಯಾನರ್ಜಿ ಪ್ರತ್ಯೇಕ ನಡೆ ಇಟ್ಟಿರುವುದರ ಮರ್ಮ ಏನೆಂದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಯಾರಿಗೆಲ್ಲಾ ಹೋಗಿದೆ ದೀದಿ ಅಹ್ವಾನ?
ಮಮತಾ ಬ್ಯಾನರ್ಜಿ 19 ವಿವಿಧ ಪಕ್ಷಗಳ ನಾಯಕರಿಗೆ ಪತ್ರ ಬರೆದು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ವಿಪಕ್ಷಗಳು ಒಗ್ಗಟ್ಟಿನಿಂದ ಹೆಜ್ಜೆ ಇಡುವ ಅಗತ್ಯತೆ ಬಗ್ಗೆ ತಿಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಪತ್ರ ಬರೆದಿದ್ಧಾರೆ. ಪಂಜಾಬ್, ಒಡಿಶಾ, ಕೇರಳ, ತೆಲಂಗಾಣ, ಜಾರ್ಖಂಡ್, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳೂ ಮಮತಾ ಅವರಿಂದ ಆಹ್ವಾನ ಪಡೆದಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಆಹ್ವಾನ ಬಂದಿದೆ.

ಇತರ ಪ್ರಮುಖ ಪಕ್ಷಗಳ ಮುಖಂಡರಾದ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಸಿಪಿಐ ಮುಖಂಡ ಡಿ ರಾಜಾ, ಎನ್‌ಸಿಪಿಯ ಶರದ್ ಪವಾರ್, ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್, ಆರ್‌ಎಲ್‌ಡಿಯ ಜಯಂತ್ ಚೌಧರಿ, ನ್ಯಾಷನಲ್ ಕಾನ್ಫೆರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬ ಮುಫ್ತಿ, ಶಿರೋಮಣಿ ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನ ಪವನ್ ಚಾಮ್ಲಿಂಗ್, ಮುಸ್ಲಿಂ ಲೀಗ್ (IUML) ಕಾದರ್ ಮೊಹಿದೀನ್ ಅವರಿಗೂ ದೀದಿಯ ಕರೆ ಹೋಗಿದೆ.

Congress Unhappy With Mamata Banerjee Calling 19 Opposition Leaders Meet

ಬಿಜೆಡಿ, ಅಕಾಲಿಗಳಿಗೂ ಕರೆ:
ಇಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ಗೂ ಸಭೆಗೆ ಆಹ್ವಾನ ಹೋಗಿರುವುದು ಕುತೂಹಲ ಮೂಡಿಸಿದೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷ ಬಿಜೆಪಿ ಜೊತೆ ತಾತ್ವಿಕವಾಗಿ ವಿರೋಧಿಯಾದರೂ ಅನೇಕ ವಿಚಾರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡುತ್ತಾರೆ. ಈ ಹೊತ್ತಿನಲ್ಲಿ ಬಿಜೆಪಿಯೇತರ ಗುಂಪಿನಲ್ಲಿ ಬಿಜೆಡಿಯನ್ನು ಒಳಗೊಳ್ಳಲು ಮುಂದಾಗುವ ಮೂಲಕ ಮಮತಾ ಬ್ಯಾನರ್ಜಿ ಜಾಣ ನಡೆ ಇಡುವ ಪ್ರಯತ್ನ ಮಾಡಿದಂತಿದೆ. ರೈತರ ಪ್ರತಿಭಟನೆಯವರೆಗೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಶಿರೋಮಣಿ ಅಕಾಲಿ ದಳವನ್ನೂ ಬಿಜೆಪಿಯೇತರ ಬಣದ ವ್ಯಾಪ್ತಿಗೆ ತರುವ ಪ್ರಯತ್ನ ಕೂಡ ಗಮನಾರ್ಹವಿದ್ದಂತೆ ತೋರುತ್ತದೆ.

ಆದರೆ, ಕಾಂಗ್ರೆಸ್ ಪಕ್ಷದ ಮನಸ್ಸು ನೋಯಿಸಿ ವಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವ ಮಮತಾ ಬ್ಯಾನರ್ಜಿ ಕೆಲಸ ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಗೊತ್ತಿಲ್ಲ. ಬಿಜೆಪಿ ಗೆಲ್ಲಬಾರದು ಎಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ವಿಪಕ್ಷಗಳ ನಾಯಕತ್ವದಿಂದ ಹಿಂದಕ್ಕೆ ಸರಿದರೂ ಅಚ್ಚರಿ ಇಲ್ಲ. ಮಮತಾ ಬ್ಯಾನರ್ಜಿ ಎಷ್ಟು ಸಮಚಿತ್ತತೆಯಿಂದ ವಿಪಕ್ಷಗಳನ್ನು ಒಲಿಸಿ ಒಂದೆಡೆ ಸೇರಿಸುತ್ತಾರೆ ಎಂಬುದೂ ಮುಖ್ಯವಾಗುತ್ತದೆ.

ಜುಲೈನಲ್ಲಿ ಚುನಾವಣೆ:
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜೂನ್ 29ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಎನ್‌ಡಿಎಯಿಂದ ನಿಲ್ಲಿಸಲಾಗುವ ಒಬ್ಬ ಅಭ್ಯರ್ಥಿ ಮತ್ತು ವಿಪಕ್ಷಗಳಿಂದ ಒಮ್ಮತವಾಗಿ ನಿಲ್ಲಿಸಲಾಗುವ ಒಬ್ಬ ಅಭ್ಯರ್ಥಿ ಇವರಿಬ್ಬರ ಮಧ್ಯೆ ಬಹುತೇಕ ನೇರ ಪೈಪೋಟಿ ಇರುತ್ತದೆ.

ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್‌ಗಳ ಎಲ್ಲ ಸದಸ್ಯರನ್ನೂ ಒಳಗೊಂಡಂತೆ ರಾಷ್ಟ್ರಪತಿ ಚುನಾವಣೆಯಲ್ಲಿ 10.79 ಲಕ್ಷ ಮತದಾರರಿರುತ್ತಾರೆ. ಎನ್‌ಡಿಎ ಬಳಿ 5.26 ಲಕ್ಷ ಮತಗಳಿವೆ. ಸ್ಪಷ್ಟ ಬಹುಮತಕ್ಕೆ 13 ಸಾವಿರ ಮತಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಡಿ ಮತ್ತು ವೈಎಸ್‌ಆರ್‌ಸಿಪಿ ಪಕ್ಷಗಳ ಬೆಂಬಲ ಬಿಜೆಪಿಗೆ ಅತ್ಯಗತ್ಯವಾಗಿದೆ. ಇಲ್ಲಿ ಬಿಜೆಡಿಯನ್ನು ಮಮತಾ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರೆ ಕುತೂಹಲಕಾರಿ ಸ್ಥಿತಿಗೆ ಎಡೆ ಮಾಡಿಕೊಡಬಹುದು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+