5 ವರ್ಷದಿಂದ ಬಿಡಿಗಾಸು ಸಂಬಳ ಹೆಚ್ಚಿಸದ ಕಂಪನಿ, ಕೆಲಸ ಬಿಡುತ್ತೇನೆ ಎಂದಾಗ 95% ಹೈಕ್; ಉದ್ಯೋಗಿಯ ನಿರ್ಧಾರವೇನು ನೋಡಿ? ?

ವರ್ಷಗಳ ಕಾಲ ಉದ್ಯೋಗಿಗಳು ತಮ್ಮ ನಿಷ್ಠೆ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಲಾಗುತ್ತದೆ ಎಂಬ ಭರವಸೆಯೊಂದಿಗೆ ಮೌನವಾಗಿ ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಒಂದಿಷ್ಟು ಜನರ ಕೆಲಸಕ್ಕೆ ತಕ್ಕ ಪ್ರತಿಫಲ ಕಂಪೆನಿಗಳಿಂದ ದೊರೆತರೆ, ಇನ್ನು ಕೆಲವರಿಗೆ ಅವರು ರೆಸಿಗ್‌ನೇಶನ್‌ ಲೆಟರ್‌ ಸಲ್ಲಿಸಿದಾಗ ಮಾತ್ರ ಕಂಪನಿಗಳಿಗೆ ಅವರ ನಿಜವಾದ ಬೆಲೆ ಅರ್ಥವಾಗುತ್ತದೆ.

ಸತತ ಐದು ವರ್ಷಗಳ ಕಾಲ ವೇತನ ಹೆಚ್ಚಳ ನಿರಾಕರಿಸಿದ ಕಂಪನಿಯೊಂದು, ಉದ್ಯೋಗಿ ಕೆಲಸ ಬಿಡಲು ನಿರ್ಧರಿಸಿದ ಕ್ಷಣದಲ್ಲಿ ಬೃಹತ್ ವೇತನ ಹೆಚ್ಚಳದ ಆಫರ್ ನೀಡಿದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕಥೆ ಇದೀಗ ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳನ್ನು ಹೇಗೆ ಉಳಿಸಿಕೊಳ್ಳಬೇಕು, ಕೆಲಸದ ಮೇಲಿನ ನಿಷ್ಠೆ ಮತ್ತು ಒಬ್ಬ ವ್ಯಕ್ತಿ ಕೆಲಸ ಬಿಡುವಾಗ ಮಾತ್ರ ಅವನಿಗೆ ಏಕೆ ಬೆಲೆ ಸಿಗುತ್ತದೆ ಎಂಬ ಬಗ್ಗೆ ಈ ಕಥೆ ಈಗ ದೊಡ್ಡ ಚರ್ಚೆ ಹುಟ್ಟುಹಾಕಿದೆ.

Company Offers

ಅಂಕಿತ್ ಪಾಂಡೆ ಎಂಬುವವರು ಎಕ್ಸ್ ಖಾತೆಯಲ್ಲಿ ತಮ್ಮ ಅಣ್ಣನ ಕಥೆಯನ್ನು ಹಂಚಿಕೊಂಡಿದ್ದಾರೆ. ಪಾಂಡೆ ಅವರ ಅಣ್ಣ ಸತತ ಐದು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಆದರೆ ಈ ಸುದೀರ್ಘ ಅವಧಿಯಲ್ಲಿ ಅವರಿಗೆ ಯಾವುದೇ ವೇತನ ಹೆಚ್ಚಳವಾಗಿರಲಿಲ್ಲ. ಪಾಂಡೆ ಹೇಳುವ ಪ್ರಕಾರ, ಅವರ ಅಣ್ಣನಿಗೆ 2021, 2022, 2023, 2024 ಮತ್ತು 2025 ರಲ್ಲೂ ಯಾವುದೇ ಇಂಕ್ರಿಮೆಂಟ್ ಸಿಕ್ಕಿರಲಿಲ್ಲ. ಪ್ರತಿ ವರ್ಷವೂ ಕಂಪನಿಯು ಬಜೆಟ್ ಕೊರತೆಯ ನೆಪವೊಡ್ಡಿ, ಸಂಬಳ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಬಂದಿತ್ತು.

ಯಾವುದೇ ಬೆಳವಣಿಗೆಯಿಲ್ಲದಿದ್ದರೂ, ಪಾಂಡೆ ಅವರ ಅಣ್ಣ ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ತಮ್ಮ ಕೆಲಸ ಮುಂದುವರಿಸಿದ್ದರು. ಅಂತಿಮವಾಗಿ 2026 ರಲ್ಲಿ, ಬೇರೊಂದು ಕಂಪನಿಯಲ್ಲಿ ತಮ್ಮ ಪ್ರಸ್ತುತ ವೇತನಕ್ಕಿಂತ ಶೇಕಡಾ 75 ರಷ್ಟು ಹೆಚ್ಚಿನ ಸಂಬಳದೊಂದಿಗೆ ಹೊಸ ಉದ್ಯೋಗದ ಆಫರ್ ಪಡೆದುಕೊಂಡರು. ಅವರು ರಾಜೀನಾಮೆ ನೀಡಿದ ಕೂಡಲೇ ಅವರ ಹಿಂದಿನ ಕಂಪನಿಯ ನಿರ್ಧಾರ ದಿಢೀರನೆ ಬದಲಾಯಿತು.

ಕಂಪನಿಯ ಪ್ರತಿಕ್ರಿಯೆ

ಪಾಂಡೆ ಅವರ ಪ್ರಕಾರ, ಅಣ್ಣ ರಾಜೀನಾಮೆ ಸಲ್ಲಿಸಿದ ತಕ್ಷಣ ಅವರ ಬಾಸ್ ಸಂಪರ್ಕಿಸಿ, "ನೀವು ಕಂಪನಿಯ ಅತ್ಯುತ್ತಮ ಉದ್ಯೋಗಿಗಳಲ್ಲಿ ಒಬ್ಬರು, ಇಷ್ಟು ಒಳ್ಳೆಯ ಕೆಲಸ ಮಾಡುತ್ತಿರುವಾಗ ಏಕೆ ಕಂಪನಿ ಬಿಡುತ್ತಿದ್ದೀರಿ?" ಎಂದು ಪ್ರಶ್ನಿಸಿದರು. ವರ್ಷಗಳ ಕಾಲ ಉದ್ಯೋಗಿಯ ಕಡೆಯಿಂದ ಕಂಪೆನಿಗೆ ನೀಡುತ್ತಿರುವ ಕೊಡುಗೆ ದಿನದಿಂದ ದಿನಕ್ಕೆ ಏರುತ್ತಲೇ ಹೋದರೂ, ಕಂಪನಿಗಳಿಗೆ ಮಾತ್ರ ರೆಸಿಗ್‌ನೇಶನ್‌ ಇಮೇಲ್ ಇನ್‌ಬಾಕ್ಸ್‌ಗೆ ಬಂದ ನಂತರವಷ್ಟೇ ಉದ್ಯೋಗಿಯ ಮೌಲ್ಯದ ಅರಿವಾಗುತ್ತದೆ ಎಂಬುದು ನಿಜಕ್ಕೂ ವಿಪರ್ಯಾಸವೇ ಸರಿ.

ಇದಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ, ಪದೇ ಪದೇ "ಬಜೆಟ್ ಸಮಸ್ಯೆ" ಎಂದು ಹೇಳುತ್ತಿದ್ದ ಅದೇ ಕಂಪನಿ ಕೇವಲ 48 ಗಂಟೆಗಳ ಒಳಗೆ ಬರೋಬ್ಬರಿ ಶೇಕಡಾ 95 ರಷ್ಟು ವೇತನ ಹೆಚ್ಚಳದ ಕೌಂಟರ್ ಆಫರ್ ನೀಡಿತು. ಉದ್ಯೋಗಿಯನ್ನು ಉಳಿಸಿಕೊಳ್ಳುವ ಕೊನೆಯ ಯತ್ನ ಇದಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು.

ಅಣ್ಣನ ಅಂತಿಮ ನಿರ್ಧಾರವೇನು?

ಪಾಂಡೆ ವಿವರಿಸುವಂತೆ, ಕಂಪನಿಯ ಈ ಆಫರ್ ತೀರಾ ತಡವಾಗಿತ್ತು. ಏಕೆಂದರೆ ಇದು ಕೇವಲ ಹಣದ ವಿಷಯವಾಗಿರಲಿಲ್ಲ. ವರ್ಷಗಳ ಕಾಲ ತನ್ನನ್ನು ಕಡೆಗಣಿಸಲಾಗಿದೆ ಮತ್ತು ತನ್ನ ಕೆಲಸಕ್ಕೆ ಬೆಲೆ ಸಿಕ್ಕಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿತ್ತು. ಹೀಗಾಗಿ ಅವರು ಅಧಿಕೃತವಾಗಿ ರಾಜೀನಾಮೆ ನೀಡುವ ಮೊದಲೇ ಮಾನಸಿಕವಾಗಿ ಆ ಸಂಸ್ಥೆಯಿಂದ ಹೊರಬಂದಿದ್ದರು.

ಜನರು ವಿರಳವಾಗಿ ಮಾತ್ರ ರಾತ್ರೋರಾತ್ರಿ ಅಥವಾ ಆತುರದಿಂದ ಕೆಲಸ ಬಿಡುತ್ತಾರೆ. ತಮ್ಮ ನಿಷ್ಠೆ ಮತ್ತು ಕಾರ್ಯಕ್ಷಮತೆಯ ಹೊರತಾಗಿಯೂ ವರ್ಷಗಳ ಕಾಲ ನಿರ್ಲಕ್ಷ್ಯ ಹಾಗೂ ಕಡೆಗಣನೆಗೆ ಒಳಗಾದಾಗ ಮಾತ್ರ ಉದ್ಯೋಗಿಗಳು ಸಂಸ್ಥೆಯನ್ನು ತೊರೆಯುವ ಕಠಿಣ ನಿರ್ಧಾರ ಮಾಡುತ್ತಾರೆ ಎಂಬ ಪಾಂಡೆ ಅವರ ಮಾತುಗಳು ಇಂದು ಆನ್‌ಲೈನ್‌ನಲ್ಲಿ ಅನೇಕ ವೃತ್ತಿಪರರ ಮನ ಮುಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+