ಕಾಮೆಡ್-ಕೆ ರಿಸಲ್ಟ್ ಔಟ್: ಟಾಪ್ 10ರಲ್ಲಿ ಕನ್ನಡಿಗರಿಗಿಲ್ಲ ಸ್ಥಾನ, ಉತ್ತರ ಭಾರತೀಯರದ್ದೇ ದರ್ಬಾರ್
ಬೆಂಗಳೂರು: COMEDK Result Out ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕಾಗಿ ನಡೆಸಲಾಗುವ ಕಾಮೆಡ್-ಕೆ ಯುಜಿಇಟಿ ಹಾಗೂ ಯೂನಿಗೇಜ್ 2026ನೇ ಸಾಲಿನ ಪ್ರವೇಶ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಆದರೆ, ಈ ಬಾರಿಯ ಫಲಿತಾಂಶದಲ್ಲಿ ಕನ್ನಡಿಗರಿಗೆ ತೀವ್ರ ನಿರಾಸೆಯಾಗಿದ್ದು, ಟಾಪ್ 10 ರ್ಯಾಂಕ್ಗಳ ಪಟ್ಟಿಯಲ್ಲಿ ರಾಜ್ಯದ ಒಬ್ಬನೇ ಒಬ್ಬ ವಿದ್ಯಾರ್ಥಿ ಸ್ಥಾನ ಪಡೆದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಮೊದಲ ಹತ್ತು ರ್ಯಾಂಕ್ಗಳು ಸಂಪೂರ್ಣವಾಗಿ ಹೊರ ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ.
ಕರ್ನಾಟಕದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಉದ್ದೇಶದಿಂದ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಈ ಬಾರಿ ಟಾಪ್ 10 ರ್ಯಾಂಕ್ ಪಟ್ಟಿಯಲ್ಲಿ ಜಾರ್ಖಂಡ್ ರಾಜ್ಯದ ವಿದ್ಯಾರ್ಥಿಗಳು ಭಾರಿ ಮೇಲುಗೈ ಸಾಧಿಸಿದ್ದಾರೆ. ಮೊದಲ ಹತ್ತು ರ್ಯಾಂಕ್ಗಳ ಪೈಕಿ ಬರೋಬ್ಬರಿ ಐದು ರ್ಯಾಂಕ್ಗಳನ್ನು ಜಾರ್ಖಂಡ್ ಮೂಲದ ವಿದ್ಯಾರ್ಥಿಗಳೇ ತಮ್ಮದಾಗಿಸಿಕೊಂಡಿದ್ದಾರೆ. ಉಳಿದ ಐದು ಸ್ಥಾನಗಳು ಕೂಡ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಒಲಿದಿವೆ. ರಾಜ್ಯದ ಮಟ್ಟಿಗೆ ಇದು ಕೊಂಚ ಬೇಸರದ ಸಂಗತಿ.

ಕಳೆದ ಕೆಲವು ವರ್ಷಗಳ ಫಲಿತಾಂಶಗಳನ್ನು ಗಮನಿಸಿದರೆ, ಕನಿಷ್ಠ ಎರಡು ಅಥವಾ ಮೂರು ಸ್ಥಾನಗಳನ್ನಾದರೂ ಕರ್ನಾಟಕದ ವಿದ್ಯಾರ್ಥಿಗಳು ಟಾಪ್ 10 ಪಟ್ಟಿಯಲ್ಲಿ ಕಾಯ್ದುಕೊಳ್ಳುತ್ತಿದ್ದರು. ಆದರೆ, ಈ ಬಾರಿ 11ರಿಂದ 50ನೇ ರ್ಯಾಂಕ್ ಒಳಗಿನ ಪಟ್ಟಿಯಲ್ಲಿ ಮಾತ್ರ ರಾಜ್ಯದ ಕೆಲವು ವಿದ್ಯಾರ್ಥಿಗಳು ಸ್ಥಾನ ಪಡೆದು ಸಮಾಧಾನಪಟ್ಟುಕೊಳ್ಳುವಂತಾಗಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳನ್ನು ಒಳಗೊಂಡ ಈ ಪ್ರವೇಶ ಪರೀಕ್ಷೆಯು ಈ ಬಾರಿ ಕೊಂಚ ಕಠಿಣವಾಗಿತ್ತು ಎಂಬ ಅಭಿಪ್ರಾಯವೂ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ವಲಯದಲ್ಲಿ ಕೇಳಿಬಂದಿತ್ತು.
ಫಲಿತಾಂಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ಹಂತವಾದ ಆನ್ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆಯು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕಾಮೆಡ್-ಕೆ ಆಡಳಿತ ಮಂಡಳಿ ತಿಳಿಸಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಯಲಿದ್ದು, ದಾಖಲೆಗಳ ಪರಿಶೀಲನೆ, ಸೀಟು ಹಂಚಿಕೆ ಮತ್ತು ಕಾಲೇಜು ಆಯ್ಕೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.
ಅಭ್ಯರ್ಥಿಗಳು ತಮ್ಮ ರ್ಯಾಂಕ್ ಕಾರ್ಡ್ಗಳನ್ನು ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಮುಂದಿನ ಪ್ರವೇಶಾತಿ ಪ್ರಕ್ರಿಯೆಗಳಿಗಾಗಿ ವಿದ್ಯಾರ್ಥಿಗಳು ಅಗತ್ಯ ಶೈಕ್ಷಣಿಕ ದಾಖಲೆಗಳು, ಗುರುತಿನ ಚೀಟಿ ಹಾಗೂ ಇತರ ಪ್ರಮಾಣಪತ್ರಗಳನ್ನು ಈಗಲೇ ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ಈ ವರ್ಷದಿಂದ ವರ್ಗಾವಣೆ ಪತ್ರ ಹಾಗೂ ಮಾರ್ಕ್ಸ್ ಕಾರ್ಡುಗಳನ್ನು ಡಿಜಿ ಲಾಕರ್ನಲ್ಲಿಯೇ ಪಡೆಯುವ ಅವಕಾಶವಿದ್ದು, ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಇಟ್ಟುಕೊಂಡರೆ ಪ್ರವೇಶ ಪ್ರಕ್ರಿಯೆ ಸುಲಭವಾಗಲಿದೆ.
ಸಿಇಟಿ ಫಲಿತಾಂಶ ಯಾವಾಗ?
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ಸಿಇಟಿ ಫಲಿತಾಂಶ ಜೂನ್ 1ರಂದು ಪ್ರಕಟವಾಗುವ ನಿರೀಕ್ಷೆ ಇದೆ. ಇಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು, ಡೀಮಡ್ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಸಿಇಟಿ ಫಲಿತಾಂಶ ತಡವಾದರೆ ವಿದ್ಯಾರ್ಥಿಗಳು, ಪೋಷಕರ ಆತಂಕ ಹೆಚ್ಚಾಗುತ್ತಲೇ ಹೋಗುತ್ತೆದ.
ಶಿಕ್ಷಣ ಇಲಾಖೆ ನೀಡಿರುವ ಬ್ರೋಷರ್ನಲ್ಲಿ ಕಾಲೇಜುಗಳು ಹಾಗೂ ಅಲ್ಲಿ ಲಭ್ಯವಿರುವ ಕೋರ್ಸ್ಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದು, ಅದನ್ನು ಚನ್ನಾಗಿ ಓದಿಕೊಂಡಿದ್ದರೆ ಒಳ್ಳೇದು.












Click it and Unblock the Notifications