IMD Weather Alert: ದೇಶದ ಈ ಭಾಗಗಳಲ್ಲಿ ಜ.7ರ ವರೆಗೆ ಶೀತ ಅಲೆ ಐಎಂಡಿ ಎಚ್ಚರಿಕೆ
ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಚಳಿ ಮುಂದುವರಿದಿದ್ದು, ವಿವಿಧ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ದೆಹಲಿ ಹಾಗೂ ಎನ್‌ಸಿಆರ್ ಭಾಗದಲ್ಲಿ ತೀವ್ರ ಚಳಿ ವಾತಾವರಣ ಇದೆ. ಮುಂದಿನ 7 ದಿನಗಳ ವರೆಗೆ ಈ ಭಾಗದಲ್ಲಿ ಭಾರೀ ಚಳಿ ಮುಂದುವರಿಯಲಿದೆ. ಕನಿಷ್ಠ ತಾಪಮಾನವು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಮತ್ತು ಶೀತ ಅಲೆಗಳು ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಪಂಜಾಬ್, ದೆಹಲಿ ಮತ್ತು ಹರಿಯಾಣದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಶೀತ ಅಲೆಗಳ ಇನ್ನೊಂದು ವಾರದಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಮುಂದಿನ 7 ದಿನಗಳಲ್ಲಿ ಉತ್ತರ ಭಾರತದಲ್ಲಿ ರಾತ್ರಿ ಮತ್ತು ಬೆಳಿಗ್ಗೆ ದಟ್ಟವಾದ ಮಂಜು ಆವರಿಸಿರಲಿದೆ. ರಾಷ್ಟ್ರ ರಾಜಧಾನಿಯಲ್ಲಿ ಬೆಳಿಗ್ಗೆ ದಟ್ಟವಾದ ಮತ್ತು ಅತಿ ದಟ್ಟವಾದ ಮಂಜಿನ ವಾತಾವರಣ ಇರಲಿದೆ.

ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಕನಿಷ್ಠ ತಾಪಮಾನವು ತೀವ್ರ ಕುಸಿತ ಕಾಣುವ ಸಾಧ್ಯತೆ ಇದೆ. ದಟ್ಟವಾದ ಮಂಜು ಆವರಿಸಿರುವುದು, ಗೋಚರತೆಯನ್ನು ಕಡಿಮೆ ಮಾಡುತ್ತದೆ ಮತ್ತು ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದಾಗ್ಯೂ ದೆಹಲಿಯಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಇನ್ನು ಜನವರಿ 4 ರಿಂದ 7 ರವರೆಗೆ ದೆಹಲಿಯ ಪ್ರತ್ಯೇಕ ಸ್ಥಳಗಳಲ್ಲಿ ಶೀತ ಅಲೆ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಉತ್ತರ ಭಾರತದಲ್ಲಿ ಭಾರೀ ಚಳಿ
ಇನ್ನು ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಇನ್ನೊಂದು ವಾರದ ಅವಧಿಗೆ ಭಾರೀ ನಿರ್ಣಾಯಕವಾಗಿರಲಿದೆ. ದೆಹಲಿಯು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಚಳಿ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ಚಳಿ ಹೆಚ್ಚಾಗುತ್ತಿರುವುದು ಹಾಗೂ ಮಳೆ ಆಗದೆ ಇರುವುದರಿಂದ ವಾಯುಮಾಲಿನ್ಯ ಪ್ರಮಾಣವು ಹೆಚ್ಚಳವಾಗುತ್ತಿದೆ. ವಿವಿಧ ಭಾಗಗಳಲ್ಲಿ ವಾಯುಮಾಲಿನ್ಯ ತೀವ್ರತೆಯು ಹೆಚ್ಚಾಗಿದೆ. ಪಂಜಾಬ್, ಹರಿಯಾಣ ಹಾಗೂ ಚಂಡೀಗಢ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ದಟ್ಟವಾದ ಮಂಜಿನ ಪರಿಸ್ಥಿತಿ ಇರಲಿದೆ.
ಜನವರಿ 7 ರವರೆಗೆ ಉತ್ತರ ಪ್ರದೇಶ, ಜನವರಿ 8 ರವರೆಗೆ ರಾಜಸ್ಥಾನ, ಒಡಿಶಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತೀವ್ರ ಚಳಿ ಇರಲಿದೆ. ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಬಿಹಾರದಲ್ಲೂ ಶೀತಗಾಳಿ ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ತೀವ್ರ ಸ್ವರೂಪವನ್ನು ಪಡೆದು ಕೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಜನವರಿ 7 ರವರೆಗೆ ಶೀತ ಹವಾಮಾನದ ಮುನ್ಸೂಚನೆ ನೀಡಲಾಗಿದೆ. ಜನವರಿ 5 ಮತ್ತು 8 ರವರೆಗೆ ರಾಜಸ್ಥಾನದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ದಕ್ಷಿಣ ಭಾರತದಲ್ಲಿ ಹೇಗಿದೆ ಹವಾಮಾನ
ಇನ್ನು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಚಳಿ ಹಾಗೂ ಒಣಹವೆ ಮುಂದುವರಿದಿದೆ. ಸಂಕ್ರಾಂತಿ ಸಮಯದಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ಭಾಗದಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ ಎಂದು ಐಎಂಡಿ ವರದಿ ಉಲ್ಲೇಖಿಸಿದೆ.












Click it and Unblock the Notifications