Cockroach Janata Party: ಅಭಿಜೀತ್ ದೀಪ್ಕೆ - ಸಿಜೆಪಿಗೆ ಎಲ್ಲಿಂದ ಫಂಡ್ ಬರ್ತಿದೆ ಎನ್ನುವ ವಿಷಯ ರಿವೀಲ್ ಮಾಡಿದ ಬಿಜೆಪಿ!
ಕಾಕ್ರೋಚ್ ಜನತಾ ಪಾರ್ಟಿಗೆ ಎಲ್ಲಿಂದ ಅನುದಾನ ಬರುತ್ತಿದೆ ಎನ್ನುವ ವಿಚಾರವು ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಕಾಕ್ರೋಚ್ ಜನತಾ ಪಾರ್ಟಿಯು ದೇಶದಾದ್ಯಂತ ಬೃಹತ್ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. ಈ ರೀತಿ ದೊಡ್ಡ ದೊಡ್ಡ ಅಭಿಯಾನಗಳನ್ನು ಹಮ್ಮಿಕೊಳ್ಳುವುದಕ್ಕೆ ಕಾಕ್ರೋಚ್ ಜನತಾ ಪಾರ್ಟಿಗೆ ಎಲ್ಲಿಂದ ಅನುದಾನ ಬರ್ತಿದೆ ಎನ್ನುವ ಪ್ರಶ್ನೆ ಎದುರಾಗುತ್ತಲ್ಲೇ ಇದೆ. ಇದೀಗ ಈ ವಿಚಾರದ ಬಗ್ಗೆ ಬಿಜೆಪಿ ಹೊಸ ಬಾಂಬ್ ಸಿಡಿಸಿದೆ. ಸಿಜೆಪಿ ಪಕ್ಷಕ್ಕೆ ಅನುದಾನ ಎಲ್ಲಿಂದ ಬರುತ್ತಿದೆ ಎನ್ನುವ ವಿಷಯವನ್ನು ರಿವೀಲ್ ಮಾಡಿದೆ. ಕಾಕ್ರೋಚ್ ಜನತಾ ಪಾರ್ಟಿಯ ಅನುದಾನ ಹಾಗೂ ಇದರ ಸಂಸ್ಥಾಪಕ ಅಭಿಜೀತ್ ದೀಪ್ಕೆಯ ಬಗ್ಗೆ ಬಿಜೆಪಿ ಹೇಳಿರುವುದೇನು ಎನ್ನುವ ವಿವರ ಇಲ್ಲಿದೆ.
ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅಮೆರಿಕದಿಂದ ಹಣವನ್ನು ಪಡೆದಿದ್ದು, ಅದರ ಸಹ-ಸಂಸ್ಥಾಪಕ ಅಶುತೋಷ್ ರಾಂಕಾ ಪಾಕಿಸ್ತಾನದಿಂದ ಹಣ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಮೊದಲಿನಿಂದಲೂ ಕಾಕ್ರೋಚ್ ಜನತಾ ಪಾರ್ಟಿಯು ವಿದೇಶದಿಂದ ಅದರಲ್ಲೂ ಮುಖ್ಯವಾಗಿ ಶತ್ರು ರಾಷ್ಟ್ರಗಳಿಂದ ಅನುದಾನ ಪಡೆದುಕೊಳ್ಳುತ್ತಿದೆ.

ಪಾಕಿಸ್ತಾನಿ ರಾಜಕಾರಣಿಗಳು ಸೇರಿದಂತೆ ಭಾರತ ವಿರೋಧಿ ಸಂಘಟನೆಗಳು ಅನುದಾನ ನೀಡುತ್ತಿವೆ. ಅಲ್ಲದೆ ವಿದೇಶಿ ಅನುದಾನಿತ ಸಂಸ್ಥೆಗಳು ಸಹ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ವಿರುದ್ಧದ ಹೋರಾಟಕ್ಕೆ ಹಣಕಾಸಿನ ನೆರವು ನೀಡುತ್ತಿವೆ ಎಂದು ಕೇಂದ್ರ ಸಚಿವರು ಗಂಭೀರ ಆರೋಪ ಮಾಡಿದ್ದಾರೆ.
ಎಸ್‌ಐಆರ್‌ನ ಬಗ್ಗೆ ತೇಜಸ್ವಿ ಸೂರ್ಯ ಹೇಳಿದ್ದೇನು
ಇನ್ನು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದೇ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಮೂಲ ಉದ್ದೇಶವಾಗಿದೆ. ಕರ್ನಾಟಕದ ಕಾಂಗ್ರೆಸ್ ಸಚಿವರೊಬ್ಬರು ಆರಂಭದಲ್ಲಿ SIR ಪ್ರಕ್ರಿಯೆಯನ್ನು ಶ್ಲಾಘಿಸಿದ್ದರು. ಆದರೆ, ತಮ್ಮದೇ ಪಕ್ಷದೊಳಗಿನ ಒತ್ತಡಕ್ಕೆ ಮಣಿದು ಬಳಿಕ ತಮ್ಮ ನಿಲುವು ಬದಲಿಸಿಕೊಂಡರು.
ಕೇರಳದಲ್ಲಿಯೂ ಕಾಂಗ್ರೆಸ್ ನಾಯಕರೊಬ್ಬರು SIR ಪ್ರಕ್ರಿಯೆಯಿಂದ ಸುಮಾರು ಒಂದು ಕೋಟಿ ನಕಲಿ ಮತದಾರರನ್ನು ತೆಗೆದುಹಾಕಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಕೇರಳದಲ್ಲಿ SIR ಪ್ರಕ್ರಿಯೆಯನ್ನು ಶ್ಲಾಘಿಸುವ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಅದನ್ನೇ ಪ್ರಶ್ನಿಸುತ್ತದೆ.
ಚುನಾವಣಾ ಸುಧಾರಣೆಗಳ ಕುರಿತ ಕಾಂಗ್ರೆಸ್‌ನ ನಿಲುವು, ಆ ಪಕ್ಷ ಗೆಲ್ಲುತ್ತದೆಯೋ ಅಥವಾ ಸೋಲುತ್ತದೆಯೋ ಎಂಬುದರ ಮೇಲೆ ನಿರ್ಧಾರವಾಗುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಗೆದ್ದಾಗ ಜನಾದೇಶವನ್ನು ಒಪ್ಪಿಕೊಂಡು, ಸೋತಾಗ ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸುವುದು ಯಾವ ರೀತಿಯ ರಾಜಕೀಯ? ದೇಶಕ್ಕೆ ಬೇಕಿರುವುದು ಜವಾಬ್ದಾರಿಯುತ ಪ್ರತಿಪಕ್ಷವೇ ಹೊರತು, ರಾಜಕೀಯ ಲಾಭ-ನಷ್ಟಕ್ಕೆ ತಕ್ಕಂತೆ ನಿಲುವು ಬದಲಿಸುವ ಪ್ರತಿಪಕ್ಷವಲ್ಲ ಎಂದೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದೇನು ?
ಜ್ಞಾನೇಶ್ ಕುಮಾರ್ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವನ್ನು ಈಗ ರದ್ದುಗೊಳಿಸಲಾಗಿದೆ. ಆದರೆ ಆ ನಿರ್ಧಾರಗಳನ್ನು ರದ್ದುಗೊಳಿಸುವುದು ಇನ್ನೂ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಅವರ ಕ್ರಮಗಳು ರದ್ದುಗೊಳಿಸುವಷ್ಟು ಗಂಭೀರವಾಗಿದ್ದರೆ, ಅದಕ್ಕೆ ಕಾರಣರಾದ ವ್ಯಕ್ತಿಗೆ ಪರಿಣಾಮಗಳು ಉಂಟಾಗಬೇಕಲ್ಲವೇ?
ಮತ್ತು ಹೆಚ್ಚು ಮುಖ್ಯವಾಗಿ ರಿತಿಕಾ ಚೋಪ್ರಾ ಅವರು ಇದನ್ನು ಎಂದಿಗೂ ಬಹಿರಂಗಪಡಿಸದಿದ್ದರೆ ಏನಾಗುತ್ತಿತ್ತು? ಸಾರ್ವಜನಿಕ ಆಕ್ರೋಶ ಇಲ್ಲದಿದ್ದರೆ ಏನಾಗುತ್ತಿತ್ತು? ಈ ನಿರ್ಧಾರಗಳು ಎಂದಾದರೂ ರದ್ದುಗೊಳಿಸಲ್ಪಡುತ್ತಿದ್ದವೇ? ಯಾರೂ ಬಹಿರಂಗಪಡಿಸದ ಕಾರಣ ಅಂತಹ ಎಷ್ಟು ನಿರ್ಧಾರಗಳು ಪ್ರಶ್ನಾತೀತವಾಗುತ್ತವೆಯೇ ಎಂದೂ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ವಿಚಾರವಾಗಿ ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications
