Chhattisgarh Election 2023: ಛತ್ತೀಸ್‌ಗಢದಲ್ಲಿ ನಾಳೆ 20 ಸ್ಥಾನಗಳಿಗೆ ಮತದಾನ
ರಾಯ್‌ಪುರ ನವೆಂಬರ್ 6: ಛತ್ತೀಸ್‌ಗಢದಲ್ಲಿ 2023ರ ವಿಧಾನಸಭಾ ಚುನಾವಣೆಗೆ ನವೆಂಬರ್ 7ರಂದು ಮತದಾನ ನಡೆಯಲಿದೆ. ಇಲ್ಲಿನ 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು ಈ ಸ್ಥಾನಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
ಛತ್ತೀಸ್ ಘಡದಲ್ಲಿ ನವೆಂಬರ್ 7 ಮತ್ತು 17ರಂದು 2 ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ಹಂತದಲ್ಲಿ ಬಸ್ತಾರ್ ವಿಭಾಗದ ಎಲ್ಲಾ 12 ಸ್ಥಾನಗಳು ಮತ್ತು ರಾಜನಂದಗಾಂವ್ ಲೋಕಸಭಾ ಕ್ಷೇತ್ರದ ಎಂಟು ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿ ಒಟ್ಟು 223 ಅಭ್ಯರ್ಥಿಗಳಿದ್ದು ಅವರ ಭವಿಷ್ಯ ನಿರ್ಧಾರವಾಗಲಿದೆ.

ಈ 20 ಸ್ಥಾನಗಳಲ್ಲಿ ಮತದಾನದ ಸಮಯ ವಿಭಿನ್ನವಾಗಿದೆ. ಅಂದರೆ 10 ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ. ಇನ್ನುಳಿದ 10 ಕ್ಷೇತ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮೊಹ್ಲಾ-ಮಾನ್‌ಪುರ, ಅಂತಗಢ, ಭಾನುಪ್ರತಾಪುರ್, ಕಂಕೇರ್, ಕೇಶ್ಕಲ್, ಕೊಂಡಗಾಂವ್, ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಟಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ.
ಆದರೆ ಜಗದಲ್‌ಪುರ, ಚಿತ್ರಕೋಟ್, ಬಸ್ತಾರ್, ಪಾಂಡರಿಯಾ, ಕವರ್ಧಾ, ಖೈರಗಢ, ಡೊಂಗರ್‌ಗಢ, ರಾಜನಂದಗಾಂವ್, ಡೊಂಗರ್‌ಗಾಂವ್, ಖುಜ್ಜಿ ಕ್ಷೇತ್ರಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ. ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಒಂದೊಂದು ಸ್ಥಾನಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದ್ದರೂ ಈ ಭಾಗದ 12 ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ಹೈ ಪ್ರೊಫೈಲ್ ಎಂದು ಪರಿಗಣಿಸಲಾಗಿದೆ. ಏಕೆಂದರೆ ಸಚಿವರು, ಮಾಜಿ ಸಚಿವರು ಮತ್ತು ಹಿರಿಯ ಶಾಸಕರ ಪ್ರತಿಷ್ಠೆ ಅಪಾಯದಲ್ಲಿದೆ. ಕಾಂಗ್ರೆಸ್‌ನಿಂದ ಹಾಲಿ ಸಚಿವರಾದ ಕವಾಸಿ ಲಖ್ಮಾ ಕೊಂಟಾ ಮತ್ತು ಮೋಹನ್ ಮಾರ್ಕಂ ಕೊಂಡಗಾಂವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಬಸ್ತಾರ್ ಕ್ಷೇತ್ರದಿಂದ ಕ್ಯಾಬಿನೆಟ್ ಸಚಿವ ಸ್ಥಾನಮಾನ ಹೊಂದಿರುವ ಹಿರಿಯ ಶಾಸಕ ಮತ್ತು ಬಸ್ತಾರ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಖೇಶ್ವರ್ ಬಘೇಲ್, ಚಿತ್ರಕೋಟ್‌ನಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ದೀಪಕ್ ಬೈಜ್ ಮತ್ತು ಕೇಶ್ಕಲ್ ಕ್ಷೇತ್ರದಿಂದ ವಿಧಾನಸಭಾ ಉಪ ಸ್ಪೀಕರ್ ಸಂತ್ರಮ್ ನೇತಮ್ ಅವರ ಭವಿಷ್ಯ ಅತಂತ್ರವಾಗಿದೆ.
ಅದೇ ರೀತಿ ಬಿಜೆಪಿ ನಾಯಕರಲ್ಲಿ ಮಾಜಿ ಸಚಿವರಾದ ವಿಕ್ರಮ್ ಉಸೇಂದಿ ಅಂತಗಢದಿಂದ, ಲತಾ ಉಸೇಂದಿ ಕೊಂಡಗಾಂವ್‌ನಿಂದ, ಕೇದಾರ್ ಕಶ್ಯಪ್ ನಾರಾಯಣಪುರದಿಂದ ಮತ್ತು ಮಹೇಶ್ ಗಗ್ಡಾ ಬಿಜಾಪುರದಿಂದ ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ ಈ ಕ್ಷೇತ್ರಗಳತ್ತ ಎಲ್ಲರ ಚಿತ್ತ ನೆಟ್ಟಿದೆ.












Click it and Unblock the Notifications