ಚೆನ್ನೈ: 9 ಶಾಖೆಗಳೊಂದಿಗೆ ನಕಲಿ ಬ್ಯಾಂಕ್ ನಡೆಸುತ್ತಿದ್ದ ವ್ಯಕ್ತಿ ಬಂಧನ
ಚೆನ್ನೈ, ನವೆಂಬರ್ 10: ಬರೋಬ್ಬರಿ ಒಂದು ವರ್ಷದಿಂದಲೂ ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ 9 ಶಾಖೆಗಳೊಂದಿಗೆ ನಕಲಿ ಬ್ಯಾಂಕ್ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಂ (ಯುಕೆ) ನಲ್ಲಿ ಓದಿಕೊಂಡು ಬಂದಿದ್ದ ಥೌಸಂಡ್ ಲೈಟ್ಸ್‌ನ ಚಂದ್ರಬೋಸ್ (42) ಎಂಬ ಎಂಬಿಎ ಪದವೀಧರನೊಬ್ಬ ಬ್ಯಾಂಕ್ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಇದಕ್ಕೆ ಗ್ರಾಮೀಣ ಕೃಷಿ ರೈತರ ಸಹಕಾರಿ (ಆರ್‌ಎಎಫ್‌ಸಿ) ಬ್ಯಾಂಕ್ ಎಂದು ಹೆಸರಿಸಲಾಗಿದ್ದು, ಚಂದ್ರಬೋಸ್ ಅವರು ಚೆನ್ನೈನ ಅಂಬತ್ತೂರು ಮತ್ತು ತಮಿಳುನಾಡಿನಾದ್ಯಂತ ಎಂಟು ಸ್ಥಳಗಳಲ್ಲಿ ಬ್ಯಾಂಕ್ ಅನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಆತ ತಮ್ಮ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ ಎಂದು ಹೇಳುವ ಮೂಲಕ ಜನರಿಂದ ಠೇವಣಿ ಸಂಗ್ರಹಿಸುತ್ತಿದ್ದನು.
ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರೊಬ್ಬರ ದೂರಿನ ಆಧಾರದ ಮೇಲೆ ಕೇಂದ್ರೀಯ ಅಪರಾಧ ವಿಭಾಗ (ಸಿಸಿಬಿ), ಅಂಬತ್ತೂರಿನ ವಿಜಿಎನ್ ಬ್ರೆಂಟ್ ಪಾರ್ಕ್‌ನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶೋಧ ನಡೆಸಿತ್ತು. ಬಳಿಕ ಕಚೇರಿಯಲ್ಲಿದ್ದ ದಾಖಲೆಗಳನ್ನು ಹಾಗೂ ಚಂದ್ರಬೋಸ್ ಒಡೆತನದ ಐಷಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಸಿಬಿಯಿಂದ ಬಂಧನಕ್ಕೊಳಗಾದ ಚಂದ್ರಬೋಸ್ ಅವರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗ್ರಾಮೀಣ ಕೃಷಿ ರೈತರ ಸಹಕಾರಿ ಬ್ಯಾಂಕ್ ಹೆಸರು
ಚಂದ್ರಬೋಸ್ ಎಂಬಾತ ನಕಲಿ ಪ್ರಮಾಣಪತ್ರವನ್ನು ತಯಾರಿಸಿ ಅದನ್ನು ಆರ್‌ಬಿಐ ನೀಡಿದೆ ಎಂದು ಹೇಳಿಕೊಂಡು ತಮಿಳುನಾಡು ರಾಜ್ಯಾದ್ಯಂತ 9 ಸ್ಥಳಗಳಲ್ಲಿ ಗ್ರಾಮೀಣ ಕೃಷಿ ರೈತರ ಸಹಕಾರಿ ಬ್ಯಾಂಕ್ ಹೆಸರಿನಲ್ಲಿ ಶಾಖೆಗಳನ್ನು ತೆರೆದಿದ್ದದನು. ಇದು ತಿರುವಣ್ಣಾಮಲೈ, ತಿರುಮಂಗಲಂ (ಮಧುರೈ), ಸೇಲಂ, ಈರೋಡ್, ನಾಮಕ್ಕಲ್, ಕಲ್ಲಕುರಿಚಿ, ವೃದ್ಧಾಚಲಂ ಮತ್ತು ಪೆರಂಬಲೂರಿನಲ್ಲಿ ಕಾರ್ಯನಿರ್ವಹಿಸುತ್ತಿತು ಎಂದು ಚೆನ್ನೈ ನಗರ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡ್ ಸಂಖ್ಯೆಯೇ ಖಾತೆ ಸಂಖ್ಯೆ
700 ರೂ.ಗಳನ್ನು ಸದಸ್ಯತ್ವ ಶುಲ್ಕವಾಗಿ ಸಂಗ್ರಹಿಸುವುದು ಬ್ಯಾಂಕಿನ ಕ್ರಮವಾಗಿತ್ತು. ಅಲ್ಲದೆ ಈ ಬ್ಯಾಂಕ್ ಗ್ರಾಹಕರಿಗೆ 500 ರೂ.ಗಳ ಬ್ಯಾಲೆನ್ಸ್‌ನೊಂದಿಗೆ ಕ್ರೆಡಿಟ್, ಡೆಬಿಟ್ ಕಾರ್ಡ್ ಅನ್ನು ನೀಡಿ ಕಾರ್ಡ್ ಸಂಖ್ಯೆಗಳನ್ನು ಬ್ಯಾಂಕ್ ಖಾತೆ ಸಂಖ್ಯೆಯಾಗಿ ನೀಡಲಾಗುತ್ತಿತ್ತು. 9 ಸ್ಥಳಗಳಲ್ಲಿನ ಶಾಖೆಗಳಲ್ಲಿ ವಿವಿಧ ಯೋಜನೆಗಳಡಿ ಮತ್ತು ಸಾಲಕ್ಕಾಗಿ ಬ್ಯಾಂಕ್ ಗ್ರಾಹಕರಿಂದ ಹಣ ಸಂಗ್ರಹಿಸಿದ್ದರಿಂದ 2 ಕೋಟಿ ರೂ. ಸಂಗ್ರಹಿಸಲಾಗಿತ್ತು. ಇದು ಇತರ ಬ್ಯಾಂಕ್‌ಗಳಂತೆ ಬ್ಯಾಂಕ್ ಪಾಸ್‌ಬುಕ್‌ಗಳನ್ನು ನೀಡಲಾಗಿತ್ತು. ತನ್ನದೇ ಆದ ಬ್ಯಾಂಕ್ ಚೀಟಿಗಳು, ಠೇವಣಿ ಚೀಟಿಗಳು, ರಬ್ಬರ್ ಸ್ಟ್ಯಾಂಪ್‌ಗಳು ಮತ್ತು ಕೆವೈಸಿ ಫಾರ್ಮ್‌ಗಳನ್ನು ಹೊಂದಿತ್ತು ಮತ್ತು ಅದರ ಘಟಕದಲ್ಲಿ ಸ್ಥಿರ ಠೇವಣಿಗಳಂತಹ ವಿಶೇಷ ಹೂಡಿಕೆ ಯೋಜನೆಗಳನ್ನು ಹೊಂದಿತ್ತು ಎಂದು ಆಯುಕ್ತರು ತಿಳಿಸಿದರು.

ಆರ್‌ಬಿಐ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಕ್ರಮ
ಬ್ಯಾಂಕ್ ಗ್ರಾಹಕರು ಈ ಬಗ್ಗೆ ಯಾವುದೇ ದೂರುಗಳನ್ನು ನೀಡಿಲ್ಲ. ಆದರೆ ಆರ್‌ಬಿಐ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಸಂಶೋಧನೆ ನಡೆಸಲಾಗಿದೆ. ಆರೋಪಿಯು ತನ್ನ ಬ್ಯಾಂಕ್ ಗ್ರಾಹಕರಿಗೆ ಆರ್‌ಎಎಫ್‌ಸಿ ಸೊಸೈಟಿ ಹೆಸರಿನಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದಿದ್ದನು. ನಂತರ ಕಾರ್ಡ್‌ಗಳ ಮೇಲೆ ಆರ್‌ಎಎಫ್‌ಸಿ ಬ್ಯಾಂಕ್ ಸ್ಟಿಕ್ಕರ್‌ಗಳನ್ನು ಹಾಕಿ ಗ್ರಾಹಕರಿಗೆ ವಿತರಿಸಿದ್ದನು.

ಹಣವನ್ನು ಐಸಿಐಸಿಐ ಬ್ಯಾಂಕ್‌ನಲ್ಲಿಟ್ಟಿದ್ದನು
ಈ ಬಗ್ಗೆ ಹೆಚ್ಚಿನ ತನಿಖೆ ಮತ್ತು ಲೆಕ್ಕಪರಿಶೋಧನೆಯು ಈ ಬ್ಯಾಂಕ್‌ನಿಂದ ಎಷ್ಟು ಹಣದ ವಹಿವಾಟು ನಡೆಸುತ್ತಿದೆ ಎಂಬುದನ್ನು ತಿಳಿಯಬೇಕಿದೆ. ತನ್ನ ಹಣವನ್ನು ಐಸಿಐಸಿಐ ಬ್ಯಾಂಕ್‌ನಲ್ಲಿ ಇಟ್ಟಿದ್ದನು. ಮುಂದಿನ ತನಿಖೆಯಿಂದ ಅವನು ತನ್ನ ಬ್ಯಾಂಕ್ ಅನ್ನು ಎಲ್ಲಿ ಎಷ್ಟು ಶಾಖೆಗಳನ್ನು ನಡೆಸುತ್ತಿದ್ದನು ಎಂಬುದನ್ನು ಬಹಿರಂಗಪಡಿಸಬೇಕಿದೆ ಎಂದು ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications